ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆ (United States presidential election) 2024ರಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ರಿಪಬ್ಲಿಕನ್ ಪಾರ್ಟಿ (Republican Party) ಕ್ರಮ ಕೈಗೊಂಡಿದೆ. ಪಕ್ಷದ ಅಧ್ಯಕ್ಷೀಯ ಸ್ಥಾನದ ಸ್ಪರ್ಧಿಗಳ ನಾಲ್ಕನೇ ಹಂತದ ಚರ್ಚೆ ಮುಕ್ತಾಯಗೊಂಡಿದೆ. ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸ್ಥಾನ ಪಡೆಯಲು ಪ್ರಮುಖ ಅಭ್ಯರ್ಥಿಗಳ ನಡುವೆ ತೀವ್ರ ಸೆಣಸಾಟ ಕಂಡು ಬಂದಿದೆ. ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy), ದಕ್ಷಿಣ ಕೆರೊಲಿನಾದ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ (Nikki Haley), ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ (Ron DeSantis) ಮತ್ತು ನ್ಯೂಜೆರ್ಸಿಯ ಮಾಜಿ ಗವರ್ನರ್ ಕ್ರಿಸ್ ಕ್ರಿಸ್ಟಿ (Chris Christie) ಸ್ಪರ್ಧಾ ಕಣದಲ್ಲಿದ್ದಾರೆ.
ನಾಲ್ಕನೇ ಅಧ್ಯಕ್ಷೀಯ ಚರ್ಚೆಯ ಬಳಿಕ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಮತ್ತು ರಾನ್ ಡೆಸಾಂಟಿಸ್ ಮುನ್ನಡೆಯಲ್ಲಿದ್ದಾರೆ. ಚರ್ಚೆಯ ವೇಳೆ ನಿಕ್ಕಿ ಹ್ಯಾಲೆ ಮೌನವಾಗಿದ್ದರು ಮತ್ತು ಇತರರು ಅವರ ವಿರುದ್ಧ ವಾಗ್ದಾಳಿ ನಡೆಸುವುದು ಕಂಡು ಬಂತು ಎಂದು ಮೂಲಗಳು ತಿಳಿಸಿವೆ.
ರಾನ್ ಡೆಸಾಂಟಿಸ್ ಮತ್ತು ವಿವೇಕ್ ರಾಮಸ್ವಾಮಿ ನಡುವೆ ನಿಕಟ ಸ್ಪರ್ಧೆ ನಡೆಯಿತು. ತಮ್ಮ ಅಭಿಪ್ರಾಯ ಮಂಡಿಸಲು ಇಬ್ಬರಿಗೂ ಬಹುತೇಕ ಒಂದೇ ರೀತಿಯ ಸಮಯಾವಕಾಶ ಲಭಿಸಿತ್ತು. ಅಭ್ಯರ್ಥಿಯ ಸಾಮರ್ಥ್ಯವನ್ನು ನಿರ್ಣಯಿಸಲು ಮಾತನಾಡುವ ಸಮಯವು ಏಕೈಕ ಮಾನದಂಡವಲ್ಲ. ಆದಾಗ್ಯೂ ಮಾತನಾಡಲು ಹೆಚ್ಚಿನ ಸಮಯಾವಕಾಶ ಸಿಕ್ಕರೆ ಸಾರ್ವಜನಿಕರ ಮನವೊಲಿಸಿ ಹೆಚ್ಚಿನ ಸಂಖ್ಯೆಯ ಮತ ಗಳಿಸಬಹುದು ಎನ್ನುವ ಲೆಕ್ಕಾಚಾರವಿದೆ.
ಚರ್ಚೆಯ ವೇಳೆ ನಿಕ್ಕಿ ಹ್ಯಾಲೆ, ಕಾರ್ಪೊರೇಟ್ ಹಣವನ್ನು ಸ್ವೀಕರಿಸುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ರಾನ್ ಡೆಸಾಂಟಿಸ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ನಿಕ್ಕಿ ಹ್ಯಾಲೆ, ʼʼರಾನ್ ಡೆಸಾಂಟಿಸ್ ತಮ್ಮ ಟ್ರ್ಯಾಕ್ ರೆಕಾರ್ಡ್ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ” ಎಂದು ಪ್ರತ್ಯುತ್ತರ ನೀಡಿದರು. ಇತ್ತ ದಾನಿಗಳ ಇಚ್ಛೆಯಂತೆ ನಡೆದುಕೊಂಡಿದ್ದಕ್ಕಾಗಿ ಹ್ಯಾಲೆ ವಿರುದ್ಧ ಆರೋಪ ಹೊರಿಸಿದ ವಿವೇಕ್ ರಾಮಸ್ವಾಮಿ, ವಿಶ್ವಸಂಸ್ಥೆಯಲ್ಲಿ ಹಿಲರಿ ಕ್ಲಿಂಟನ್ ಅವರಂತೆ ಭಾಷಣ ಮಾಡಿದ್ದಾರೆ ಎಂದು ಹೇಳಿದರು.
