ನವ ದೆಹಲಿ: ಆಫ್ರಿಕಾದ ಕಾಂಗೊ ರಾಷ್ಟ್ರದಲ್ಲಿ ವಿಶ್ವಸಂಸ್ಥೆಯ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾರತೀಯ ಗಡಿ ಭದ್ರತಾ ಪಡೆಯ( ಬಿಎಸ್‌ಎಫ್) ಇಬ್ಬರು ಸಿಬ್ಬಂದಿ ಹತ್ಯೆಗೀಡಾಗಿದ್ದಾರೆ. ಅವರು ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪೂರ್ವ ಕಾಂಗೊದ ಬುಟೆಂಬೊ ಪಟ್ಟಣದಲ್ಲಿ ಈ ದುರ್ಘಟನೆ ನಡೆದಿದೆ. ಬಿಎಎಸ್‌ಎಫ್ ಯೋಧರ ಹತ್ಯೆಗೆ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಆಘಾತ ವ್ಯಕ್ತಪಡಿಸಿದ್ದಾರೆ. ಕಾಂಗೊದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ವಿಶ್ವಸಂಸ್ಥೆ ನಿಯೋಜಿಸಿದ್ದ MONUSCO ಪಡೆಯಲ್ಲಿ ಈ ಬಿಎಸ್‌ಎಫ್ ಶಾಂತಿಪಾಲಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಈ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಅಗತ್ಯ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ವರದಿಗಳ ಪ್ರಕಾರ ಸ್ಥಳೀಯರು ವಿಶ್ವಸಂಸ್ಥೆಯ ಶಾಂತಿಪಾಲನಾಪಡೆಯ ವಿರುದ್ಧ ಪ್ರತಿಭಟನೆಗೆ ಕರೆ ಕೊಟ್ಟಿದ್ದರು. ಸೋಮವಾರ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತು. ವಿಶ್ವಸಂಸ್ಥೆಯ ಸ್ಥಳೀಯ ಕಚೇರಿಗೆ ಬೆಂಕಿ ಹಚ್ಚಲಾಯಿತು. ಬಿಎಸ್‌ಎಫ್ ಸಿಬ್ಬಂದಿಯನ್ನು ಸುತ್ತುವರಿದ ೫೦೦ಕ್ಕೂ ಹೆಚ್ಚು ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದರು. ಕಾಂಗೊ ಪೊಲೀಸರು ಗಲಭೆ ನಿಯಂತ್ರಿಸಲು ಯತ್ನಿಸಿದರು. ಆದರೆ ಹಿಂಸಾಚಾರದಲ್ಲಿ ಇಬ್ಬರು ಬಿಎಸ್‌ಎಫ್ ಸಿಬ್ಬಂದಿ ಹುತಾತ್ಮರಾದರು.