ಇಟಲಿ: ವಿಧಿ ನಿಮ್ಮ ರಕ್ಷಣೆಗೆ ನಿಂತರೆ, ಯಮನೇ ಬಂದರೂ ನಿಮ್ಮ ಕೂದಲೂ ಕೊಂಕಿಸಲಾಗದು ಎಂಬುದಕ್ಕೆ ಈ ಘಟನೆ ಪ್ರತ್ಯಕ್ಷ ದೃಷ್ಟಾಂತ. ಈ ಯುವ ಜೋಡಿ ಒಂದೇ ದಿನದಲ್ಲಿ, ಎರಡು ಪ್ರತ್ಯೇಕ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದಾಗ ಆ ವಿಮಾನಗಳು ಅಪಘಾತಕ್ಕೆ ಒಳಗಾದರೂ ಯಾವುದೇ ಅಪಾಯವಿಲ್ಲದೆ ಬದುಕಿ ಉಳಿದಿದ್ದಾರೆ. ಇಟಲಿಯ ಜೋಡಿಯ ಈ ಕತೆ ಈಗ ವೈರಲ್ (Viral Story) ಆಗಿದೆ.
ಒಂದೇ ದಿನದಲ್ಲಿ ಕೆಲವೇ ಮೈಲುಗಳ ಅಂತರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ವಿಮಾನ ಅಪಘಾತಗಳಲ್ಲಿ ಈ ಭಾವಿ ದಂಪತಿಗಳು ಬದುಕುಳಿದರು. ಸ್ಟೆಫಾನೊ ಪಿರಿಲ್ಲಿ (30) ಮತ್ತು ಆಕೆಯ ಭಾವಿ ವರ ಆಂಟೋನಿಯೆಟ್ಟಾ ಡೆಮಾಸಿ(22) ಇಟಲಿಯ ಟೂರಿನ್‌ಗೆ ಹೋಗುವ ಮಾರ್ಗದಲ್ಲಿ ಇವರ ವಿಮಾನಗಳು ನೆಲಕ್ಕೆ ಕುಸಿದವು. ಭಯಾನಕ ಕ್ಷಣಗಳನ್ನು ಅನುಭವಿಸಿದರೂ ಜೋಡಿ ಪಾರಾಯಿತು. ಅಪಘಾತದ ಸ್ಥಳಗಳಿಂದ ಜೋಡಿಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದರು.
ಅಪಘಾತಗಳಲ್ಲಿ ಜೋಡಿ ಮತ್ತು ಪೈಲಟ್‌ಗಳಿಗೂ ಹೆಚ್ಚಿನ ಅಪಾಯವಾಗಲಿಲ್ಲ. ಡೆಮಾಸಿ ಅವರ ಪೈಲಟ್ ಪಾವೊಲೊ ರೊಟೊಂಡೊ (38) ತಲೆಗೆ ಗಾಯವಾಗಿದೆ. ಡೆಮಾಸಿ ಭುಜ ಗಾಯಗೊಂಡಿದೆ. ಪಿರಿಲ್ಲಿಯವರ ಎರಡು ಆಸನಗಳ ಟೆಕ್ನಾಮ್ P92 ಎಕೋ ಸೂಪರ್ ವಿಮಾನ ಹೆಚ್ಚು ಹಾನಿಗೊಳಗಾಗಲಿಲ್ಲ.
ಭಾನುವಾರ ಈ ಘಟನೆ ನಡೆಯಿತು. ಶುಭ್ರ ನೀಲಿ ಆಕಾಶವೆಂದು ಭಾವಿಸಿ ಹಾರಲು ಹೊರಟ ಜೋಡಿಗೆ ಇದ್ದಕ್ಕಿದ್ದಂತೆ ಕುಸಿದ ತಾಪಮಾನ ಹಾಗೂ ಮಂಜು ಎದುರಾಯಿತು. ಪಿರಿಲ್ಲಿ ಬುಸಾನೊದಲ್ಲಿ ಇಳಿಯಲು ನಿರ್ಧರಿಸಿದರು. ಮಂಜು ಕವಿದು ಕತ್ತಲಾಗಿದ್ದುದರಿಂದ ಏರ್‌ಸ್ಟ್ರಿಪ್‌ನಲ್ಲಿ ವಿದ್ಯುತ್ ಕೇಬಲ್‌ಗಳಿಗೆ ಡಿಕ್ಕಿ ಹೊಡೆದು ಹುಲ್ಲುಗಾವಲಿಗೆ ಅಪ್ಪಳಿಸಿದರು. ಈ ಸಂದರ್ಭದಲ್ಲಿ ಅವರು ಆಂಟೋನಿಯೆಟ್ಟಾಗೆ ಕರೆ ಮಾಡಲು ಯತ್ನಿಸಿದಾಗ ಅವರಿಗೂ ಅಪಘಾತವಾಗಿರುವುದು ಗೊತ್ತಾಯಿತು. ಇಬ್ಬರನ್ನೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ದರು.
ಇದನ್ನೂ ಓದಿ: Viral Story: ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿದ ಬಿಜೆಪಿ ಮುಖಂಡ ಅಂತ್ಯಕ್ರಿಯೆಗೆ ಮೊದಲು ಕಣ್ಣು ತೆರೆದ!