ಹೊಸದಿಲ್ಲಿ: ಮೇ ತಿಂಗಳಲ್ಲಿ ಭೂಮಿಗೆ 10,000 ಮೀಟರ್ (10 ಕಿಲೋಮೀಟರ್) ಆಳದ ಭಾರೀ ಬಾವಿಯನ್ನು ಕೊರೆದಿದ್ದ ಚೀನಾ, ಇನ್ನೊಂದು ಅಷ್ಟೇ ಆಳದ ಬಾವಿಯನ್ನು ಮತ್ತೊಮ್ಮೆ ಕೊರೆಯಲು ಹೊರಟಿದೆ. ಈ ಭೂಮಿಯಾಳದಲ್ಲಿರುವ ನೈಸರ್ಗಿಕ ಅನಿಲ ಸಂಪನ್ಮೂಲಕ್ಕೆ ಕನ್ನ ಹಾಕಲು ಮುಂದಾಗಿದೆ.
ಇದನ್ನು ಮಾಡಲು ಹೊರಟಿರುವುದು ಚೀನಾದ ನ್ಯಾಷನಲ್ ಪೆಟ್ರೋಲಿಯಂ ಕಾರ್ಪೊರೇಷನ್ (CNPC). ಶೆಂಡೊ ಚುವಾಂಕೆ- 1 ಎಂಬ ಹೆಸರಿನ ಈ ಬಾವಿಯನ್ನು ಅದು ಕೊರೆಯಲು ಮುಂದಾಗಿದೆ. ಇದರ ಅಂದಾಜು ಆಳ 10,520 ಮೀಟರ್ ಅಥವಾ 6.5 ಮೈಲು. ಈ ಮೊದಲು ಕ್ಷಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಕೊರೆದಿದ್ದ ಇಷ್ಟೇ ಆಳದ ಬಾವಿ ಕೊರೆಯುವ ಸಾಧನಗಳ ಶಕ್ತಿ ಪರಿಶೀಲನೆಯ ಪ್ರಾಯೋಗಿಕ ಉದ್ದೇಶ ಹೊಂದಿತ್ತು. ಪ್ರಸ್ತುತ ಸಿಚುಯಾನ್‌ನಲ್ಲಿ ಕೊರೆಯಲಾಗುವ ಈ ಬಾವಿಯ ಉದ್ದೇಶ ನೈಸರ್ಗಿಕ ಅನಿಲದ ಶೋಧ.
ಚೀನಾದ ಸಿಚುಯಾನ್ ಪ್ರಾಂತ್ಯದಲ್ಲಿ ಹಲವು ಅನಿಲ ಬಾವಿಗಳಿವೆ. ಮನೋಹರ ಪರ್ವತಗಳನ್ನೂ ಇದು ಹೊಂದಿದೆ. ಇಲ್ಲಿ ತೈಲ ಬಾವಿ ಕೊರೆಯುವುದು ಭೌಗೋಳಿಕ ಸವಾಲು ಕೂಡ ಆಗಿದೆ. ಇತ್ತೀಚಿನ ದಿನಗಳಲ್ಲಿ ಇಂಧನ ಸ್ವಾವಲಂಬನೆಗಾಗಿ ಚೀನಾ ಸರ್ಕಾರ ಅಲ್ಲಿನ ಇಂಧನ ಕಂಪನಿಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದೆ. ಜಾಗತಿಕ ತೈಲ ಬೆಲೆಯಲ್ಲಿನ ಏರಿಳಿತಗಳ ಪರಿಣಾಮವನ್ನು ತಪ್ಪಿಸಲು ಈ ಕ್ರಮ ಎಂದಿದೆ.
ಅತ್ಯಂತ ಆಳದ ಬಾವಿಯನ್ನು ಕೊರೆದ ದಾಖಲೆ ರಷ್ಯಾದ ಹೆಸರಿನಲ್ಲಿದೆ. ವಾಯುವ್ಯ ರಷ್ಯಾದ ಕೋಲಾ ಸೂಪರ್‌ಡೀಪ್ ಬೋರ್‌ಹೋಲ್‌ನ ಆಳ 12,262 ಮೀಟರ್.
ಇದನ್ನೂ ಓದಿ: Viral Post: ಕಲ್ಲು ತಿನ್ನುವ ಸಮಯ: ಚೀನಾದ ಈ ಕಲ್ಲಿನಡುಗೆ ವಿಶ್ವದ ಅತ್ಯಂತ ಕಠಿಣ ಅಡುಗೆ!