ವಾಷಿಂಗ್ಟನ್: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರವು (Israel Palestine War) ದಿನೇದಿನೆ ತಾರಕಕ್ಕೇರುತ್ತಿದೆ. ಅದರಲ್ಲೂ, ಗಾಜಾ ನಗರದಲ್ಲಿ ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕು ಎಂದು ಪಣ ತೊಟ್ಟಿರುವ ಇಸ್ರೇಲ್, ನಿರಂತರವಾಗಿ ದಾಳಿ ನಡೆಸುತ್ತಿದೆ. ಇಸ್ರೇಲ್ ಹಾಗೂ ಹಮಾಸ್ ನಡುವಿನ ಕಾಳಗದಲ್ಲಿ ಇದುವರೆಗೆ 7 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ, ಸಿರಿಯಾದಲ್ಲಿರುವ ಇರಾನ್ ಸೇನಾ ನೆಲೆಗಳ (Iran Groups In Syria) ಮೇಲೆ ಅಮೆರಿಕ ದಾಳಿ (US Strikes) ಮಾಡಿದೆ. ಹಾಗಾಗಿ, ಇದು ಮತ್ತೆರಡು ದೇಶಗಳ ನಡುವಿನ ಕದನಕ್ಕೆ ಸಾಕ್ಷಿಯಾಗಲಿದೆಯೇ ಎಂಬ ಪ್ರಶ್ನೆಗಳು ಮೂಡುತ್ತಿವೆ.
ಇರಾಕ್ ಹಾಗೂ ಸಿರಿಯಾದಲ್ಲಿರುವ ಅಮೆರಿಕ ನೆಲೆಗಳ ಮೇಲೆ ಇತ್ತೀಚೆಗೆ ಇರಾನ್ ಡ್ರೋನ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಅಮೆರಿಕವು ಸಿರಿಯಾದಲ್ಲಿರುವ ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಎರಡು ಸೇನಾ ನೆಲೆಗಳ ಮೇಲೆ ಶುಕ್ರವಾರ (ಅಕ್ಟೋಬರ್ 27) ಬೆಳಗಿನ ಜಾವ ದಾಳಿ ನಡೆಸಿದೆ. ಇದರಿಂದಾಗಿ ಮತ್ತೆ ಅಮೆರಿಕ ಹಾಗೂ ಇರಾನ್ ಮಧ್ಯೆ ಸಂಘರ್ಷ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವರು, ಮೂರನೇ ಮಹಾಯುದ್ಧಕ್ಕೆ ಸಿದ್ಧವಾಗುತ್ತಿರುವ ಲಕ್ಷಣಗಳಿವು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
BREAKING 🚨🚨
— Marjorie Taylor Greene Press Release (Parody) (@MTGrepp) October 27, 2023
At the request of Joe Biden, The US military has conducted multiple air B0MBING air strikes in Syria
WW3 ? Welp it was nice knowing all of you 👋
“ಅಮೆರಿಕವು ಯಾವುದೇ ಕಾರಣಕ್ಕೂ ಬೇರೆ ದೇಶಗಳ ಜತೆ ಸಂಘರ್ಷಕ್ಕೆ ಇಳಿಯಲು ಬಯಸುವುದಿಲ್ಲ. ಬೇರೆ ದೇಶಗಳ ಜತೆಗೆ ಬಿಕ್ಕಟ್ಟು ಸೃಷ್ಟಿಯ ಕುರಿತು ಆಸಕ್ತಿಯೂ ಇಲ್ಲ. ಆದರೆ, ಇರಾನ್ ಸೇನೆಯು ಅಮೆರಿಕದ ಸೇನಾ ನೆಲೆಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ನಾವು ಸಹಿಸುವುದಿಲ್ಲ” ಎಂದು ಅಮೆರಿಕ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಹೇಳಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಿರ್ದೇಶನದ ಮೇರೆಗೆ ಇರಾನ್ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ದಾಳಿಯನ್ನು ಪೆಂಟಗನ್ ದೃಢಪಡಿಸಿದೆ.
ಇದನ್ನೂ ಓದಿ: ಗರ್ಭಿಣಿಯ ಹೊಟ್ಟೆ ಸೀಳಿ, ಭ್ರೂಣದ ರುಂಡ ಕತ್ತರಿಸಿದ ಹಮಾಸ್ ಉಗ್ರರು; ಇವರೆಂಥಾ ರಾಕ್ಷಸರು!
ಇಸ್ರೇಲ್ ಹಾಗೂ ಹಮಾಸ್ ಉಗ್ರರ ದಾಳಿಗೆ 7 ಸಾವಿರಕ್ಕೂ ಅಧಿಕ ಜನ ಮೃತಪಡುವ ಜತೆಗೆ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇದರ ಬೆನ್ನಲ್ಲೇ ಗಾಜಾ ನಗರಕ್ಕೆ ಇಸ್ರೇಲ್ ಯುದ್ಧ ಟ್ಯಾಂಕರ್‌ಗಳನ್ನು ನುಗ್ಗಿಸಿದೆ. ಗಾಜಾ ನಗರದ ಉತ್ತರ ಭಾಗದಲ್ಲಿ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದ ಕುರಿತು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ. ಗಾಜಾ ಉತ್ತರ ಭಾಗದಲ್ಲಿ ಯುದ್ಧ ಟ್ಯಾಂಕರ್‌ಗಳು ನಿಗದಿತ ಗುರಿಗಳನ್ನು ಹೊಡೆದುರುಳಿಸಿದ ವಿಡಿಯೊ ಈಗ ವೈರಲ್ ಆಗಿದೆ. ಹಮಾಸ್ ಉಗ್ರರನ್ನು ನಿರ್ನಾಮ ಮಾಡದೆ ಬಿಡುವುದಿಲ್ಲ ಎಂದು ಐಡಿಎಫ್ ಮುಖ್ಯಸ್ಥ ಈಗಾಗಲೇ ಘೋಷಿಸಿದ್ದಾರೆ. ಹಾಗಾಗಿ, ಯಾವುದೇ ಸಮಯದಲ್ಲಿ ಕೂಡ ಇಸ್ರೇಲ್ ಪೂರ್ಣ ಪ್ರಮಾಣದ ದಾಳಿ ಮಾಡಬಹುದು ಎನ್ನಲಾಗಿದೆ. ಇದರ ಬೆನ್ನಲ್ಲೇ, ಮತ್ತೆರಡು ದೇಶಗಳ ಮಧ್ಯೆ ಸಂಘರ್ಷ ಶುರುವಾಗಿರುವುದು ಆತಂಕ ಹೆಚ್ಚಿಸಿದೆ.