ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ (US President Election) ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಎರಡೂ ಪ್ರಮುಖ ಪಕ್ಷಗಳಲ್ಲಿ ನಡೆಯುತ್ತಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ರಿಪಬ್ಲಿಕನ್ ಪಕ್ಷದ ಆಂತರಿಕ ಮತದಾನಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.
ಮಂಗಳವಾರ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದ ರಿಪಬ್ಲಿಕನ್ ಪ್ರೈಮರಿ ಮತದಾನದಲ್ಲಿ ಟ್ರಂಪ್ ಗೆದ್ದರು. ಅವರ ಪ್ರತಿಸ್ಪರ್ಧಿ ನಿಕ್ಕಿ ಹ್ಯಾಲಿಯನ್ನು ಸೋಲಿಸಿದರು. ಶ್ವೇತಭವನಕ್ಕೆ ಎರಡನೇ ಬಾರಿ ಆಯ್ಕೆಯಾಗುವ ತಮ್ಮ ಕನಸಿನತ್ತ ಟ್ರಂಪ್ ಮುನ್ನಡೆದಿದ್ದು, ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನವನ್ನು ಹೊಂದುವತ್ತ ತಮ್ಮ ಮೆರವಣಿಗೆಯನ್ನು ಮುಂದುವರಿಸಿದ್ದಾರೆ.
“ನಾನು ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಲು ಬಯಸುತ್ತೇನೆ. ಆದರೆ ನನ್ನ ಹೋರಾಟ ಮುಗಿದಿಲ್ಲ” ಎಂದು ನಿಕ್ಕಿ ಹ್ಯಾಲಿ ಹೇಳಿದ್ದಾರೆ. ನ್ಯೂ ಹ್ಯಾಂಪ್‌ಶೈರ್ ಪ್ರಾಥಮಿಕ ಚುನಾವಣೆಗಳು ಡೊನಾಲ್ಡ್ ಟ್ರಂಪ್ ಮತ್ತು ನಿಕ್ಕಿ ಹ್ಯಾಲಿ ನಡುವಿನ ನಿರ್ಣಾಯಕ ಯುದ್ಧಭೂಮಿಯಾಗಿ ಹೊರಹೊಮ್ಮಿವೆ. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಹಾಗೂ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಸ್ಪರ್ಧೆಯಿಂದ ಹಿಂದೆ ಸರಿದು ಟ್ರಂಪ್ ಅವರನ್ನು ಅನುಮೋದಿಸುವ ಮೂಲಕ ಸ್ಪರ್ಧೆ ಟ್ರಂಪ್- ಹ್ಯಾಲಿ ನಡುವೆ ಉಂಟಾಗಿದೆ.
ಹ್ಯಾಲಿ ಅವರ ತವರು ರಾಜ್ಯವಾದ ದಕ್ಷಿಣ ಕೆರೊಲಿನಾದಲ್ಲಿ ಲೀಡ್ ಪಡೆಯುವ ಸಾಧ್ಯತೆಯೂ ಇದೆ. ಟ್ರಂಪ್‌ರ ಪ್ರಬಲ ಮುನ್ನಡೆಯ ವಿರುದ್ಧ ಹ್ಯಾಲಿಗೆ ಇನ್ನಷ್ಟು ಬಲವಾದ ಪ್ರದರ್ಶನ ಅಗತ್ಯವಿದೆ. ಟ್ರಂಪ್ ಕಾನೂನು ಸವಾಲುಗಳು, ದೋಷಾರೋಪಣೆಗಳು ಮತ್ತು ಪ್ರಕ್ಷುಬ್ಧ ಅಧ್ಯಕ್ಷೀಯ ಅವಧಿಯ ನೆನಪುಗಳ ಹೊರತಾಗಿಯೂ ಗಮನಾರ್ಹ ಆರಂಭಿಕ ವಿಜಯ ಪಡೆದಿದ್ದಾರೆ.
ರಿಪಬ್ಲಿಕನ್ ಅಭ್ಯರ್ಥಿಯಾಗುವವರು ಅಂತಿಮವಾಗಿ ನವೆಂಬರ್ ಸಾರ್ವತ್ರಿಕ ಚುನಾವಣೆಯಲ್ಲಿ ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿ, ಅಧ್ಯಕ್ಷ ಜೋ ಬೈಡೆನ್ ಅವರನ್ನು ಎದುರಿಸುತ್ತಾರೆ.
ಇದನ್ನೂ ಓದಿ: Donald Trump: ದಂಗೆಗೆ ಪ್ರಚೋದನೆ; ಅಧ್ಯಕ್ಷ ಚುನಾವಣೆ ಮತದಾನದಿಂದ ಡೊನಾಲ್ಡ್ ಟ್ರಂಪ್ ಅನರ್ಹ