ಲಂಡನ್: ಎರಡು ವರ್ಷಗಳ ಹಿಂದೆ 82 ವರ್ಷದ ಮಾಜಿ ಸೇನಾಧಿಕಾರಿಯನ್ನು (Army veteran) ಒಂದೇ ಏಟಿನಿಂದ ಕೊಂದ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೊಲೆಗೆ ಕಾರಣವಾದ ಘಟನೆ 2021ರ ಮೇಯಲ್ಲಿ ನಡೆದಿತ್ತು. 16 ವರ್ಷದ ಒಮರ್ ಮೌಮೆಚೆ (Omar Moumeche) ಇಂಗ್ಲೆಂಡ್‌ನ ಡರ್ಬಿ ಬಸ್ ನಿಲ್ದಾಣದಲ್ಲಿ (Derby bus station) 82 ವರ್ಷದ ಡೆನ್ನಿಸ್ ಕ್ಲಾರ್ಕ್ (Dennis Clarke) ಮೇಲೆ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣನಾಗಿದ್ದ. ಸದ್ಯ ಘಟನೆಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪೊಲೀಸರು ಹೊರ ಬಿಟ್ಟಿದ್ದು, ವೈರಲ್ ಆಗಿದೆ (Viral News).
ಘಟನೆಯ ವಿವರ
ಅಂದು ಡೆನ್ನಿಸ್ ಕ್ಲಾರ್ಕ್ ಶಾಪಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದರು. ಆಗ ಒಮರ್ ಮೌಮೆಚೆ ಮತ್ತು ಆತನ ಸ್ನೇಹಿತರು ಎಸ್ಕಲೇಟರ್‌ನಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿ ಆ ಬಗ್ಗೆ ಪ್ರಶ್ನಿಸಿದರು. ಸೂಪರ್ ಮಾರ್ಕೆಟ್‌ನಿಂದ ಹೊರಟ ಅವರು ಡರ್ಬಿ ಬಸ್ ನಿಲ್ದಾಣದವರೆಗೆ ಒಮರ್ ಮೌಮೆಚೆ ಮತ್ತು ಆತನ ಗುಂಪನ್ನು ಹಿಂಬಾಲಿಸಿದರು. ಬಸ್ ನಿಲ್ದಾಣದಲ್ಲಿ ಅವರ ಮೇಲೆ ಮೌಮೆಚೆ ಹಲ್ಲೆ ನಡೆಸಿದ. ಡೆನ್ನಿಸ್ ಕ್ಲಾರ್ಕ್ ಅವರನ್ನು ನೆಲಕ್ಕೆ ಬೀಳಿಸಿ ಮೌಮೆಚೆ ಬಲವಾಗಿ ಗುದ್ದಿದ. ಬಳಿಕ ಮೌಮೆಚೆ ಮತ್ತು ಆತನ ಸ್ನೇಹಿತರು ಸ್ಥಳದಿಂದ ಓಡಿ ಹೋದರೂ ಕೆಲವೇ ನಿಮಿಷಗಳಲ್ಲಿ ಅವರನ್ನು ಬಂಧಿಸಲಾಯಿತು. ಮೌಮೆಚೆ ಹೊಡೆದ ರಭಸಕ್ಕೆ ಡೆನ್ನಿಸ್ ಕ್ಲಾರ್ಕ್ ನೆಲಕ್ಕೆ ಬಿದ್ದು, ತಲೆಬುರುಡೆ ಒಡೆದು ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಸುಮಾರು 9 ದಿನಗಳ ನಂತರ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಡರ್ಬಿಶೈರ್ ಪೊಲೀಸರು ದಾಳಿಯ ಆಘಾತಕಾರಿ ತುಣುಕನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕ್ಲಾರ್ಕ್ ಅವರನ್ನು ಹದಿಹರೆಯದವರ ಗುಂಪು ಸುತ್ತುವರಿದಿರುವುದು ಕಾಣಿಸುತ್ತದೆ. ಸದ್ಯ ಇದು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. 18 ವರ್ಷದ ಮೌಮೆಚೆ ನರಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದ್ದು, ಡರ್ಬಿ ಕ್ರೌನ್ ನ್ಯಾಯಾಲಯದಲ್ಲಿ ಶುಕ್ರವಾರ (ನವೆಂಬರ್ 17) ಎರಡು ವರ್ಷಗಳ ಬಂಧನದ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: Viral Video: ಕೋಳಿಯ ಹಿಂಭಾಗಕ್ಕೆ ಪಟಾಕಿ ತುರುಕಿ ಸಿಡಿಸಿದರು! ಕೃತ್ಯ ಎಸಗಿದವರಿಗೆ ಶಿಕ್ಷೆಗೆ ಆಗ್ರಹ
ಅಧಿಕಾರಿ ಹೇಳಿದ್ದೇನು?
ಕ್ಲಾರ್ಕ್ ಸಾವಿನ ತನಿಖೆ ನಡೆಸಿದ ಅಧಿಕಾರಿಯೊಬ್ಬರು ಮಾತನಾಡಿ, “ಸಿಸಿಟಿವಿ ದೃಶ್ಯಾವಳಿಗಳು ಮತ್ತು ಅನೇಕ ಸಾಕ್ಷಿಗಳ ಹೇಳಿಕೆಗಳು ನಮ್ಮ ತನಿಖೆಗೆ ನೆರವಾದವು. ಮೌಮೆಚೆ ತಾನು ಆತ್ಮರಕ್ಷಣೆಗಾಗಿ ಈ ರೀತಿ ವರ್ತಿಸಿದ್ದೇನೆ ಎಂದು ವಾದಿಸಿದ್ದರೂ ಘಟನೆಯನ್ನು ಕೂಲಂಕುಷವಾಗಿ ಗಮನಿಸಿದ ನ್ಯಾಯಾಧೀಶರು ಆತನ ಹೇಳಿಕೆಯನ್ನು ನಿರಾಕರಿಸಿದರುʼʼ ಎಂದು ವಿವರಿಸಿದ್ದಾರೆ. “ಆ ದುರಂತ ಘಟನೆ ಕ್ಲಾರ್ಕ್ ಮತ್ತು ಮೌಮೆಚೆ ಕುಟುಂಬಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಯಾವುದೇ ಗಂಭೀರ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಕೋಪದ ಕೈಗೆ ಬುದ್ಧಿ ಕೊಡುವ ಮುನ್ನ ಸಾವಧಾನದಿಂದ ಆಲೋಚಿಸಬೇಕು ಎನ್ನುವುದರ ಪ್ರಾಧಾನ್ಯತೆಯನ್ನು ಈ ಘಟನೆ ತಿಳಿಸುತ್ತದೆʼʼ ಎಂದು ಅಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ. ಇದೇ ಘಟನೆಗೆ ಸಂಬಂಧಿಸಿದಂತೆ ಆ ಸಮಯದಲ್ಲಿ ಬಂಧಿಸಲ್ಪಟ್ಟ ಇತರ ಇಬ್ಬರು ಹದಿಹರೆಯದ ಹುಡುಗರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ಲಾರ್ಕ್ ಈ ಹಿಂದೆ ಸಿಂಗಾಪುರದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