Site icon Vistara News

US Shooting: ಅಮೆರಿಕದಲ್ಲಿ ಗುಂಡಿಕ್ಕಿ 8 ಜನರನ್ನು ಕೊಂದ ವ್ಯಕ್ತಿ; ಈತನ ಹೆಸರು ರೋಮಿಯೊ

Romeo Nance

US Shooting: Gunman Kills 8 In Different Parts Of Chicago Suburbs

ವಾಷಿಂಗ್ಟನ್‌: ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿ ಮತ್ತೆ ಮುಂದುವರಿದಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುವ ಪ್ರಕರಣಗಳು (US Shooting) ಜಾಸ್ತಿಯಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿರುವ ಮಧ್ಯೆಯೇ ಚಿಕಾಗೋ (Chicago) ಉಪನಗರದ ಎರಡು ಕಡೆ ಗುಂಡಿನ ದಾಳಿ ನಡೆದಿದ್ದು, ಒಟ್ಟು ಎಂಟು ಜನ ಮೃತಪಟ್ಟಿದ್ದಾರೆ. 23 ವರ್ಷದ ರೋಮಿಯೊ ನಾನ್ಸ್‌ ಎಂಬಾತನು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಚಿಕಾಗೋ ಉಪನಗರವಾದ ಜೋಲಿಯೆಟ್‌ ಎಂಬ ಪ್ರದೇಶದ 2200 ಬ್ಲಾಕ್‌ ಸೇರಿ ಎರಡು ಕಡೆ ಗುಂಡಿನ ದಾಳಿ ನಡೆದಿದೆ. ಭಾನವಾರದಿಂದ ಸೋಮವಾರದ ಅವಧಿಯಲ್ಲಿ ಜನ ಸಮೂಹದ ಮೇಲೆ ದಾಳಿ ನಡೆಸಲಾಗಿದ್ದು, ಇದುವರೆಗೆ ಎಂಟು ಜನ ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ರೋಮಿಯೊ ನಾನ್ಸ್‌ ನಾಪತ್ತೆಯಾಗಿದ್ದು, ಜೋಲಿಯೆಟ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಕಾರಿನಲ್ಲಿ ಬಂದು, ಜನರ ಮೇಲೆ ಗುಂಡಿನ ದಾಳಿ ನಡೆಸಿ, ಕ್ಷಿಪ್ರವಾಗಿ ಅಲ್ಲಿಂದ ಕಾಲ್ಕಿತ್ತಿರುವ ರೋಮಿಯೊ ನಾನ್ಸ್‌ ಬಂಧನಕ್ಕಾಗಿ ಪೊಲೀಸರು ಎಲ್ಲೆಡೆ ಅಲರ್ಟ್‌ ಆಗಿದ್ದಾರೆ. ಆದಾಗ್ಯೂ, ರೋಮಿಯೊ ನಾನ್ಸ್‌ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ, ರೋಮಿಯೊ ನಾನ್ಸ್‌ ಬಳಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಹಿಳೆಯೊಬ್ಬರ ಜತೆಗೂಡಿ ಈತ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Indian Student: ಅಮೆರಿಕದಲ್ಲಿ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಬಲಿ; ತಿಂಗಳಲ್ಲೇ ಇಬ್ಬರ ಹತ್ಯೆ

ಗುಂಡಿನ ದಾಳಿಗೆ 1,344 ಜನ ಬಲಿ

ಅಮೆರಿಕದಲ್ಲಿ ವರ್ಷದಿಂದ ವರ್ಷಕ್ಕೆ ಗುಂಡಿನ ದಾಳಿಯಿಂದ ಮೃತಪಡುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. 2023ರಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ 1,344 ಜನ ಮೃತಪಟ್ಟಿದ್ದಾರೆ. ಇವರಲ್ಲಿ 46 ಜನ ಅಧಿಕಾರಿಗಳೇ ಇದ್ದಾರೆ ಎಂಬುದು ಗಮನಾರ್ಹವಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಬಂದೂಕು ಹಿಡಿದು ಬರುವ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗುವುದು ಅಮೆರಿಕದಲ್ಲಿ ಸಾಮಾನ್ಯ ಎಂಬಂತಾಗಿದೆ. 2023ರಲ್ಲಿ ಜನಸಮೂಹದ ಮೇಲೆ ಗುಂಡಿನ ದಾಳಿ ನಡೆಸಿದ 627 ಪ್ರಕರಣಗಳು ದಾಖಲಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version