ವಾಷಿಂಗ್ಟನ್: ಇರಾನ್(Iran) ಜೊತೆಗೆ ಭಾರತ ಚಬಾಹರ್ ಬಂದರು(Chabahar port) ಒಪ್ಪಂದ ಮಾಡಿಕೊಂಡಿರುವ ಬೆನ್ನಲ್ಲೇ ಅಮೆರಿಕ ನಿರ್ಬಂಧ(US sanction) ಹೇರುವ ಎಚ್ಚರಿಕೆ ನೀಡಿದೆ. ಇರಾನ್ ಜೊತೆಗೆ ವ್ಯಾಪಾರ-ವಹಿವಾಟಿಗಳನ್ನು ಮುಂದುವರೆಸಿದರೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ಅಮೆರಿಕ ಎಲ್ಲಾ ದೇಶಗಳಿಗೆ ಎಚ್ಚರಿಸಿದೆ. ಸ್ಟೇಟ್ ಡಿಪಾರ್ಟ್‌ಮೆಂಟ್ ಉಪ ವಕ್ತಾರ ವೇದಾಂತ್ ಪಟೇಲ್(State Department Deputy Spokesperson Vedant Patel) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು, ಚಬಾಹರ್ ಬಂದರಿಗೆ ಸಂಬಂಧಿಸಿದಂತೆ ಭಾರತ-ಇರಾನ್ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಇರಾನ್‌ನೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದಂತೆ ತನ್ನದೇ ಆದ ವಿದೇಶಾಂಗ ನೀತಿ ಅನುಸರಿಸಲು ಭಾರತ ಮುಕ್ತವಾಗಿದೆ. ಆದರೆ ಇರಾನ್ ಮೇಲೆ ಅಮೆರಿಕ ನಿರ್ಬಂಧ ಹೇರಿರುವುದನ್ನು ಭಾರತ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಇರಾನ್ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ ಇನ್ನೂ ಮುಂದುವರೆಯಲಿದೆ. ಇದು ಭಾರತಕ್ಕೆ ಮುಂದೊಂದು ದಿನ ಭಾರೀ ಅಪಾಯವನ್ನು ತಂದೊಡ್ಡಬಹುದು ಎಂದು ಎಚ್ಚರಿಕೆ ನೀಡಿದೆ. ಕೆಲವು ದಿನಗಳ ಹಿಂದೆ ಇರಾನ್ ಜೊತೆ ವ್ಯಾಪಾರ ಸಂಬಂದ ಹೊಂದಿದ್ದ ಸಂಸ್ಥೆಗಳು, ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ ಹೇಳಿರುವ ಬಗ್ಗೆ ನಿಮಗೆ ತಿಳಿದಿರಬಹುದು. ಹೀಗಾಗಿ ಇರಾನ್ ಜೊತೆಗೆ ಸಂಬಂಧ ಬೆಳೆಸಿ ನಿರ್ಬಂಧದ ರಿಸ್ಕ್ ಅನ್ನು ಮೈಮೇಲೆ ಎಳೆದುಕೊಳ್ಳಬೇಡಿ ಎಂದು ಅಮೆರಿಕ ಹೇಳಿದೆ.
ಎರಡು ವಾರಗಳ ಹಿಂದೆ ಇರಾನಿಯನ್ ಸೇನೆ ಜೊತೆ ಅಕ್ರಮ ವ್ಯಾಪಾರ ವಹಿವಾಟು ಹೊಂದಿರುವ 12ಕ್ಕೂ ಅಧಿಕ ಕಂಪನಿಗಳು, ಹಡುಗುಗಳು ಮತ್ತು ಉದ್ಯಮಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತ್ತು. ಇದರಲ್ಲಿ ಭಾರತ ಮೂರು ಕಂಪನಿಗಳು(Indian based firms) ಸೇರಿದ್ದವು. ರಷ್ಯಾ-ಉಕ್ರೇನ್ ಯುದ್ಧ ಸಂದರ್ಭದಲ್ಲಿ ಈ ಕಂಪನಿಗಳು, ಹಡಗುಗಳು ಮತ್ತು ವ್ಯಕ್ತಿಗಳು ಇರಾನ್‌ನ ಮಾನವ ರಹಿತ ವೈಮಾನಿಕ ವಾಹನ- ಡ್ರೋನ್(UAVs) ಗಳನ್ನು ರಷ್ಯಾಗೆ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಅಮೆರಿಕದ ಹೇಳಿತ್ತು.
