ವಾಷಿಂಗ್ಟನ್: ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್‌ನನ್ನು ವಾಯುದಾಳಿ ನಡೆಸಿ ಹತ್ಯೆ ನಡೆದಿರುವ ಬೆನ್ನಲ್ಲೇ ಭಾರೀ ಬೆದರಿಕೆ ಎದುರಿಸುತ್ತಿರುವ ಇಸ್ರೇಲ್(Israel)ಗೆ ಇದೀಗ ಬೆಂಗಾವಲಾಗಿ ನಿಲ್ಲಲು ಅಮೆರಿಕ ಮುಂದಾಗಿದೆ. ಇರಾನ್(Iran), ಹಮಾಸ್(Hamas) ಮತ್ತು ಹಿಜ್ಬುಲ್ ಉಗ್ರ ಸಂಘಟನೆಗಳಿಂದ ಬೆದರಿಕೆಯನ್ನು ಎದುರಿಸುತ್ತಿರುವ ಕಾರಣ, ಮಧ್ಯಪ್ರಾಚ್ಯದಲ್ಲಿ ಯುಎಸ್ ಮಿಲಿಟರಿ ಹೆಚ್ಚುವರಿ ಯುದ್ಧ ವಿಮಾನಗಳು ಮತ್ತು ನೌಕಾಪಡೆಯ ಯುದ್ಧನೌಕೆಗಳನ್ನು(US Military) ನಿಯೋಜಿಸಲಿದೆ ಎಂದು ಪೆಂಟಗನ್ ಶುಕ್ರವಾರ (ಆಗಸ್ಟ್ 2) ದೃಢಪಡಿಸಿದೆ.
ನೌಕಾಪಡೆಯ ಕ್ರೂಸರ್‌ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ವಿಧ್ವಂಸಕಗಳನ್ನು ಈ ಪ್ರದೇಶಕ್ಕೆ ಕಳುಹಿಸುವ ನಿರ್ಧಾರವನ್ನು US ರಕ್ಷಣಾ ಕಾರ್ಯದರ್ಶಿ ಲ್ಯೋಡ್ ಆಸ್ಟಿನ್ ಅನುಮೋದಿಸಿದರು. ವಾಷಿಂಗ್ಟನ್ ಹೆಚ್ಚುವರಿ ಸ್ಕ್ವಾಡ್ರನ್ ಫೈಟರ್ ಜೆಟ್‌ಗಳನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲಿದೆ.ಆ ಮೂಲಕ ಅಮೆರಿಕ ಇರಾನ್, ಹಮಾಸ್, ಹಿಜ್ಬುಲ್ಲಾ ದಾಳಿಯಿಂದ ಇಸ್ರೇಲ್ ರಕ್ಷಿಸಲು ಭದ್ರಕೋಟೆ ನಿರ್ಮಿಸಿದೆ.
ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್‌ನನ್ನು ವಾಯುದಾಳಿ ನಡೆಸಿ ಹತ್ಯೆ ನಡೆದಿರುವ ಬೆನ್ನಲ್ಲೇ ಇಸ್ರೇಲ್ ಮೇಲೆ ನೇರ ವೈಮಾನಿಕ ದಾಳಿ ನಡೆಸಿ ಹೊಡೆದುರುಳಿಸುವಂತೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಆದೇಶ ನೀಡಿದ್ದಾನೆ. ಹನಿಯೆಹ್ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳಲು ಪಣ ತೊಟ್ಟಿರುವ ಇರಾನ್ ಶೀಘ್ರದಲ್ಲಿ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಲಿದೆ ಎಂಬ ಬಗ್ಗೆ ಅಲ್ಲಿನ ಮಾಧ್ಯಮಗಳು ಈಗಾಗಲೇ ವರದಿ ಮಾಡಿವೆ.
