ಟಿಲ್ ಅವಿವ್: ಇದು ಈಗ ವೈರಲ್ ಆಗಿರುವ (Viral News) ಇಸ್ರೇಲಿನ ಒಬ್ಬಳು ಅಜ್ಜಿಯ ಕತೆ. ಅ.7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದಾಗ, ತಮ್ಮ ಮನೆಯನ್ನು ಉಗ್ರರು ಹೊಕ್ಕಾಗ ಅವರನ್ನು ಈ ಅಜ್ಜಿ ಏಕಾಂಗಿಯಾಗಿ ಎದುರಿಸಿದಳು. ಆಕೆ ಎದುರಿಸಿದ್ದು ಗನ್‌ನಿಂದ ಅಲ್ಲ, ಬದಲಾಗಿ ಬಿಸ್ಕೆಟ್, ಕೋಕ್, ಜೋಕ್‌ಗಳ ಮೂಲಕ!
ಈಕೆಯ ಧೀರೋದಾತ್ತ, ಸಮಯೋಚಿತ ವರ್ತನೆಗೆ ಸೂಕ್ತ ಮನ್ನಣೆಯೇ ದೊರೆತಿದೆ. ಇಸ್ರೇಲ್‌ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರು ಆಕೆಯನ್ನು ಭೇಟಿ ಮಾಡಿದ್ದಾರೆ. ಇಸ್ರೆಲ್ ದೇಶವನ್ನು ಕಾಪಾಡಿದ ಹೀರೋಗಳಲ್ಲಿ ಒಬ್ಬಳು ಎಂದು ಗೌರವಿಸಿದ್ದಾರೆ. 65 ವರ್ಷದ ಇಸ್ರೇಲಿ ಮಹಿಳೆ ರಾಚೆಲ್ ಎಡ್ರಿಯ ಈ ಕತೆ ಸ್ವಾರಸ್ಯಕರವಾಗಿದೆ.
ಈಕೆಯ ಮನೆಗೆ ದಾಳಿ ಮಾಡಿದ್ದ ಹಮಾಸ್ ಉಗ್ರರು, ಎದ್ರಿಯನ್ನೂ ಈಕೆಯ ಗಂಡ ಡೇವಿಡ್‌ರನ್ನೂ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಅವರಿಗೆ ಕಾಫಿ ಮತ್ತು ಮೊರೊಕನ್ ಕುಕೀ ನೀಡುತ್ತ ಸಮಯ ಕಳೆದ ಎದ್ರಿ, ಪೊಲೀಸರು ಬಂದು ಉಗ್ರರನ್ನು ಕೊಲ್ಲುವವರೆಗೂ ಅವರನ್ನು ಮೋಸಗೊಳಿಸಿದ್ದಳು. ರಾಚೆಲ್ ಎಡ್ರಿಯ ಮಗನೂ ಪೊಲೀಸ್ ಅಧಿಕಾರಿಯೇ ಆಗಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ.
ಸುಮಾರು 20 ಗಂಟೆ ಕಾಲ ಸಶಸ್ತ್ರ ಭಯೋತ್ಪಾದಕರು (Hamas terrorists) ಇವರನ್ನು ಒತ್ತೆಯಾಳುಗಳಾಗಿ (israel hostages) ಇರಿಸಿಕೊಂಡಿದ್ದರು. ಎದ್ರಿಯ ಮಗ ಪೊಲೀಸ್ ತಂಡದ ಜತೆ ಮನೆಯನ್ನು ಸುತ್ತುವರಿದಾಗ, ಉಗ್ರನೊಬ್ಬ ಆಕೆಯ ಕೊರಳಿಗೆ ಪಿಸ್ತೂಲ್ ಹಾಗೂ ಗ್ರೆನೇಡ್ ಹಿಡಿದು, ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಈ ಸಂದರ್ಭದಲ್ಲಿ ಜಾಣೆ ಎದ್ರಿ, ಮನೆಯೊಳಗೆ ಐವರು ಉಗ್ರರಿದ್ದಾರೆ ಎಂದು ಮುಖದ ಮುಂದೆ ಐದು ಬೆರಳುಗಳನ್ನು ಹರಡಿ ಹಿಡಿದು ಮಗನಿಗೆ ಸೂಚನೆ ಕೊಟ್ಟಿದ್ದಳು!
ರಾಚೆಲ್ ಮತ್ತು ಡೇವಿಡ್ ತಮ್ಮ ಬುದ್ಧಿವಂತಿಕೆ ಬಳಸಿಕೊಂಡು 20 ಗಂಟೆಗಳ ಕಾಲ ಹೇಗೆ ಬದುಕುಳಿದರು ಎಂಬುದನ್ನು ವಿವರಿಸಿದ್ದಾರೆ. ಆಕೆ ಉಗ್ರರಿಗೆ ಅಡುಗೆ ಮಾಡಿದ್ದಳು, ಕುಕೀಸ್ ಮಾಡಿಕೊಟ್ಟಿದ್ದಳು, ಕಾಫಿ ಸರ್ವ್ ಮಾಡಿದ್ದಳು. ಧೃತಿಗೆಡದ ಆಕೆ ʼʼನಾನು ನಿಮಗೆ ಹೀಬ್ರೂ ಭಾಷೆ ಕಲಿಸ್ತೇನೆ, ನೀವು ನನಗೆ ಅರೇಬಿಕ್ ಕಲಿಸಿʼʼ ಎಂದು ಜೋಕ್ ಕೂಡ ಮಾಡಿದ್ದಳು!
“”ಇದು ಜೀವನ ಮತ್ತು ಸಾವಿನ ವಿಷಯ ಎಂದು ನಾನು ಅರ್ಥಮಾಡಿಕೊಂಡೆ. ಅವರು ಹಸಿದಿದ್ದರೆ ಕೋಪಗೊಳ್ಳುತ್ತಾರೆ ಎಂದು ನನಗೆ ತಿಳಿದಿತ್ತು. ಹೀಗಾಗಿ ಅವರ ಹಸಿವೆ ನೀಗಿಸಲು ಬಿಸ್ಕೆಟ್, ಕೋಕ್, ನೀರು ನೀಡಿದೆ. ನನಗೆ ಇನ್ಸುಲಿನ್ ಚುಚ್ಚುಮದ್ದು ನೀಡು ಎಂದು ಉಗ್ರನಿಗೆ ಹೇಳಿದೆ. ನನಗೆ ಪೊಲೀಸ್ ಅಧಿಕಾರಿ ಮಗನಿದ್ದಾನೆ ಎಂಬುದನ್ನು ಅವರ ಗಮನದಿಂದ ತಪ್ಪಿಸಿದೆʼʼ ಎಂದಿದ್ದಾಳೆ ಎದ್ರಿ.
ನಂತರ ಎದ್ರಿಯ ಮಗನೂ ಇದ್ದ SWAT ತಂಡ ಅಲ್ಲಿಗೆ ಬಂದು ಉಗ್ರರನ್ನು ಕೊಂದು ಅವರನ್ನು ರಕ್ಷಿಸಿತು. ಇದೀಗ ರಾಚೆಲ್ ಎದ್ರಿ ನ್ಯಾಷನಲ್ ಹೀರೋ ಎನಿಸಿಕೊಂಡಿದ್ದಾಳೆ.
ಇದನ್ನೂ ಓದಿ: Israel Palestine War: ಗಾಜಾಗೆ 2.5 ಕೋಟಿ ರೂ. ದೇಣಿಗೆ ನೀಡಿದ ಮಲಾಲಾ; ದಾಳಿಗೆ ಖಂಡನೆ