ನ್ಯೂಯಾರ್ಕ್: ಟ್ರಿಪಲ್ ಎಕ್ಸ್ (XXX) ಚಿತ್ರಗಳ ಖ್ಯಾತಿಯ ಹಾಲಿವುಡ್ ನಟ ವಿನ್ ಡೀಸೆಲ್ (Vin Diesel) ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿ ಬಂದಿದೆ. ಅವರ ಮಾಜಿ ಸಹಾಯಕಿಯೊಬ್ಬರು ಈ ಆರೋಪ ಹೊರಿಸಿದ್ದಾರೆ. ವಿನ್ ಡೀಸೆಲ್ 2010ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಮತ್ತು ಕೆಲವೇ ಗಂಟೆಗಳ ನಂತರ ತನ್ನನ್ನು ಕೆಲಸದಿಂದ ವಜಾಗೊಳಿಸಿದ್ದರು ಎಂದು ಆರೋಪಿಸಿ ಗುರುವಾರ ಮೊಕದ್ದಮೆ ದಾಖಲಿಸಿದ್ದಾರೆ.
ನ್ಯಾಯಾಲಯದಲ್ಲಿ ದಾಖಲಾದ ಮೊಕದ್ದಮೆಯಲ್ಲಿ ವಿನ್ ಡೀಸೆಲ್ ಅವರ ಮಾಜಿ ಸಹಾಯಕಿ ಆಸ್ಟಾ ಜೊನಾಸನ್, ʼʼಫಾಸ್ಟ್ ಫೈವ್ʼ (Fast Five) ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ ಅಟ್ಲಾಂಟಾ ಹೋಟೆಲ್ ಕೋಣೆಯಲ್ಲಿ ಡೀಸೆಲ್ ತನ್ನ ಮೇಲೆ ದೌರ್ಜನ್ಯ ಎಸಗಿದ್ದʼʼ ಎಂದು ಆರೋಪಿಸಿದ್ದಾರೆ. ಅಲ್ಲದೆ ಹೋಟೆಲ್ ಕೋಣೆಯಲ್ಲಿ ನಟ ನನ್ನ ಸ್ತನಗಳನ್ನು ಬಲವಂತವಾಗಿ ಹಿಚುಕಿ ಚುಂಬಿಸಿದ್ದಾನೆ ಎಂದು ಜೊನಾಸನ್ ಆರೋಪಿಸಿದ್ದಾರೆ.
ಆಸ್ಟಾ ಜೊನಾಸನ್ ಮಾಡಿದ ಆರೋಪಗಳೇನು?
ಇಷ್ಟು ಮಾತ್ರವಲ್ಲದೆ ಆಸ್ಟಾ ಜೊನಾಸನ್ ಈ ಅಮೆರಿಕನ್ ನಟನ ವಿರುದ್ಧ ಸರಣಿ ಆರೋಪಗಳನ್ನು ಹೊರಿಸಿದ್ದಾರೆ. ʼʼಸ್ನಾನಗೃಹಕ್ಕೆ ತೆರಳಿದ ತನ್ನನ್ನು ಡೀಸೆಲ್ ಹಿಂಬಾಲಿಸಿ ಬಂದಿದ್ದ. ತನ್ನ ಖಾಸಗಿ ಅಂಗವನ್ನು ಸ್ಪರ್ಶಿಸುವಂತೆ ಒತ್ತಾಯಿಸಿದ್ದ. ನಿರಾಕರಿಸಿದಾಗ ಗೋಡೆಗೆ ತನ್ನನ್ನು ಒತ್ತಿ ಹಿಡಿದು ನನ್ನ ಎದುರೇ ಹಸ್ತಮೈಥುನ ಮಾಡಿಕೊಂಡಿದ್ದ. ಬಳಿಕ ನನ್ನನ್ನು ಬಿಡುಗಡೆ ಮಾಡಿ ಕೋಣೆಯಿಂದ ಹೊರ ನಡೆದಿದ್ದ. ಇದಾಗಿ ಕೆಲವು ಗಂಟೆಗಳ ನಂತರ ನಟನ ಸಹೋದರಿ ಮತ್ತು ಮನರಂಜನಾ ಕಂಪನಿ ಒನ್ ರೇಸ್‌ನ ಅಧ್ಯಕ್ಷೆ ಸಮಂತಾ ವಿನ್ಸೆಂಟ್ ನನ್ನನ್ನು ಕರೆದು ಕೆಲಸದಿಂದ ತೆಗೆದುಹಾಕಿರುವ ಸಂಗತಿ ತಿಳಿಸಿದರುʼʼ ಎಂದು ಆಸ್ಟಾ ಜೊನಾಸನ್ ದೂರಿನಲ್ಲಿ ತಿಳಿಸಿದ್ದಾರೆ.