ಬುಧವಾರ ಬೆಳಗ್ಗೆ ಅಯತೊಲ್ಲಾ ಅಲಿ ಖಮೇನಿ ಇರಾನ್‌ನ ಸುಪ್ರೀಂ ನ್ಯಾಶನಲ್ ಸೆಕ್ಯುರಿಟಿ ಕೌನ್ಸಿಲ್‌ನ ತುರ್ತು ಸಭೆಯಲ್ಲಿ ಖಮೇನಿ ಈ ಆದೇಶವನ್ನು ನೀಡಿದರು. ಇನ್ನು ಹನಿಯೆಹ್ ಹತ್ಯೆಗೆ ಇರಾನ್ ಮತ್ತು ಹಮಾಸ್ ನೇರವಾಗಿ ಇಸ್ರೇಲ್ ಅನ್ನು ಹೊಣೆಯಾಗಿಸಿದೆ. ಆದರೆ ಈ ದಾಳಿಯ ಹೊಣೆಯನ್ನು ಇದುವರೆಗೆ ಇಸ್ರೇಲ್ ಒಪ್ಪಿಕೊಂಡಿಲ್ಲ. ಅಲ್ಲದೇ ನಿರಕಾರಿಸಿಯೂ ಇಲ್ಲ.
ಇರಾನ್ ಅಧ್ಯಕ್ಷರಾಗಿ ಆಯ್ಕೆಯಾದ ಮಸೌದ್ ಪೆಜೆಸ್ಕಿಯಾನ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಂಗಳವಾರ (ಜುಲೈ 30) ಇಸ್ಮಾಯಿಲ್ ಹನಿಯೆಹ್ ಕೂಡ ಭಾಗವಹಿಸಿದ್ದ. ಹಮಾಸ್ ಉಗ್ರರಿಗೆ ಇರಾನ್‌ನಲ್ಲಿ ತರಬೇತಿ, ಹಣಕಾಸು ನೆರವು ಸೇರಿ ಹಲವು ರೀತಿಯಲ್ಲಿ ಸಹಕಾರ ಸಿಗುತ್ತಿರುವ ಕಾರಣ ಇಸ್ಮಾಯಿಲ್ ಹನಿಯೆಹ್ ಇರಾನ್‌ಗೆ ತೆರಳಿದ್ದ. ಇದರ ಮಧ್ಯೆಯೇ ಆತ ಮಂಗಳವಾರ (ಜುಲೈ 30) ಸುದ್ದಿಗಾರರೊಂದಿಗೆ ಮಾತನಾಡಿದ್ದ. ಇಸ್ರೇಲ್ ದಾಳಿ, ಇರಾನ್ ಜತೆಗಿನ ಒಪ್ಪಂದ ಸೇರಿ ಹಲವು ವಿಷಯಗಳ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ್ದ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಒಂದು ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಪ್ರತಿದಾಳಿ ಆರಂಭಿಸಿದ್ದು, ಗಾಜಾದಲ್ಲಿ ಇದುವರೆಗೆ ಇಸ್ರೇಲ್ ದಾಳಿಗೆ 39,400 ಮಂದಿ ಮೃತಪಟ್ಟಿದ್ದಾರೆ. ಸುಮಾರು 90 ಸಾವಿರ ಜನ ಗಾಯಗೊಂಡಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಹಮಾಸ್ ಉಗ್ರರ ಜತೆಗೆ ಹಮಾಸ್ ಉಗ್ರ ಸಂಘಟನೆಯ ಪ್ರಮುಖ ನಾಯಕರನ್ನು ಇಸ್ರೇಲ್ ಯೋಧರು ಹುಡುಕಿ ಹುಡುಕಿ ಕೊಲ್ಲುತ್ತಿದ್ದಾರೆ.
ಇದನ್ನೂ ಓದಿ: Mohammed Deif: ಹಮಾಸ್ ಉಗ್ರರಿಗಿಲ್ಲ ಉಳಿಗಾಲ; ಹಮಾಸ್ ಮಿಲಿಟರಿ ಚೀಫ್‌ನನ್ನೂ ಕೊಂದ ಇಸ್ರೇಲ್!