Site icon Vistara News

Vivek Ramaswamy: ಯಶಸ್ಸಿನ ಗುಟ್ಟೇನು ಎಂದು ಕೇಳಿದ 16ರ ಬಾಲಕನಿಗೆ ವಿವೇಕ್‌ ರಾಮಸ್ವಾಮಿ ಕೊಟ್ಟ ಉತ್ತರವೇನು?

#image_title

ವಾಷಿಂಗ್ಟನ್‌: ಅಮೆರಿಕದಲ್ಲಿ ಈಗಾಗಲೇ ಭಾರತ ಮೂಲದ ಮಹಿಳೆಯೊಬ್ಬರು ಉಪಾಧ್ಯಕ್ಷರಾಗಿ ದೇಶಕ್ಕೆ ಹೆಮ್ಮೆ ತಂದುಕೊಟ್ಟದ್ದಾಗಿದೆ. ಇದೀಗ ಮತ್ತೊಬ್ಬ ಭಾರತ ಮೂಲದ ವ್ಯಕ್ತಿ ಅಮೆರಿಕದಲ್ಲಿ ಅಧ್ಯಕ್ಷರಾಗಲು ಸಿದ್ಧರಾಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಾರ್ಟಿಯಿಂದ ಸ್ಪರ್ಧಿಸುತ್ತಿರುವ ವಿವೇಕ್‌ ರಾಮಸ್ವಾಮಿ (Vivek Ramaswamy) ಅವರು ಸದ್ಯ ಅಮೆರಿಕದಾದ್ಯಂತ ಸುದ್ದಿಯಲ್ಲಿದ್ದಾರೆ. ಅವರು ಇತ್ತೀಚೆಗೆ 16 ವರ್ಷದ ಬಾಲಕನೊಬ್ಬನಿಗೆ “ಯಶಸ್ಸಿನ ಗುಟ್ಟು ಏನು?” ಎಂಬ ಬಗ್ಗೆ ಸ್ಫೂರ್ತಿಯ ಮಾತುಗಳನ್ನಾಡಿದ್ದು, ಆ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

“ಪ್ರಶ್ನಿಸಿ ತಿಳಿದುಕೊಳ್ಳುವ ಮನೋಭಾವ ಎಲ್ಲರಲ್ಲಿರಿ, ನೇರವಂತಿಕೆಯೂ ಇರಲಿ. ಈ ಬಾಲಕನನ್ನು ನೋಡಿ, ಈತ 2040ರ ಫೋರ್ಬ್ಸ್‌ ನಿಯತಕಾಲಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾನೆ” ಎಂಬ ಷರಾದೊಂದಿಗೆ ವಿವೇಕ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಒಂದು ಪೋಸ್ಟ್‌ ಈಗ ವೈರಲ್‌ ಆಗಿದೆ.

ವಿಡಿಯೋದಲ್ಲೇನಿದೆ?

16 ವರ್ಷದ ಬಾಲಕನೊಬ್ಬ ವಿವೇಕ್‌ ಅವರ ಬಳಿ ತೆರಳಿ ತನ್ನ ಪರಿಚಯ ಮಾಡಿಕೊಳ್ಳುತ್ತಾನೆ. ಬಳಿಕ ಮಾತನಾಡುತ್ತಾ, ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಏನು ಮಾಡಬೇಕು ಎಂಬ ನೇರ ಪ್ರಶ್ನೆಯನ್ನು ಅವರ ಬಳಿ ಕೇಳುತ್ತಾನೆ. ಅದಕ್ಕೆ ಉತ್ತರಿಸುವ ವಿವೇಕ್‌, “ನಾನು ಜೀವನದಲ್ಲಿ ಯಶಸ್ಸಿಗಾಗಿ ಸರಳ ಸೂತ್ರಗಳನ್ನು ಅನುಸರಿಸುತ್ತೇನೆ. ಒಂದನೆಯದಾಗಿ, ಜನರು ಯಾವುದರತ್ತ ಹೆಚ್ಚಾಗಿ ಸಾಗುತ್ತಿದ್ದಾರೆ ಎಂಬುದನ್ನು ಗಮನಿಸುತ್ತೇನೆ. ಹಾಗೆಯೇ ಅವರು ಯಾವುದರಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಕಂಡು ನಾನು ಅದರತ್ತ ಗಮನ ಹರಿಸುತ್ತೇನೆ” ಎಂದು ಹೇಳಿದ್ದಾರೆ.

ವಿವೇಕ್‌ ಅವರು ಏಪ್ರಿಲ್‌ 29ರಂದು ಈ ವಿಡಿಯೊವನ್ನು ಹಂಚಿಕೊಂಡಿದ್ದರು. ಈವರೆಗೆ ಈ ವಿಡಿಯೊ 5.6 ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಣೆಗೊಂಡಿದೆ. ಸಾವಿರಾರು ಮಂದಿ ವಿಡಿಯೊವನ್ನು ಲೈಕ್‌ ಮಾಡಿದ್ದು, ಹಂಚಿಕೊಂಡಿದ್ದಾರೆ. “ನಿಮಗೆ ಮತ ನೀಡುವುದಕ್ಕೆ ಕಾಯುತ್ತಿದ್ದೇವೆ”, “ನಿಮ್ಮಂತಹ ಯುವಕರೇ ಅಧ್ಯಕ್ಷರಾಗಬೇಕು”, “ನಿಮ್ಮ ಈ ಮಾತುಗಳನ್ನು ಕೇಳಿದ ಮೇಲೆ ನಿಮಗೇ ಮತ ಕೊಡಬೇಕೆಂದು ನಿಶ್ಚಯಿಸಿದ್ದೇವೆ” ಎನ್ನುವಂತಹ ಹಲವಾರು ಕಮೆಂಟ್‌ಗಳು ಬಂದಿವೆ.

ಇದನ್ನೂ ಓದಿ: Vivek Ramaswamy: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತ ಮೂಲದ ವಿವೇಕ್​ ರಾಮಸ್ವಾಮಿ ಸ್ಪರ್ಧೆ

ವಿವೇಕ್‌ ಅವರ ತಂದೆ ಮತ್ತು ತಾಯಿ ಕೇರಳದ ಪಾಲಕ್ಕಾಡು ಮೂಲದವರಾಗಿದ್ದು, ಸದ್ಯ ಅಮೆರಿಕದಲ್ಲಿ ವಾಸವಿದ್ದಾರೆ. ವಿವೇಕ್‌ ಅವರು ಅಮೆರಿಕದ ಪ್ರಸಿದ್ಧ ಉದ್ಯಮಿ, ರಾಜಕಾರಣಿ ಮತ್ತು ಬರಹಗಾರರೂ ಆಗಿದ್ದಾರೆ.

Exit mobile version