Site icon Vistara News

Visa Free: ಶ್ರೀಲಂಕಾ ಮಾತ್ರವಲ್ಲ; ಇನ್ನು ವೀಸಾ ಇಲ್ಲದೆ ಥೈಲ್ಯಾಂಡ್‌ಗೂ ತೆರಳಬಹುದು

thailand

thailand

ನವ ದೆಹಲಿ: ಇನ್ನು ಮುಂದೆ ನೀವು ಥೈಲ್ಯಾಂಡ್‌ಗೆ (Thailand) ವೀಸಾ ಇಲ್ಲದೆ (Visa Free) ಪ್ರಯಾಣಿಸಬಹುದು. ಹೌದು, ಇಂತಹದ್ದೊಂದು ಮಹತ್ವದ ನಿರ್ಧಾರವನ್ನು ಥೈಲ್ಯಾಂಡ್‌ ಪ್ರಕಟಿಸಿದೆ. ಭಾರತ ಮತ್ತು ತೈವಾನ್‌ ಪ್ರಯಾಣಿಕರು ಮುಂದಿನ ತಿಂಗಳಿನಿಂದ 2024ರ ಮೇ ತನಕ ಅಂದರೆ 6 ತಿಂಗಳ ಕಾಲ ವೀಸಾ ರಹಿತರಾಗಿ ಥೈಲ್ಯಾಂಡ್‌ಗೆ ತೆರಳಬಹುದು ಎಂದು ಸರ್ಕಾರದ ಮೂಲಗಳು ಮಂಗಳವಾರ ತಿಳಿಸಿವೆ. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ದೇಶದತ್ತ ಆಕರ್ಷಿಸಿ ನಿಧಾನಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅದರಂತೆ ಭಾರತ ಮತ್ತು ತೈವಾನ್‌ ಪ್ರವಾಸಿಗರು ನವೆಂಬರ್ 1ರಿಂದ ಮೇ 10ರ ನಡುವೆ ವೀಸಾ ಇಲ್ಲದೆ ಥೈಲ್ಯಾಂಡ್‌ಗೆ ಪ್ರವೇಶಿಸಲು ಸಾಧ್ಯವಾಗಲಿದೆ ಎಂದು ಪ್ರಧಾನಿ ಶ್ರೇತಾ ತವಿಸಿನ್ ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಚೀನಾ ಮತ್ತು ಕಜಕಿಸ್ತಾನದಿಂದ ಬರುವ ಪ್ರಯಾಣಿಕರಿಗೆ ಸೆಪ್ಟಂಬರ್‌ನಿಂದ ಮುಂದಿನ ವರ್ಷದ ಫೆಬ್ರವರಿವರೆಗೆ ಅಂದರೆ ಐದು ತಿಂಗಳ ಅವಧಿಗೆ ವೀಸಾ ಅವಶ್ಯಕತೆಗಳನ್ನು ಈ ಹಿಂದೆ ದೇಶವು ಮನ್ನಾ ಮಾಡಿತ್ತು.

ಪ್ರವಾಸೋದ್ಯಮ ಆದಾಯವನ್ನು ಕೋವಿಡ್ ಪೂರ್ವದ ಮಟ್ಟಕ್ಕೆ ಪುನಃಸ್ಥಾಪಿಸುವ ಗುರಿ ವೀಸಾ ಮನ್ನಾ ನಿರ್ಧಾರದ ಹಿಂದಿದೆ. ಥೈಲ್ಯಾಂಡ್ ಈ ವರ್ಷ ಇಲ್ಲಿಯವರೆಗೆ 2 ಕೋಟಿಗೂ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಿದೆ. ವರ್ಷಾಂತ್ಯದ ವೇಳೆಗೆ 2.8 ಕೋಟಿ ಪ್ರವಾಸಿಗರನ್ನು ನಿರೀಕ್ಷಿಸಲಾಗಿದೆ.