ಇನ್ನು ಇರಾನ್‌ನ ಸಾಗರೋತ್ತರ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿರುವ ಕಂಪನಿಗಳಲ್ಲಿ ಸಹರಾ ಥಂಡರ್ ಪ್ರಮುಖವಾಗಿದೆ. ಈ ಕಂಪನಿಗೆ ಭಾರತೀಯ ಮೂಲದ ಮೂರು ಕಂಪನಿಗಳು ಸಹಾಯ ನೀಡುತ್ತಿವೆ. ಹೀಗಾಗಿ ಭಾರತೀಯ ಮೂಲದ ಜೆನ್ ಶಿಪ್ಪಿಂಗ್, ಪೋರ್ಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಸೀ ಆರ್ಟ್ ಶಿಪ್ ಮ್ಯಾನೇಜ್‌ಮೆಂಟ್(OPC) ಪ್ರೈವೆಟ್ ಲಿಮಿಟೆಡ್‌ಗೆ ಅಮೆರಿಕ ನಿರ್ಬಂಧ ವಿಧಿಸಿದೆ.
ಸಹಾರಾ ಥಂಡರ್ ಕಂಪನಿ ಇರಾನ್ ಸೇನೆಯ ಪರವಾಗಿ ಇರಾನಿಯನ್ ಸರಕುಗಳನ್ನು ಚೀನಾ, ರಷ್ಯಾ ಮತ್ತು ವೆನೆಜುವೆಲಾಗಳಿಗೆ ಸಾಗಾಟ ಮಾಡುತ್ತಿದೆ. ಇದೀಗ ಈ ಕಂಪನಿ ಯುಎಇ ಮೂಲದ ಸೇಫ್ ಸೀಸ್ ಶಿಪ್ ಮ್ಯಾನೇಜ್‌ಮೆಂಟ್ ಎಫ್‌ಜೆಇನ ಕುಕ್ ಐಲ್ಯಾಂಡ್ಸ್-ಫ್ಲ್ಯಾಗ್ಡ್ ನೌಕೆ CHEM (IMO 9240914) ಗಾಗಿ ಭಾರತ ಮೂಲದ ಝೆನ್ ಶಿಪ್ಪಿಂಗ್ ಮತ್ತು ಪೋರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಭಾರತ ಮೂಲದ ಸೀ ಆರ್ಟ್ ಶಿಪ್ ಮ್ಯಾನೇಜ್‌ಮೆಂಟ್ (OPC) ಪ್ರೈವೇಟ್ ಲಿಮಿಟೆಡ್ ಮತ್ತು ಯುಎಇ ಮೂಲದ ಕಂಪನಿ ಟ್ರಾನ್ಸ್ ಗಲ್ಫ್ ಏಜೆನ್ಸಿ LLC ಸಹಾರಾ ಥಂಡರ್‌ಗೆ ಬೆಂಬಲವಾಗಿ ಹಡಗು ನಿರ್ವಹಣಾ ಸೇವೆಗಳನ್ನು ಒದಗಿಸಲು ಒಟ್ಟಾಗಿ ಕೆಲಸ ಮಾಡಿದೆ ಎಂದು ಅಮೆರಿಕ ಹೇಳಿದೆ.
ಇದನ್ನೂ ಓದಿ:Narendra Modi: ಇಂದು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ ಜತೆಗೆ ಮೋದಿ ಕಾರ್ಯಕ್ರಮ ಏನೇನು?
ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಇರಾನ್, ರಷ್ಯಾಗೆ ತನ್ನ ಬೆಂಬಲ ಸೂಚಿಸಿತ್ತು. ಅಲ್ಲದೇ ಇದೀಗ ಇಸ್ರೇಲ್ ಮೇಲೂ ದಾಳಿ ಮಾಡುವ ಮೂಲಕ ತನ್ನ ಉದ್ದಟತನ ಮೆರೆದಿದೆ. ಡ್ರೋನ್, ಯುದ್ಧ ಸಾಮಾಗ್ರಿಗಳು ಉಗ್ರರ ಕೈಗೆ ಸುಲಭವಾಗಿ ಸಿಗುವಂತೆ ಮಾಡುವ ಮೂಲಕ ವಿನಾಶಕಾರಿಯಾಗಿ ಇರಾನ್ ಬೆಳೆಯುತ್ತಿದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.