Site icon Vistara News

US Presidential Election: ಬಾಯ್ತಪ್ಪಿ ಕಮಲಾ ಹ್ಯಾರೀಸ್‌ ಬದಲಿಗೆ ಟ್ರಂಪ್‌ ಹೆಸರು ಪ್ರಸ್ತಾಪ; ಭಾರೀ ವೈರಲ್‌ ಆಗ್ತಿದೆ ಬೈಡೆನ್‌ ವಿಡಿಯೋ

US Presidential Election

Watch: In another slip of tongue, Biden refers to Kamala Harris as 'vice president Trump' in solo press conference

ವಾಷಿಂಗ್ಟನ್‌: ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅಥವಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಬಾಯ್ತಪ್ಪಿ ಮಾತನಾಡುವುದು ಇದೆ. ಅಂತಹ ಹೇಳಿಕೆಗಳು ಕೆಲವೊಮ್ಮೆ ತೀರ ಅಸಂಬದ್ಧ ಹಾಗೂ ಹಾಸ್ಯಾಸ್ಪದವೂ ಆಗಿರುತ್ತದೆ. ಇದೀಗ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌(Joe Biden) ಕೂಡ ಇಂತಹದ್ದೇ ಒಂದು ಹೇಳಿಕೆಯಿಂದ ನಗೆಪಾಟಲಿಗೀಡಾಗಿದ್ದಾರೆ. ವಾಷಿಂಗ್ಟನ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ(US Presidential Election) ಮಾತನಾಡುವಾಗ, ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌(Kamala Harris) ಹೆಸರಿಗೆ ಬದಲಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರು ಪ್ರಸ್ತಾಪಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬೈಡೆನ್‌, ಕಮಲಾ ಹ್ಯಾರೀಸ್‌ ಪರ ಪ್ರಚಾರ ಮಾಡಿದರು. ಈ ವೇಳೆ ಮಾತನಾಡುತ್ತಾ ಉಪಾಧ್ಯಕ್ಷ ಟ್ರಂಪ್‌ ಅವರು ಅಧ್ಯಕ್ಷರಾಗಲು ಅರ್ಹರಲ್ಲ ಎಂದು ನಾನು ಭಾವಿಸದಿದ್ದರೆ ನಾನು ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ತಕ್ಷಣ ಪತ್ರಕರ್ತರೊಬ್ಬರು ಈ ತಪ್ಪನ್ನು ಪ್ರಸ್ತಾಪಿಸಿದಾಗ ಅದನ್ನು ಏನೂ ಮಾತನಾಡದೇ ಸುಮ್ಮನೆ ನಗಾಡಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಸತತ ಎರಡನೇ ಅವಧಿಗೆ ಆಯ್ಕೆ ಬಯಸಿರುವ ಹಾಲಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಒಂದರ ಹಿಂದೊಂದರಂತೆ ಅಡೆತಡೆಗಳು ಎದುರಾಗುತ್ತಿವೆ. ಸ್ವಪಕ್ಷದಲ್ಲಿಯೇ ಬೈಡನ್ ಸ್ಪರ್ಧೆಗೆ ವಿರೋಧ ವ್ಯಕ್ತವಾಗುತ್ತಿದೆ. ಡೆಮಾಕ್ರಟಿಕ್ ಪಕ್ಷದ ಮುಂಚೂಣಿ ದೇಣಿಗೆದಾರರಲ್ಲಿ ಒಬ್ಬರಾದ ನಟ ಜಾರ್ಜ್ ಕ್ಲೂನಿ, ಚುನಾವಣೆಯಿಂದ ಹಿಂದೆ ಸರಿಯುವಂತೆ ಬೈಡನ್‌ಗೆ ಒತ್ತಾಯಿಸಿದ್ದಾರೆ.

ಆರಂಭದಿಂದಲೂ ಎಡವಟ್ಟುಗಳಿಂದಲೇ ತುಂಬಿರುವ ಜೋ ಬೈಡನ್ ಅವರ ಮರು ಚುನಾವಣೆ ಪ್ರಚಾರವನ್ನು ಅಂತ್ಯಗೊಳಿಸುವಂತೆ ಕ್ಲೂನಿ ಅವರು ಭಾವನಾತ್ಮಕ ಮನವಿಯನ್ನು ಸಲ್ಲಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷಕ್ಕೆ ತೀವ್ರ ಬೆಂಬಲ ನೀಡುತ್ತಿರುವ ಹಾಲಿವುಡ್‌ನ ದಿಗ್ಗಜ ನಟರಲ್ಲಿ ಒಬ್ಬರಾಗಿರುವ ಕ್ಲೂನಿ, ಕಳೆದ ತಿಂಗಳು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧದ ಸಂವಾದದಲ್ಲಿನ ಜೋ ಬೈಡನ್ ಅವರ ಶೋಚನೀಯ ಪ್ರದರ್ಶನದ ಬಳಿಕ ಬೈಡನ್ ಅವರ ನಿರ್ಗಮನಕ್ಕೆ ಆಗ್ರಹಿಸಿರುತ್ತಿರುವ ಪ್ರಮುಖ ಗಣ್ಯರ ಸಾಲಿಗೆ ಸೇರಿದ್ದಾರೆ. ಬೈಡನ್ ಅವರಿಗೆ ಗೆಲುವು ಸಾಧಿಸುವುದು ಸಾಧ್ಯವಿಲ್ಲ ಎಂದು ಕ್ಲೂನಿ ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದೆಡೆ ಬೈಡೆನ್‌ ವಿರುದ್ಧ ಪ್ರತಿಸ್ಪರ್ಧಿ ಡೊನಾಲ್ಡ್‌ ಟ್ರಂಪ್‌ ವಾಗ್ದಾಳಿ ನಡೆಸಿದ್ದಾರೆ. ಬೈಡನ್‌‌ಗೆ ಬಹಿರಂಗ ಸವಾಲು ಹಾಕಿರುವ ಟ್ರಂಪ್‌, ಈ ವಾರ ತಮ್ಮ ಜೊತೆ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದ್ದಾರೆ. ಫ್ಲೋರಿಡಾದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ಜಗತ್ತಿನ ಎದುರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ಜೋ ಬೈಡನ್‌ ಅವರಿಗೆ ಅಧಿಕೃತವಾಗಿ ಅವಕಾಶ ನೀಡುತ್ತಿದ್ದೇನೆ. ಈ ವಾರ ಮತ್ತೊಂದು ಚರ್ಚೆ ನಡೆಸೋಣ. ಈ ಬಾರಿ ನೇರಾನೇರ ಚರ್ಚೆ ಇರಲಿ, ಮಧ್ಯಸ್ಥಿಕೆಗೆ ಯಾರೂ ಬೇಡ. ಎಲ್ಲಿ, ಯಾವಾಗಲಾದರೂ ನಾನು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ:Viral Video: ಹೃಷಿಕೇಶದ ಗಂಗಾ ಘಾಟ್‌ನಲ್ಲಿ ಬಿಕಿನಿ ಧರಿಸಿದ ವಿದೇಶಿಯರ ಮೋಜು ಮಸ್ತಿ!

Exit mobile version