ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ ಒಂದಡೆ ಹೆಚ್ಚಾಗುತ್ತಿರುವ ಬಗ್ಗೆ ಪರಿಸರಪ್ರಿಯರು, ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದರೆ, ಈ ಕುರಿತಾಗಿ ನಾವು ಮುಂದಿನ ಜನಾಂಗವೂ ಬಾಳಿ ಬದುಕಬೇಕಾದರೆ ನೀರುಳಿಸುವುದರಿಂದ ಹಿಡಿದು ಏನೇನು ಮಾಡಬಹುದು ಎಂಬುದರ ಬಗ್ಗೆ ಕಾಲಕಾಲಕ್ಕೆ ಸಾಕಷ್ಟು ಚರ್ಚೆ ನಡೆಯುತ್ತಲೇ ಇದೆ. ಈಗ ಈ ಸಂಬಂಧವಾಗಿ ಜಪಾನಿನ ಟಾಯ್ಲೆಟ್ ತಂತ್ರಜ್ಞಾನವೊಂದು ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ.
ಕ್ರಿಯಾಶೀಲತೆ ಹಾಗೂ ಹೊಸ ಆವಿಷ್ಕಾರಗಳಲ್ಲಿ ಸದಾ ಮುಂದೆ ಇರುವ ಜಪಾನೀಯರ ನೀರುಳಿಸುವ ಆವಿಷ್ಕಾರ ಇದೀಗ ವ್ಯಾಪಕವಾಗಿ ಮತ್ತೆ ಸುದ್ದಿಯಾಗುತ್ತಿದೆ. ತೀರಾ ಸರಳವಾದ ವಿಚಾರವಾದರೂ ಜಗತ್ತಿಗೇ ನಿಜವಾಗಿ ಬಳಕೆಯಾಗುವ ಹಾಗೂ ಅತೀ ಅಗತ್ಯವಿರುವ ಆವಿಷ್ಕಾರ ಇದಾಗಿದೆ. ಕೇವಲ ಟಾಯ್ಲೆಟ್ ಆದರೂ, ನೀರು ಮರುಬಳಕೆಯಾಗುವ ವಿಧಾನ ಇದಾಗಿದ್ದು, ಇದನ್ನು ನೋಡಿದವರೆಲ್ಲ ಈ ಐಡಿಯಾಕ್ಕೆ ಫಿದಾ ಆಗಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಜಪಾನೀಯರು ಬಳಸುವ ಟಾಯ್ಲೆಟ್ ಒಂದು ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಕೇವಲ ಒಂದು ಟಾಯ್ಲೆಟ್ ಇಷ್ಟೊಂದು ಹವಾ ಸೃಷ್ಟಿಸಿದೆಯಾ ಎಂದು ಅವಕ್ಕಾಗುವ ಅಗತ್ಯವಿಲ್ಲ. ಇದೊಂದು ವಿಶೇಷ ಟಾಯ್ಲೆಟ್. ಒಂದೇ ಏಟಿಗೆ ಎರಡು ಹಣ್ಣು ಮಾದರಿಯ ಐಡಿಯಾ. ಈ ಟಾಯ್ಲೆಟ್ಟಿನಲ್ಲಿ ನೀವು ಮುಖ, ಕೈ ತೊಳೆಯಬಹುದು, ಶೌಚವನ್ನೂ ಮುಗಿಸಬಹುದು. ಎರಡಕ್ಕೂ ಒಂದೇ ನೀರು!
ಅರೆ, ಇದ್ಯಾವ ಥರ, ಎರಡಕ್ಕೂ ಒಂದೇ ನೀರಾ, ಅಯ್ಯೋ ಅಸಹ್ಯ ಎಂದು ಮುಖ ಕಿವುಚುವ ಅಗತ್ಯವಿಲ್ಲ. ಇಲ್ಲಿ ಬಹಳ ಬುದ್ಧಿವಂತಿಕೆಯಲ್ಲಿ ನೀರಿನ ಮರುಬಳಕೆಯಾಗುವಂತೆ ಮಾಡಲಾಗಿದೆ. ಇಂಥ ಕ್ರಿಯಾಶೀಲ ಯೋಚನೆ ಮಾಡಿರುವ ಜಪಾನೀಯನ ಬುದ್ಧಿಮತ್ತೆಗೀಗ ಇಂಟರ್ನೆಟ್ ಜಗತ್ತು ತಲೆದೂಗುತ್ತಿದೆ.
ಈ ಟಾಯ್ಲೆಟ್ಟಿನ ಡಿಸೈನ್ ಹೇಗಿದೆ ಎಂದರೆ, ಇಲ್ಲಿ ಕಮೋಡ್‌ಗೆ ಸಂಪರ್ಕ ನೀಡುವ ನೀರಿನ ಸಂಗ್ರಹದ ಪೆಟ್ಟಿಗೆಯ ಮೇಲಿನ ಭಾಗವನ್ನೇ ವಾಶ್ ಬೇಸಿನ್ ಆಗಿ ಪರಿವರ್ತಿಸಲಾಗಿದೆ. ಮೇಲಿರುವ ವಾಶ್ ಬೇಸಿನ್‌ನಲ್ಲಿ ಕೈ ತೊಳೆದರೆ, ಆ ನೀರು ವೇಸ್ಟ್ ಆಗಿ ಎಲ್ಲಿಗೋ ಹೋಗುವುದಿಲ್ಲ. ಅದು ನೇರವಾಗಿ ಇಳಿಯುವುದು ಟಾಯ್ಲೆಟ್ಟಿನ ಆ ನೀರು ಸಂಗ್ರಹದ ಪೆಟ್ಟಿಗೆಯೊಳಗೆ. ಇಲ್ಲಿ ಸಂಗ್ರಹವಾದ ಬಳಸಲ್ಪಟ್ಟ ನೀರು ಶೌಚ ಮಾಡಿದ ಮೇಲೆ ಫ್ಲಶ್ ಮಾಡಲು ಬಳಕೆಯಾಗುತ್ತದೆ. ಮುಖ ತೊಳೆದ ಸಿಂಕಿನ ನೀರು ವೃಥಾ ಹಾಳಾಗುವುದು ತಪ್ಪುತ್ತದೆ. ನೀರು ಪೋಲಾಗದೆ ಉಳಿಯುತ್ತದೆ.
