Site icon Vistara News

Viral Video: ಇದು ಕುದುರೆ ಸವಾರಿಯಲ್ಲ, ಮೊಸಳೆ ಸವಾರಿ! ಭಯ ತರಿಸುವ ವಿಡಿಯೊ

#image_title

ಬೆಂಗಳೂರು: ಮಾಂಸವನ್ನು ತಿಂದು ಬದುಕುವ ಮೊಸಳೆಯನ್ನು ಕಂಡೊಡನೆ ಭಯವಾಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮನುಷ್ಯ ಅದೇ ಮೊಸಳೆಯ ಮೇಲೇ ಸವಾರಿ ಮಾಡಿದ್ದಾನೆ. ಅಷ್ಟೇ ಅಲ್ಲ ಅದು ತಿನ್ನುವ ಮಾಂಸವನ್ನೂ ಕೈನಲ್ಲಿ ಹಿಡಿದು, ಕೊಡದೆ ಕಾಡಿಸಿದ್ದಾನೆ. ಅಂಥದ್ದೊಂದು ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Viral Video: ಭಾರತದಲ್ಲಿ ವಿಶ್ವದಲ್ಲೇ ಎತ್ತರದ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ, ಇಲ್ಲಿದೆ ವಿಡಿಯೊ
ವ್ಯಕ್ತಿಯೊಬ್ಬ ಮೊಸಳೆಯ ಬೆನ್ನಿನ ಮೇಲೆ ಕುಳಿತಿದ್ದಾನೆ. ಕೈನಲ್ಲಿ ಮಾಂಸವನ್ನೂ ಹಿಡಿದಿರುವ ಆತ, ಮೊಸಳೆಗೆ ಆ ಮಾಂಸವನ್ನು ತೋರಿಸುತ್ತಿದ್ದಾನೆ ಕೂಡ. ಮೊಸಳೆ ತಿರುಗಿ ಮಾಂಸವನ್ನು ತಿನ್ನಲು ನೋಡಿದಾಗ ಮಾಂಸವನ್ನು ಹಿಂದೆ ತೆಗೆದುಕೊಂಡು ಆಟವಾಡಿಸುತ್ತಿದ್ದಾನೆ. ಹಲವು ಬಾರಿ ಇದೇ ರೀತಿ ಮಾಡಿದ ನಂತರ ಆತನೂ ಸೋತಿದ್ದು, ಮೊಸಳೆಗೆ ಹತ್ತಿರದಲ್ಲೇ ಮಾಂಸವನ್ನು ಹಿಡಿದಿದ್ದಾನೆ. ಹಿಂದೆ ತಿರುಗಿದ ಮೊಸಳೆ ಗಬಕ್ಕನೆ ಮಾಂಸವನ್ನು ತನ್ನ ಬಾಯಿಯೊಳಗೆ ಸೇರಿಸಿಕೊಂಡಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ಸದ್ದು ಮಾಡುತ್ತಿದೆ.

bilal.ahm4d ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು ಫೆ.18ರಂದೇ ಪೋಸ್ಟ್‌ ಮಾಡಲಾಗಿದೆಯಾದರೂ ಆ ವಿಡಿಯೊ ಇದೀಗ ನೆಟ್ಟಿಗರ ಕಣ್ಣನ್ನು ಸೆಳೆದಿದೆ. ಕೆಲವೇ ಸೆಕೆಂಡುಗಳಿರುವ ಈ ವಿಡಿಯೋ ಲಕ್ಷಾಂತರ ಮಂದಿಯಿಂದ ವೀಕ್ಷಣೆ ಕಂಡಿದೆ. ಸಾವಿರಾರು ಮಂದಿ ವಿಡಿಯೊವನ್ನು ಲೈಕ್‌ ಮಾಡಿದ್ದಾರೆ. ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.


“ಆ ವ್ಯಕ್ತಿ ಬಹುಶಃ ಮೊಸಳೆಗಳನ್ನು ಸಾಕಿ ಅಭ್ಯಾಸ ಇರುವವರೇ ಆಗಿರಬೇಕು. ಸಾಮಾನ್ಯರಿಗೆ ಅಷ್ಟು ಧೈರ್ಯ ಬರುವುದಕ್ಕೆ ಸಾಧ್ಯವಿಲ್ಲ”, “ಬಹುಶಃ ಆತನಿಗೆ ಜೀವನದ ಬಗ್ಗೆ ಜಿಗುಪ್ಸೆ ಬಂದಿರಬೇಕು. ಅದಕ್ಕಾಗಿ ಮೊಸಳೆ ಬಾಯಿಗೆ ಸಿಲುಕುವುದಕ್ಕೂ ಸಿದ್ಧವಾಗಿಯೇ ಹೋಗಿದ್ದಾನೆ”, “ಇದು ನಿಜವಾದ ಹುಚ್ಚಾಟ”, “ಇಂತದ್ದೇ ಕಾರಣಕ್ಕೆ ಹೆಣ್ಣು ಮಕ್ಕಳು ಹೆಚ್ಚು ವರ್ಷ ಬದುಕುತ್ತಾರೆ” ಎನ್ನುವಂತಹ ತರೇವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಈ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇನ್ನೂ ಹಲವಾರು ವೈರಲ್‌ ವಿಡಿಯೊಗಳನ್ನು ಹಂಚಿಕೊಂಡಿರುವುದನ್ನು ನೀವು ಕಾಣಬಹುದಾಗಿದೆ.

Exit mobile version