ಮಲೇಷ್ಯಾ, ಚೀನಾ ಮತ್ತು ದಕ್ಷಿಣ ಕೊರಿಯಾದ ನಂತರ ಸುಮಾರು 12 ಲಕ್ಷ ಆಗಮನದೊಂದಿಗೆ ಭಾರತವು ಈ ವರ್ಷ ಥೈಲ್ಯಾಂಡ್‌ ಪ್ರವಾಸೋದ್ಯಮದ ನಾಲ್ಕನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಥೈಲ್ಯಾಂಡ್ ಪ್ರವಾಸೋದ್ಯಮ ಪ್ರಾಧಿಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 15ರ ವೇಳೆಗೆ ಮಲೇಷ್ಯಾದಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಥೈಲ್ಯಾಂಡ್‌ಗೆ ಆಗಮಿಸಿದ್ದಾರೆ. ಇವರ ಸಂಖ್ಯೆ ಸುಮಾರು 30 ಲಕ್ಷ. ಎರಡನೇ ಸ್ಥಾನದಲ್ಲಿ ಚೀನಾ ಇದೆ. ಈ ವರ್ಷಾಂತ್ಯದ ವೇಳೆಗೆ ಸುಮಾರು 40 ಲಕ್ಷದಷ್ಟು ಚೀನಾ ಪ್ರವಾಸಿಗರು ಥೈಲ್ಯಾಂಡ್‌ಗೆ ಆಗಮಿಸುವ ನಿರೀಕ್ಷೆ ಇದೆ.

ಇದನ್ನು ಓದಿ: Mukesh Ambani: 4 ದಿನಗಳ ಅಂತರದಲ್ಲಿ ಅಂಬಾನಿಗೆ 3ನೇ ಜೀವ ಬೆದರಿಕೆ; ಅಚ್ಚರಿಯ ಬೇಡಿಕೆ!

ಶ್ರೀಲಂಕಾವೂ ರದ್ದುಪಡಿಸಿತ್ತು

ಇತ್ತೀಚೆಗೆ ಮಹತ್ವದ ಬೆಳೆವಣಿಗೆಯೊಂದರಲ್ಲಿ ಶ್ರೀಲಂಕಾ ಕ್ಯಾಬಿನೆಟ್‌ ಭಾರತ ಸೇರಿದಂತೆ 7 ರಾಷ್ಟ್ರಗಳಿಗೆ ವೀಸಾ ರಹಿತ ಪ್ರವೇಶಕ್ಕೆ ಅನುಮೋದನೆ ನೀಡಿತ್ತು. ಈ ಪ್ರಾಯೋಗಿಕ ಯೋಜನೆ ತಕ್ಷಣವೇ ಜಾರಿಗೆ ಬರಲಿದ್ದು, ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್‌, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್‌ ದೇಶಗಳ ಪ್ರಯಾಣಿಕರಿಗೆ ಐದು ತಿಂಗಳವರೆಗೆ ಉಚಿತ ವೀಸಾ ನೀಡುವ ಪ್ರಸ್ತಾಪಕ್ಕೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿತ್ತು. ಮಾರ್ಚ್‌ 31ರ ವರೆಗೆ ಈ ಯೋಜನೆ ಜಾರಿಯಲ್ಲಿರಲಿದೆ. ಹೆಚ್ಚಿನ ಪ್ರವಾಸಿಗರನ್ನು ದೇಶದತ್ತ ಆಕರ್ಷಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಮುಂಬರುವ ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆಯನ್ನು 50 ಲಕ್ಷಕ್ಕೇರಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದಾಗಿ ಮಾಧ್ಯಮ ವರದಿ ಮಾಡಿತ್ತು. ಈ ಕ್ರಮದಿಂದ ಪ್ರಯಾಣಿಕರಿಗೆ ವೀಸಾ ಪಡೆಯಲು ಖರ್ಚು ಮಾಡುವ ಹಣ ಮತ್ತು ಸಮಯ ಉಳಿತಾಯವಾಗುವ ನಿರೀಕ್ಷೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version