ನಮಗೆಲ್ಲ ಒಂದು ದಿನ ನಿದ್ದೆ ಆಗಿಲ್ಲವೆಂದರೆ ಮರುದಿನ ಸುಸ್ತು ಅಂತೀವಿ. ಅದರಲ್ಲೂ ಮೂರ್ನಾಲ್ಕು ದಿನ ನೇರವಾಗಿ ನಿದ್ದೆಗೆಟ್ಟರೆ (Insomnia) ಮುಗಿದೇ ಹೋಯಿತು, ಅನಾರೋಗ್ಯಕ್ಕೀಡಾಗೇಬಿಡುತ್ತೇವೆ. ಆದರೆ ಈ ಅಜ್ಜನನ್ನು ನೋಡಿ, ಬರೋಬ್ಬರಿ 60ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲವಂತೆ. ಹಾಗಂತ, ಅದರಿಂದ ಅಡ್ಡಪರಿಣಾಮವೇನೂ ಆಗಿಲ್ಲ. ಇವರು ಕಾಯಿಲೆ ಬಿದ್ದು ಆಸ್ಪತ್ರೆಯನ್ನೂ ಸೇರಿಲ್ಲ. ದೈಹಿಕವಾಗಿ-ಮಾನಸಿಕವಾಗಿ ಫುಲ್ ಫಿಟ್ ಆಗಿದ್ದಾರೆ. ಅಂದಹಾಗೇ, ಈ ಅಜ್ಜನ ಹೆಸರು ಥಾಯ್ ನಾಕ್ (Thai Ngoc). ವಿಯೆಟ್ನಾಂನವರು. ಇವರಿಗೆ ಈಗ 80ವರ್ಷ. 1962ರಿಂದಲೂ ಅಜ್ಜ ನಿದ್ದೆಯಿಲ್ಲದೆ ಕಳೆಯುತ್ತಿದ್ದಾರೆ. ಇವರ ಸುದ್ದಿಯೀಗ ಭರ್ಜರಿ ವೈರಲ್ (Viral News) ಆಗುತ್ತಿದೆ.
ಹೀಗೆ ನಿದ್ರಾಹೀನ ಅಜ್ಜನ ಪರಿಚಯವನ್ನು ಈಗ ಯೂಟ್ಯೂಬರ್ ಡ್ರೂ ಬಿನ್ಸ್ಕಿ ಎಂಬುವರು ತಮ್ಮ ಚಾನೆಲ್ನಲ್ಲಿ ಮಾಡಿಸಿದ್ದಾರೆ. ತಾವ್ಯಾಕೆ ನಿದ್ದೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅಜ್ಜ ನಾಕ್ ಹೇಳಿಕೊಂಡಿದ್ದಾರೆ. ಬಾಲ್ಯದಲ್ಲಿ ಒಂದು ಜ್ವರ ಬಂದಿತ್ತು. ಆ ಜ್ವರದ ಕಾರಣಕ್ಕೇ ನಿದ್ದೆ ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಅವರ ಪತ್ನಿಯಾಗಲಿ, ಮಕ್ಕಳಾಗಲೀ, ನೆರೆಹೊರೆಯವರಾಗಲೀ ನಾಕ್ ನಿದ್ದೆ ಮಾಡಿದ್ದನ್ನು ಒಂದಿನವೂ ನೋಡಿಲ್ಲ. ಇನ್ನು ಯೂಟ್ಯೂಬರ್ ಡ್ರೂ ಬಿನ್ಸ್ಕಿ ಕೂಡ ಒಂದು ರಾತ್ರಿ ಥಾಯ್ ನಾಕ್ ಜತೆ ಕಳೆದಿದ್ದಾರೆ. ರಾತ್ರಿಯೆಲ್ಲ ಇವರು ಮಾತಾಡುತ್ತ, ಸಿಗರೇಟ್ ಕತ್ತಿಸುತ್ತ ಕುಳಿತಿದ್ದರು. ಮುಂಜಾನೆ ನಾಲ್ಕು ಗಂಟೆಹೊತ್ತಿಗೆ ಒಮ್ಮೆ ಮಲಗಿದರು. ಆದರೆ ಅವರ ಕಣ್ಣಿಗೆ ನಿದ್ದೆ ಹತ್ತಲಿಲ್ಲ ಎಂದು ಯೂಟ್ಯೂಬರ್ ಹೇಳಿಕೊಂಡಿದ್ದಾರೆ. ‘ಅಜ್ಜ ನಾಕ್ಗೆ ನಿದ್ದೆ ಮಾಡಬೇಕು ಅನ್ನಿಸುತ್ತದೆ. ಆದರೆ ಅವರು ಶಾಶ್ವತವಾಗಿ ನಿದ್ರಾಹೀನತೆ ಸ್ಥಿತಿ ತಲುಪಿದ್ದಾರೆ’ ಎಂದು ತಿಳಿಸಿದ್ದಾರೆ. ಅಂದ ಹಾಗೇ, ಈ ಅಜ್ಜ ಸದಾ ಗ್ರೀನ್ ಟೀ ಮತ್ತು ರೈಸ್ ವೈನ್ ಕುಡಿಯುತ್ತಾರಂತೆ.
ಇದನ್ನೂ ಓದಿ: Viral Video: ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿದ ನದಿ; ಆತಂಕದ ಮಧ್ಯೆಯೇ ಕಾರಣ ಹೇಳಿದ ಬಿಯರ್ ಫ್ಯಾಕ್ಟರಿ
ಇನ್ನು ನಾಕ್ ಬಗ್ಗೆ ವಿಡಿಯೊ ನೋಡಿದ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 1955ರಿಂದ ವಿಯೆಟ್ನಾಂನಲ್ಲಿ ಯುದ್ಧ ಶುರವಾಗಿ 1975ರವರೆಗೂ ನಡೆದಿತ್ತು. ಈ ಯುದ್ಧದಲ್ಲಿ ನಾಕ್ ಕೈಗಳಿಗೆ ಹಾನಿಯಾಗಿದೆ. ಈ ಯುದ್ಧದ ಸಂದರ್ಭದಲ್ಲಿ ಅನೇಕಾನೇಕರು ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಗೆ ಒಳಗಾಗಿದ್ದಾರೆ. ಅದರಲ್ಲೂ ಅಂದಿನ ಯುದ್ಧ ಕಣ್ಣಾರೆ ಕಂಡವರು ಹಲವರು ಆಘಾತಕಾರಿ ಮಾನಸಿಕ ಒತ್ತಡ (PTSD)ಕ್ಕೆ ಒಳಗಾಗಿದ್ದಾರೆ. ಅಂದರೆ ಯಾವುದಾದರೂ ಶಾಕಿಂಗ್, ಆಘಾತಕಾರಿ ಘಟನೆಯನ್ನು, ಸಂದರ್ಭವನ್ನು ನೋಡಿದಾಗ ಉಂಟಾಗುವ ಅಸ್ವಸ್ಥತೆ. ನಾಕ್ ಕೂಡ ಅಂಥ ಪಿಟಿಎಸ್ಡಿ ಸಮಸ್ಯೆಯಿಂದಲೇ ಹೀಗೆ ನಿದ್ರಾಹೀನತೆಯಿಂದ ಬಳಲುತ್ತಿರಬಹುದು ಎಂದು ಹೇಳಲಾಗಿದೆ. ಹಲವು ವೈದ್ಯರು ನಾಕ್ರನ್ನು ತಪಾಸಣೆ, ವಿವಿಧ ಪರೀಕ್ಷೆಗೆ ಒಳಪಡಿಸಿದ್ದಾರೆ. ಆದರೆ ಅವರಿಗೂ ನೈಜ ಕಾರಣ ಗೊತ್ತಾಗಲಿಲ್ಲ.