ಕಾಬೂಲ್: ತಾಲಿಬಾನ್ ಆಡಳಿತಕ್ಕೆ ಸಿಲುಕಿದ ಬಳಿಕ ಅಫಘಾನಿಸ್ತಾನದ ಹೆಣ್ಣುಮಕ್ಕಳ ಜೀವನ ನಲುಗಿಹೋಗಿದೆ. ಪುರುಷರು ಜತೆಗಿಲ್ಲದೆ ಹೊರಗೆ ಕಾಲಿಡುವ ಹಾಗಿಲ್ಲ, ಇಷ್ಟದ ಬಟ್ಟೆ ಧರಿಸುವ ಹಾಗಿಲ್ಲ, ಹೆಣ್ಣುಮಕ್ಕಳಿಗೆ ಕನಿಷ್ಠ ಸಿಗಬೇಕಾದ ಹಕ್ಕುಗಳೂ ಸಿಗುತ್ತಿಲ್ಲ. ಇದೆಲ್ಲದರ ಮಧ್ಯೆಯೇ, ತಾಲಿಬಾನಿಗಳು ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣವನ್ನು ನಿಷೇಧಿಸುವ (Taliban Bans Female Education) ಮೂಲಕ ಮತ್ತೊಂದು ಅಮಾನವೀಯ ನಿರ್ಧಾರ ತೆಗೆದುಕೊಂಡಿದೆ.
ಆಫ್ಘನ್‌ನ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣವನ್ನು ತಾಲಿಬಾನ್ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯವು ನಿಷೇಧಿಸಿದೆ. ಇದರಿಂದಾಗಿ ವಿದ್ಯಾರ್ಥಿನಿಯರಿಗೆ ಬರಸಿಡಿಲು ಬಡಿದಂತಾಗಿದ್ದು, ಕ್ಲಾಸ್‌ರೂಮ್‌ಗಳಲ್ಲಿಯೇ ಕೂತು ಕಣ್ಣೀರು ಹಾಕುತ್ತಿರುವ ವಿಡಿಯೊ ಈಗ ವೈರಲ್ ಆಗಿದೆ. ವಿದ್ಯಾರ್ಥಿನಿಯರು ವಿವಿಗಳ ಹಾಸ್ಟೆಲ್ ಹಾಗೂ ತರಗತಿಗಳನ್ನು ತೊರೆಯುವಂತೆ ತಾಲಿಬಾನಿಗಳು ಡಿ.21ರಂದು ಆದೇಶ ಹೊರಡಿಸಿದ ಕಾರಣ ವಿದ್ಯಾರ್ಥಿನಿಯರು ಕಣ್ಣೀರಿನ ಮೂಲಕ ತಾಲಿಬಾನಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ಇರಾನ್‌ನಂತಾಗುತ್ತದೆಯೇ ಆಫ್ಘನ್?
ಇರಾನ್‌ನಲ್ಲಿ ಮಹ್ಸಾ ಅಮಿತಿ ಎಂಬ ಯುವತಿಯನ್ನು ನೈತಿಕ ಪೊಲೀಸರು ಹತ್ಯೆ ನಡೆಸಿದ ಬಳಿಕ ಹಿಜಾಬ್ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಿದಂತೆಯೇ ಆಫ್ಘನ್‌ನಲ್ಲಿಯೂ ಹೆಣ್ಣುಮಕ್ಕಳು ಬೀದಿಗಿಳಿದು ಬೃಹತ್ ಮಟ್ಟದಲ್ಲಿ ಹೋರಾಟ ನಡೆಸುವ ಸಾಧ್ಯತೆ ಇದೆ. ಗುರುವಾರ (ಡಿಸೆಂಬರ್ 22) ಸುಮಾರು 50ಕ್ಕೂ ಅಧಿಕ ಮಹಿಳೆಯರು ಕಾಬೂಲ್‌ನ ಬೀದಿಗಳಲ್ಲಿ ತಾಲಿಬಾನ್ ಸರ್ಕಾರದ ತೀರ್ಮಾನದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಖಂಡನೆ ವ್ಯಕ್ತಪಡಿಸಿದ ಟರ್ಕಿ, ಸೌದಿ ಅರೇಬಿಯಾ
ಆಫ್ಘನ್‌ನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣ ನಿಷೇಧಿಸಿದ ತಾಲಿಬಾನ್ ಸರ್ಕಾರದ ತೀರ್ಮಾನವನ್ನು ಇಸ್ಲಾಮಿಕ್ ರಾಷ್ಟ್ರಗಳಾದ ಟರ್ಕಿ ಹಾಗೂ ಸೌದಿ ಅರೇಬಿಯಾ ಖಂಡಿಸಿವೆ. ಹೆಣ್ಣುಮಕ್ಕಳ ಶಿಕ್ಷಣದ ಹಕ್ಕುಗಳನ್ನು ಕಸಿಯುವುದು ಸರಿಯಲ್ಲ. ಕೂಡಲೇ ಆಫ್ಘನ್ ಸರ್ಕಾರ ಆದೇಶ ಹಿಂಪಡೆಯಬೇಕು ಎಂಬುದಾಗಿಯೂ ಒತ್ತಾಯಿಸಿವೆ.
ಇದನ್ನೂ ಓದಿ | Taliban Rule | ತಾಲಿಬಾನ್ ಕಪಿಮುಷ್ಟಿಗೆ ಸಿಲುಕಿ ಆಫ್ಘನ್‌ಗೆ ಒಂದು ವರ್ಷ, ಏನೆಲ್ಲ ನಡೆದುಹೋಯ್ತು?