Site icon Vistara News

Viral video: ಊಟದ ಜೊತೆಗೆ ಕೆನ್ನೆಗೊಂದು ಪೆಟ್ಟು: ಜಪಾನಿನ ವಿಚಿತ್ರ ರೆಸ್ಟೋರೆಂಟಿನ ಕಥೆಯಿದು!

japan resuaurant

ಊಟದ ಜೊತೆಗೊಂದು ಪೆಟ್ಟೂ ತಿನ್ನಬೇಕೇ? ಹಾಗಾದರೆ ನೀವು ಈ ರೆಸ್ಟೋರೆಂಟಿಗೆ ಹೋಗಬಹುದು. ಪೆಟ್ಟು ಕೊಡುವ ರೆಸ್ಟೋರೆಂಟಿಗೆ ಯಾಕಾದರೂ ಹೋದೇವು ಎನ್ನುತ್ತೀರಾ? ಆದರೆ, ಜಪಾನಿನ ಈ ರೆಸ್ಟೋರೆಂಟಿಗೆ (japan restaurant) ಮಾತ್ರ ಜನ ಮುಗಿಬಿದ್ದು ಪೆಟ್ಟು ತಿನ್ನಲೆಂದೇ ಹೋಗುತ್ತಾರೆ! ಅದೂ ಕೂಡಾ ದುಡ್ಡು ಕೊಟ್ಟು ಪೆಟ್ಟು ತಿನ್ನಲು (Viral News) ಬಯಸುತ್ತಾರಂತೆ! ಇದು ವೈರಲ್‌ (Viral video) ಆಗಿದೆ.

ಹೌದು, ಇದು ನಿಜವೋ ಎಂದು ನೀವು ಚಿವುಟಿ ನೋಡಬೇಕಿಲ್ಲ. ಇತ್ತೀಚೆಗೆ ಜಪಾನಿನ ರೆಸ್ಟೊರೆಂಟ್‌ ಒಂದು ಊಟಕ್ಕೆ ಬಂದ ಗ್ರಾಹಕರ ಕೆನ್ನೆಗೆ ಬಾರಿಸುವ ವಿಡಿಯೋ ಒಂದು ಭಾರೀ ಸುದ್ದಿ ಮಾಡಿತ್ತು. ಊಟಕ್ಕೆ ಬಂದವರ ಕೆನ್ನೆಗೆ ಬಾರಿಸುವುದಾ, ಇದೇನು ಹುಚ್ಚಾಟ ಎನ್ನಬೇಡಿ. ಅದಕ್ಕೇ ಈ ರೆಸ್ಟೋರೆಂಟ್‌ ಬಗೆಗಿನ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಜಪಾನಿನ ನಗೋಯಾ ಪಟ್ಟಣದ ಶಚಿಹೋಕೋಯಾ ಎಂಬ ರೆಸ್ಟೋರೆಂಟಿನಲ್ಲಿ ಜಪಾನಿನ ಪಾರಂಪರಿಕ ದಿರಿಸಾದ ಕಿಮೋನೋ ಧರಿಸಿದ ಮಹಿಳೆಯೊಬ್ಬರು ಈ ರೆಸ್ಟೊರೆಂಟಿನಲ್ಲಿ ಕಪಾಳಮೋಕ್ಷ ಸೇವೆ ಮಾಡಲೆಂದೇ ನಿಂತಿರುತ್ತಾರಂತೆ.

ಊಟಕ್ಕೆ ಬರುವ ಮಂದಿ ತಮಗೆ ಕಪಾಳ ಮೋಕ್ಷ ಬೇಕೆಂದರೆ, 300 ಜಪಾನೀಸ್‌ ಯೆನ್‌ (170 ರೂಪಾಯಿಗಳು) ಪಾವತಿಸುವ ಮೂಲಕ ಕೆನ್ನೆಗೆ ಏಟನ್ನು ಕೇಳಿ ಪಡೆಯುತ್ತಾರೆ. ಅದರಲ್ಲೂ, ಇಂಥವರ ಕೈಯಿಂದಲೇ ಪೆಟ್ಟು ಬೇಕೇಂಬ ಆಸೆ ಇದ್ದರೆ ಇನ್ನೂ ಹೆಚ್ಚು ದುಡ್ಡು ಪಾವತಿಸಬೇಕಂತೆ. ರೆಸ್ಟೋರೆಂಟಿನಲ್ಲಿ ಊಟ ಸರ್ವ್‌ ಮಾಡುವ ವೈಟರ್‌ಗಳ ಪೈಕಿ ಇಂಥವರಿಂದಲೇ ಕಪಾಳಮೋಕ್ಷ ಬೇಕಾಗಿದೆ ಎಂಬ ಆಸೆ ಇದ್ದರೆ, ಅವರಿಂದ ವಿಶೇಷವಾಗಿ ಪೆಟ್ಟು ತಿನ್ನಲು 500 ಯೆನ್‌ ನೀಡಬೇಕಾಗುತ್ತದೆಯಂತೆ.