ಇದನ್ನೂ ಓದಿ | Kohli Fan | ಲಡಾಖ್‌ನ 6ನೇ ತರಗತಿ ಬಾಲಕಿಯ ಕ್ರಿಕೆಟ್ ಪ್ರೇಮ, ಕೊಹ್ಲಿಯೇ ಆಕೆಗೆ ರೋಲ್ ಮಾಡೆಲ್
ಜಪಾನೀ ಟಾಯ್ಲೆಟ್ಟುಗಳು ಹೇಗೆ ನೀರುಳಿಸುತ್ತವೆ ಎಂಬುದನ್ನು ತೋರಿಸುವ ಚಿತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಜಪಾನಿನ ಬಹಳಷ್ಟು ಟಾಯ್ಲೆಟ್ಟುಗಳು ಹೇಗೆ ನೀರುಳಿಸುತ್ತವೆ ಎಂದರೆ, ಇಲ್ಲಿನ ಟಾಯ್ಲೆಟ್ಟುಗಳಲ್ಲಿ ವಾಶ್ ಬೇಸಿನ್ ಟಾಯ್ಲೆಟ್ಟಿಗೆ ಜೋಡಿಕೊಂಡಿರುತ್ತದೆ. ಈ ಸಿಂಕಿನಲ್ಲಿ ಕೈತೊಳೆದ ನೀರು ಕೆಳಗಿನ ಪೆಟ್ಟಿಗೆಯಲ್ಲಿ ಶೇಖರವಾಗಿ ಮುಂದಿನ ಫ್ಲಶ್‌ನಲ್ಲಿ ಮರುಬಳಕೆಯಾಗುತ್ತದೆ. ಜಪಾನ್ ಇಂತಹ ವಿನೂತನ ತಂತ್ರಜ್ಞಾನಗಳ ಮೂಲಕ ಪ್ರತಿವರ್ಷ ಮಿಲಿಯಗಟ್ಟಲೆ ಲೀಟರುಗಳಷ್ಟು ನೀರನ್ನು ಉಳಿಸುತ್ತದೆ ಎಂಬ ವಿವರಗಳೊಂದಿಗೆ ಟಾಯ್ಲೆಟ್ಟಿನ ಚಿತ್ರವನ್ನು ಪೋಸ್ಟ್ ಮಾಡಲಾಗಿತ್ತು. ಇದನ್ನು ಲಕ್ಷಗಟ್ಟಲೆ ಮಂದಿ ವೀಕ್ಷಿಸಿದ್ದು, ಈ ಐಡಿಯಾವನ್ನು ಮೆಚ್ಚಿಕೊಂಡಿದ್ದಾರೆ. ಸಾವಿರಗಟ್ಟಲೆ ಮಂದಿ ಇದೊಂದು ಅತ್ಯುತ್ತಮ ನೀರುಳಿಸುವ ವಿಧಾನ ಎಂದು ಮತ್ತೆ ಮತ್ತೆ ಶೇರ್ ಮಾಡುತ್ತಿದ್ದಾರೆ.
ಕೆಲವರು ಇದಕ್ಕೆ ಇನ್ನೂ ಹೆಚ್ಚಿನ ವಿಚಾರವನ್ನು ಸೇರಿಸಿದ್ದು, ಜಪಾನ್ ೮೦ ಟ್ರಿಲಿಯನ್ ಲೀಟರ್‌ಗಳಷ್ಟು ನೀರನ್ನು ಪ್ರತಿ ವರ್ಷ ಬಳಸುತ್ತಿದ್ದು ಇದರಲ್ಲಿ ಬಹುಪಾಲು ನೀರು ಕೃಷಿಗೆ ಬಳಕೆಯಾಗುತ್ತದೆ. ಈ ನೀರು ಮರುಬಳಕೆಯಿಂದ ಶೇ.೦.೦೦೦೦೧ರಷ್ಟು ಉಳಿಕೆಯಾಗಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಈ ಮೂಲಕ ಸಿಂಕಿನ ಮೆಟೀರಿಯಲ್ ಕೂಡಾ ಜಪಾನ್ ಸೇವ್ ಮಾಡುತ್ತಿದೆ ಎಂದು ತಮಾಷೆಯಾಗಿ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ | Viral Video | ಒದ್ದು, ಬಾಲ ಹಿಡಿದು ಎಳೆದ ವ್ಯಕ್ತಿಗೆ ತಕ್ಕ ಶಾಸ್ತಿ ಮಾಡಿದ ಹಸು; ಗೋಮಾತೆ ಕ್ರೋಧ ನೋಡಿ ಜನ ಫುಲ್ ಖುಷ್