Site icon Vistara News

Vedant Patel | ಭಾರತೀಯ ಮೂಲದ ವೇದಾಂತ್ ಪಟೇಲ್ ಸಾಧನೆಗೆ ಮತ್ತೊಂದು ಗರಿ!

Vedant Patel

ವಾಷಿಂಗ್ಟನ್: ಅಮೆರಿಕ ವಿದೇಶಾಂಗ ಸಚಿವಾಲಯದ ಡೆಪ್ಯುಟಿ ಪ್ರಿನ್ಸಿಪಲ್ ವಕ್ತಾರ ವೇದಾಂತ್ ಪಟೇಲ್ (Vedant Patel) ಅವರಿಗೆ, ಇಲಾಖೆಯಲ್ಲಿ ಹೊಸ ಜವಾಬ್ದಾರಿ ದೊರೆತಿದ್ದು, ಇತಿಹಾಸ ನಿರ್ಮಿಸಿದ್ದಾರೆ. ವೇದಾಂತ್ ಪಟೇಲ್ ಅವರು ಇಲಾಖೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ರೀತಿಯ ಜವಾಬ್ದಾರಿ ಹೊತ್ತ ಮೊದಲ ಇಂಡಿಯನ್ ಅಮೆರಿಕನ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಅವರು ರಜೆ ಮೇಲೆ ತೆರಳಿದ್ದಾರೆ. ಕ್ಯಾಲಿಫೋರ್ನಿಯಾ ಮೂಲದ 33 ವರ್ಷದ ವೇದಾಂತ್ ಪಟೇಲ್ ಅವರು ಮಂಗಳವಾರ ವಿದೇಶಾಂಗ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಅಮೆರಿಕದ ವಿದೇಶಾಂಗ ನೀತಿಯ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ಜವಾಬ್ದಾರಿಯನ್ನು ನಿರ್ವಹಿಸಿದ ಮೊದಲ ಇಂಡಿಯನ್-ಅಮೆರಿಕನ್ ವ್ಯಕ್ತಿಯಾಗಿದ್ದಾರೆ.

ತಮ್ಮ ಈ ಸುದ್ದಿಗೋಷ್ಠಿಯಲ್ಲಿ ಅವರು, ಉಕ್ರೇನ್ ಮೇಲೆ ರಷ್ಯಾದ ಕಾನೂನುಬಾಹಿರ ದಾಳಿ, ಜೆಸಿಪಿಒಎ ಮಾತುಕತೆಗಳು, ಇಂಗ್ಲೆಂಡ್ ಪ್ರಧಾನಿಯಾಗುತ್ತಿರುವ ಲಿಜ್ ಟ್ರಸ್ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಅವರು ಮತ್ತೆ ಬುಧವಾರವೂ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ.

ಜಾಗತಿಕ ವೇದಿಕೆಗಳಲ್ಲಿ ಅಮೆರಿಕವನ್ನು ಪ್ರತಿನಿಧಿಸುವುದು ಅತಿದೊಡ್ಡ ಜವಾಬ್ದಾರಿಯಾಗಿರುತ್ತದೆ. ವೇದಾಂತ್ ಅವರು ಈ ಕೆಲಸವನ್ನು ವೃತ್ತಿಪರತೆಯಿಂದ ಮಾಡಿದ್ದಾರೆ, ಅವರ ಸಂವಹನವು ಸ್ಪಷ್ಟವಾಗಿತ್ತು ಎಂದು ವೈಟ್ ಹೌಸ್‌ನ ಸೀನಿಯರ್ ಅಸೋಸಿಯೇಟ್ ಕಮ್ಯುನಿಕೇಷನ್ ಡೈರೆಕ್ಟರ್ ಆಗಿರುವ ಮ್ಯಾಟ್ ಹಿಲ್ ಅವರು ಟ್ವೀಟ್ ಮಾಡಿದ್ದಾರೆ. ವೇದಾಂತ್ ಅವರ ಸಹದ್ಯೋಗಿಗಳು ಈ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ವೇದಾಂತ್ ಪಟೇಲ್ ಅವರು ಭಾರತದ ಗುಜರಾತ್‌ನಲ್ಲಿ ಜನಿಸಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದ್ದಾರೆ. ಈ ಹಿಂದೆ ಅವರು ವೈಟ್‌ಹೌಸ್‌ನಲ್ಲಿ ಅಧ್ಯಕ್ಷ ಜೋ ಬೈಡೆನ್ ಅವರ ಅಸಿಸ್ಟಂಟ್ ಪ್ರೆಸ್ ಸೆಕ್ರೆಟರಿ ಮತ್ತು ವಕ್ತಾರರಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ | Female pilots | ಅಮೆರಿಕಕ್ಕಿಂತಲೂ ದುಪ್ಪಟ್ಟು ಮಹಿಳಾ ಪೈಲಟ್‌ಗಳು ಭಾರತದಲ್ಲಿ!

Exit mobile version