ಹೌದು ಇದೆಲ್ಲ ಆಶ್ಚರ್ಯವೆನಿಸಿದರೂ ಸತ್ಯ. ಈ ವಿಶೇಷವಾದ ಕಪಾಳಮೋಕ್ಷ ಸೇವೆಯನ್ನು ಹೆಚ್ಚಾಗಿ ಬಯಸಿ ಈ ರೆಸ್ಟೋರೆಂಟಿಗೆ ಬರುತ್ತಿದ್ದವರೆಲ್ಲ ವಿದೇಶೀ ಪ್ರವಾಸಿಗರಂತೆ! ಇದೀಗ ಈ ಕಪಾಳಮೋಕ್ಷದ ವಿಡಿಯೋ ವೈರಲ್‌ ಆದ ಮೇಲೆ ರೆಸ್ಟೋರೆಂಟ್‌ ತನ್ನ ಈ ಸೇವೆಯನ್ನು ಸ್ಥಗಿತಗೊಳಿಸಿದ್ದು ತನ್ನ ಎಕ್ಸ್‌ ಖಾತೆಯಲ್ಲಿ ಇನ್ನು ಮುಂದೆ ಪೆಟ್ಟು ಕೊಡಲಾಗುವುದಿಲ್ಲ ಎಂದು ಅಧಿಕೃತವಾಗಿ ಹೇಳಿಕೆ ನೀಡಿದೆ.

ಈ ಪೆಟ್ಟು ತಿನ್ನುವ ವಿಡಿಯೋ ವೈರಲ್‌ ಆದ ಮೇಲೆ, ಈ ರೆಸ್ಟೋರೆಂಟ್‌ಗೆ ಜನರು ಪೆಟ್ಟು ತಿನ್ನಲೆಂದೇ ಓಡಿ ಬರುತ್ತಿದ್ದಾರಂತೆ. ಕೇವಲ ಪೆಟ್ಟು ತಿನ್ನಲೆಂದೇ ಜನರು ಬರುತ್ತಿದ್ದು ಅವರನ್ನು ನಾವು ಒಳಗೆ ಬಿಡಲಾಗುತಿಲ್ಲ. ನಮ್ಮ ವಿಡಿಯೋ ಹೀಗೆ ವೈರಲ್‌ ಆಗುತ್ತದೆ ಎಂಬುದು ನಮಗೆ ತಿಳಿದಿರಲಿಲ್ಲ, ಹಾಗೂ ಇದರ ಪರಿಣಾಮದಿಂದ ರಾಶಿ ರಾಶಿ ಜನರು ಬರುತ್ತಿದ್ದು, ಅವರಿಗೆ ಈ ಸೇವೆ ಒದಗಿಸಲಾಗುತ್ತಿಲ್ಲ. ಹೀಗಾಗಿ, ಪೆಟ್ಟು ಕೊಡುವ ಕಾರ್ಯಕ್ರಮವಲ್ಲಿ ಇಲ್ಲಿಗೆ ನಿಲ್ಲಿಸಿದ್ದೇವೆ, ಕೇವಲ ಪೆಟ್ಟಿನ ಆಸೆಗಾಗಿ ಇಲ್ಲಿಗೆ ಯಾರೂ ಬರಬೇಡಿ ಎಂದು ಅದು ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಈ ವಿವಾದಿತ ಪೆಟ್ಟು ಕೊಡುವ ಸೇವೆ ಆರಂಭವಾಗಿದ್ದು ೨೦೧೨ರಲ್ಲಿ. ಇದು ವ್ಯಾಪಕವಾಗಿ ಜನರನ್ನು ಆಕರ್ಷಿಸಿದ್ದು, ಬಹಳ ಮಂದಿ ಇಲ್ಲಿಗೆ ಪೆಟ್ಟಿನ ಆಸೆಗಾಗಿಯೇ ಊಟಕ್ಕೆ ಬರಲಾರಂಭಿಸಿದರಂತೆ. ಮೊದಲು ಮಹಿಳಾ ಉದ್ಯೋಗಿಯೊಬ್ಬರನ್ನು ಇಲ್ಲಿ ಪೆಟ್ಟು ಕೊಡುವ ಕೆಲಸಕ್ಕೆ ನಿಯುಕ್ತಿಗೊಳಿಸಲಾಗಿತ್ತು. ನಂತರ ಪ್ರಸಿದ್ಧಿ ಹೆಚ್ಚಾಗುತ್ತಾ ಬಂದಂತೆ, ಒಬ್ಬರಿಂದ ಈ ಕೆಲಸ ಸಾಧ್ಯವಾಗದೆ, ಹಲವು ಯುವತಿಯರನ್ನು ಈ ಕೆಲಸಕ್ಕಾಗಿಯೇ ನೇಮಿಸಲಾಯಿತಂತೆ! ಸಧ್ಯಕ್ಕೆ ಈ ಸೇವೆ ಸ್ಥಗಿತಗೊಂಡಿದ್ದು, ಇದು ಶಾಶ್ವತವಾಗಿಯೋ, ತಾತ್ಕಾಲಿಕವಾಗಿಯೋ ಎಂಬುದನ್ನು ರೆಸ್ಟೊರೆಂಟ್‌ ಇನ್ನೂ ಖಚಿತಪಡಿಸಿಲ್ಲ.

ಇದನ್ನೂ ಓದಿ: Viral News: ಗೆಳತಿಯನ್ನು ವರಿಸಲು ಲಿಂಗವನ್ನೇ ಪರಿವರ್ತಿಸಿಕೊಂಡಳು!

Exit mobile version