“ವಿನ್ ಡೀಸೆಲ್ ಅವರ ಲೈಂಗಿಕ ದೌರ್ಜನ್ಯವನ್ನು ಧೈರ್ಯದಿಂದ ವಿರೋಧಿಸಿದ್ದಕ್ಕಾಗಿ ಜೊನಾಸನ್ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು. ವಿನ್ ಡೀಸೆಲ್ ಅವರನ್ನು ರಕ್ಷಿಸಲಾಗುವುದು ಮತ್ತು ಅವರ ಲೈಂಗಿಕ ದೌರ್ಜನ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಇದರಿಂದ ಸ್ಪಷ್ಟʼʼ ಎಂದು ಆಸ್ಟಾ ಜೊನಾಸನ್ ಪರ ವಕೀಲರು ಅಭಿಪ್ರಾಯ ಪಟ್ಟಿದ್ದಾರೆ.
ಇಷ್ಟು ವರ್ಷ ಮೌನವಾಗಿದ್ದೇಕೆ?
ಘಟನೆ ನಡೆದು ಸುಮಾರು 13 ವರ್ಷಗಳ ಬಳಿಕ ಆಸ್ಟಾ ಜೊನಾಸನ್ ಈ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರೊಬ್ಬರ ವಿರುದ್ಧ ಮಾತನಾಡಲು ಹೆದರಿ, ಉದ್ಯಮದಿಂದ ಬಹಿಷ್ಕರಿಸಲ್ಪಡಬೇಕಾಗುತ್ತದೆ ಎಂಬ ಭಯದಿಂದ ಇಷ್ಟು ವರ್ಷಗಳ ಕಾಲ ಮೌನವಾಗಿದ್ದೆ” ಎಂದು ಮೊಕದ್ದಮೆಯಲ್ಲಿ ತಿಳಿಸಿದ್ದಾರೆ. 2017ರಲ್ಲಿ ಮೀ ಟೂ (#MeToo) ಚಳವಳಿ ಆರಂಭವಾದ ನಂತರ ಅನೇಕರು ಸಿನಿಮಾ ರಂಗದಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳುವ ಧೈರ್ಯ ತೋರಿಸುತ್ತಿದ್ದಾರೆ.
ವಿನ್ ಡೀಸೆಲ್ ಜತೆ ತೆರೆ ಹಂಚಿಕೊಂಡಿದ್ದ ದೀಪಿಕಾ
XXX ಎನ್ನುವ ಅಮೆರಕನ್ ಸ್ಪೈ ಫಿಕ್ಷನ್ ಆ್ಯಕ್ಷನ್ ಚಿತ್ರಗಳ ಸರಣಿ ಮೂಲಕ ವಿನ್ ಡೀಸೆಲ್ ಖ್ಯಾತಿ ಗಳಿಸಿದ್ದಾರೆ. ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಇವರೂ ಒಬ್ಬರು. ಚಿತ್ರ ನಿರ್ಮಾಪಕರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. 2017ರಲ್ಲಿ ತೆರೆಕಂಡ ‘xXx: Return of Xander Cage’ ಚಿತ್ರದಲ್ಲಿ ವಿನ್ ಡೀಸೆಲ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದರು. ಆ ಮೂಲಕ ಹಾಲಿವುಡ್‌ಗೆ ಕಾಲಿಟ್ಟಿದ್ದರು.
ಇದನ್ನೂ ಓದಿ: Dunki Box Office: ಮೊದಲ ದಿನವೇ ಅತ್ಯಂತ ಕಡಿಮೆ ಗಳಿಕೆ ಕಂಡ ಶಾರುಖ್ ಸಿನಿಮಾ ʻಡಂಕಿʼ!