ಹಿಂದಿನ ಮೂರು ಚರ್ಚೆಗಳಲ್ಲಿನ ಉತ್ತಮ ಪ್ರದರ್ಶನ ಕಾರಣದಿಂದ ಅಧ್ಯಕ್ಷೀಯ ಚರ್ಚೆಯಲ್ಲಿ ನಿಕ್ಕಿ ಹ್ಯಾಲೆ ಮುಂದಿದ್ದಾರೆ. ಜತೆಗೆ ಅವರಿಗೆ ಅವರಿಗೆ ಪ್ರಬಲ ಕೋಚ್ ಕುಟುಂಬದ ಬೆಂಬಲ ವ್ಯಕ್ತವಾಗಿದೆ. ಜತೆಗೆ ಬಿಲಿಯನೇರ್ ಡೆಮಾಕ್ರಟಿಕ್ ದಾನಿ ರೀಡ್ ಹಾಫ್ಮನ್ ಅವರಿಂದ 250,000 ಡಾಲರ್ ಗಳಿಸಿದ್ದಾರೆ.
ಇದನ್ನೂ ಓದಿ: ಚೀನಾಗೆ ಭಾರೀ ಹಿನ್ನಡೆ, ರೋಡ್ ಆ್ಯಂಡ್ ಬೆಲ್ಟ್ ಯೋಜನೆಯಿಂದ ಹೊರ ಬಂದ ಇಟಲಿ!
ಇನ್ನು ವಿವೇಕ್ ರಾಮಸ್ವಾಮಿ ಮತ್ತು ಕ್ರಿಸ್ ಕ್ರಿಸ್ಟಿ ನಡುವೆಯೂ ತೀವ್ರ ವಾಗ್ವಾದ ನಡೆಯಿತು. ಉಕ್ರೇನ್ ಯುದ್ಧದ ವಿಚಾರದಲ್ಲಿ ರಾಮಸ್ವಾಮಿ ತಮ್ಮ ನಿಲುವು ಬದಲಾಯಿಸಿದ್ದಾರೆ ಎಂದು ಮಾಜಿ ಗವರ್ನರ್ ಕ್ರಿಸ್ ಕ್ರಿಸ್ಟಿ ಆರೋಪಿಸಿದರು. ಉಕ್ರೇನ್-ರಷ್ಯಾ ಯುದ್ಧವನ್ನು ನಿಲ್ಲಿಸಲು ಆದ್ಯತೆ ನೀಡುವುದಾಗಿ ತಿಳಿಸಿ, ಉಕ್ರೇನ್‌ನಿಂದ ವಶಪಡಿಸಿಕೊಂಡ ಎಲ್ಲ ಪ್ರದೇಶಗಳನ್ನು ರಷ್ಯಾಕ್ಕೆ ನೀಡುವುದಾಗಿ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ವಿವೇಕ್ ರಾಮಸ್ವಾಮಿ, ಇದು ಅವರು ಪ್ರಸ್ತಾಪಿಸಿದ ವಿಷಯವಲ್ಲ ಎಂದರು. ಪ್ಯಾಲೆಸ್ತೀನ್-ಇಸ್ರೇಲ್ ಯುದ್ಧದ ಬಗ್ಗೆಯೂ ಪ್ರಸ್ತಾವಿಸಿದ ಕ್ರಿಸ್ ಕ್ರಿಸ್ಟಿ, ಅಮೆರಿಕದ ಒತ್ತೆಯಾಳುಗಳನ್ನು ರಕ್ಷಿಸಲು ಯುಎಸ್ ಪಡೆಗಳನ್ನು ಸಂಪೂರ್ಣವಾಗಿ ಕಳುಹಿಸುವುದಾಗಿ ಹೇಳಿದರು ಮತ್ತು ಈ ಕುರಿತು ನೇರವಾಗಿ ಪ್ರತಿಕ್ರಿಯಿಸದ ರಾನ್ ಡಿಸಾಂಟಿಸ್ ಅವರನ್ನು ತರಾಟೆಗೆ ತೆಗೆದುಕೊಂಡರು. ಒಟ್ಟಿನಲ್ಲಿ ಕಾವೇರಿದ ಚರ್ಚೆ ನಡೆದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ನವೆಂಬರ್ 5ರಂದು ನಡೆಯಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