ವಾಷಿಂಗ್ಟನ್: ಅಮೆರಿಕದ ಸುಪ್ರೀಂ ಕೋರ್ಟ್ ಗರ್ಭಪಾತ ಹಕ್ಕನ್ನು ರದ್ದುಗೊಳಿಸಿದೆ. ಇನ್ನು ಮುಂದೆ ಅಮೆರಿಕದಲ್ಲಿ 15 ವಾರಗಳ ನಂತರದ ಭ್ರೂಣವನ್ನು ಅಬಾರ್ಷನ್ ಮಾಡುವಂತಿಲ್ಲ.
ಈ ತೀರ್ಪು ಅಮೆರಿಕದಲ್ಲಿ ಸಾಕಷ್ಟು ವಾದವಿವಾದ, ಕೋಲಾಹಲ ಎಬ್ಬಿಸುವ ಸಾಧ್ಯತೆ ಇದೆ. ಯಾಕೆಂದರೆ ಈ ಹಕ್ಕನ್ನು ಪಡೆಯುವ ಮುನ್ನ ಸಾಕಷ್ಟು ಹೋರಾಟಗಳು ನಡೆದಿದ್ದವು. ಅಮೆರಿಕದ ರಾಜಕೀಯದಲ್ಲಿ ಈ ಬಗ್ಗೆ ಬಿಸಿಯೇರಿದ ವಾಗ್ಯುದ್ಧಗಳು, ಚಳವಳಿ ಎಲ್ಲವೂ ನಡೆದು ಈ ಹಕ್ಕನ್ನು ಪಡೆದು, ಮಹಿಳೆಯರ ಹಕ್ಕು ಎಂದು ಇದನ್ನು ಸಂಭ್ರಮಿಸಲಾಗಿತ್ತು.
ಮಿಸಿಸಿಪ್ಪಿ ರಾಜ್ಯದ ರಿಪಬ್ಲಿಕನ್ ಪಕ್ಷದ ಸರಕಾರ ಜಾರಿಗೆ ತಂದಿದ್ದ ʼ15 ವಾರಗಳ ಬಳಿಕ ಗರ್ಭಪಾತ ನಿಷೇದʼ ಕಾಯಿದೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿ ಹಿಡಿಯಿತು. 9 ನ್ಯಾಯಮೂರ್ತಿಗಳಿದ್ದ ಪೀಠದಲ್ಲಿ 6 ಮಂದಿ ಗರ್ಭಪಾತದ ವಿರುದ್ಧವಾಗಿ ನಿಲುವು ತಾಳಿದ ಕಾರಣ ಈ ತೀರ್ಪು ಬಂತು.
1937ರಲ್ಲಿ ಸುಪ್ರೀಂ ಕೋರ್ಟ್ ನೀಡಿದ Roe v Wade ಪ್ರಕರಣದ ತೀರ್ಪನ್ನು ಐತಿಹಾಸಿಕ ಎನ್ನಲಾಗುತ್ತದೆ. ಆ ಪ್ರಕರಣದಲ್ಲಿ, ಮಹಿಳೆಗೆ ಇರುವ ಖಾಸಗಿತನದ ಹಕ್ಕಿನಡಿ ಗರ್ಭಪಾತದ ಹಕ್ಕು ಕೂಡ ಬರುತ್ತದೆ ಎಂದು ವ್ಯಾಖ್ಯಾನಿಸಲಾಗಿತ್ತು. ಆದರೆ ಸಂವಿಧಾನದಲ್ಲಿ ಗರ್ಭಪಾತದ ಉಲ್ಲೇಖವಿಲ್ಲ ಎಂದು ಸುಪ್ರೀಂ ಕೋರ್ಟ್ ಈಗ ಹೇಳಿದೆ.
2018ರಲ್ಲಿ ಮಿಸಿಸಿಪ್ಪಿ ರಾಜ್ಯ 15 ವಾರಗಳ ನಂತರದ ಭ್ರೂಣ ತೆಗೆಸುವುದನ್ನು ನಿಷೇಧಿಸಿತ್ತು. ವೈದ್ಯಕೀಯ ತುರ್ತುಪರಿಸ್ಥಿತಿ, ಭ್ರೂಣದಲ್ಲಿ ಗಂಭೀರ ಅಸಹಜತೆ ಇದ್ದಾಗ ಮಾತ್ರ ಅಬಾರ್ಷನ್ ಮಾಡಬಹುದು ಎಂದು ಕಾಯಿದೆ ಹೇಳಿತ್ತು. ಇದನ್ನು ಅಬಾರ್ಷನ್ ಕ್ಲಿನಿಕ್ ವಿರೋಧಿಸಿತ್ತು. ಈ ಕಾಯಿದೆಯತ್ತ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಜೋ ಬೈಡೆನ್ ಒಲವು ಕೂಡ ಇರಲಿಲ್ಲ.
ಅಮೆರಿಕದಲ್ಲಿ ಗರ್ಭಪಾತ ಪ್ರಕರಣಗಳು ಏರುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಇದು ಶೇ.8ರಷ್ಟು ಏರಿಕೆಯಾಗಿತ್ತು. ಸಂಪ್ರದಾಯವಾದಿ ವಲಯದಲ್ಲಿ ಇದು ಕಳವಳ ಹುಟ್ಟಿಸಿತ್ತು. ಆದರೆ ಈಗಿನ ತೀರ್ಪಿನಿಂದಾಗಿ, ಅಮೆರಿಕ ಮತ್ತೆ ಆಧುನಿಕ ಮನಸ್ಸತ್ವಕ್ಕೆ ವಿರೋಧಿ, ಕ್ರಾಂತಿಕಾರಿ ಚಿಂತನೆಗಳ ವಿರೋಧಿಯಾಗಿ ಮಾರ್ಪಡುತ್ತಿದೆ ಎಂಬ ಕಳವಳ ಮೂಡುವಂತಾಗಿದೆ ಎಂದು ಅಬಾರ್ಷನ್ ಪರ ವಾದಿಗಳು ಆಕ್ಷೇಪಿಸಿದ್ದಾರೆ.