ಮಾಸ್ಕೋ: ಈ ವರ್ಷದ ಜೂನ್‌ನಲ್ಲಿ ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ವಿರುದ್ಧ ಬಂಡಾಯವೆದ್ದಿದ್ದ ಖಾಸಗಿ ಸೈನ್ಯ ವ್ಯಾಗ್ನರ್ (Wagner Group) ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ (Yevgeny Prigozhin), ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಬುಧವಾರ ರಷ್ಯಾದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ (plane crash) ಯೆವ್ಗೆನಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಈ ವಿಮಾನದಲ್ಲಿದ್ದ ಪ್ರಯಾಣಿಕರ ಪಟ್ಟಿಯಲ್ಲಿ ಯೆವ್ಗೆನಿ ಹೆಸರಿತ್ತು. ರಷ್ಯಾದ ಸುದ್ದಿ ಏಜೆನ್ಸಿಗಳು ಯೆವ್ಗೆನಿ ಸಾವನ್ನು ಘೋಷಿಸಿವೆ. ʼಇದೊಂದು ನಿರೀಕ್ಷಿತ ಸಾವುʼ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಪುಟಿನ್ ತಮ್ಮ ವಿರುದ್ಧ ಧ್ವನಿಯೆತ್ತುವ ವಿರೋಧಿಗಳನ್ನು ಸದ್ದಿಲ್ಲದೆ ಮುಗಿಸಿಬಿಡುವ ಕುಖ್ಯಾತಿ ಹೊಂದಿದ್ದಾರೆ.
“ಟ್ವೆರ್ ಪ್ರದೇಶದಲ್ಲಿ ಅಪಘಾತಕ್ಕೀಡಾದ ವಿಮಾನದ ಪ್ರಯಾಣಿಕರ ಪಟ್ಟಿಯಲ್ಲಿ ಯೆವ್ಗೆನಿ ಪ್ರಿಗೋಜಿನ್ ಹೆಸರು ಇದೆ. ರಷ್ಯಾದ ವಾಯುಯಾನ ಸಂಸ್ಥೆ ರೊಸಾವಿಯಾಟ್ಸಿಯಾ ಇದನ್ನು ತಿಳಿಸಿದೆ ಎಂದು ರಷ್ಯನ್ ಸುದ್ದಿ ಸಂಸ್ಥೆಗಳಾದ ಟಾಸ್, ರಿಯಾ, ಇಂಟರ್‌ಫ್ಯಾಕ್ಸ್ ವರದಿ ಮಾಡಿವೆ. ವಿಮಾನದಲ್ಲಿ 3 ಸಿಬ್ಬಂದಿ ಸೇರಿದಂತೆ 10 ಜನರಿದ್ದರು. ಪ್ರಾಥಮಿಕ ಮಾಹಿತಿಗಳ ಪ್ರಕಾರ ಎಲ್ಲರೂ ಸತ್ತಿದ್ದಾರೆ.
ವಿಮಾನ ಮಾಸ್ಕೋದಿಂದ ಸೇಂಟ್ ಪೀಟರ್ಸ್‌ಬರ್ಗ್‌ಗೆ ಪ್ರಯಾಣಿಸುತ್ತಿತ್ತು. ಇದೊಂದು ಖಾಸಗಿ ಎಂಬ್ರೇಯರ್ ಲೆಗಸಿ ವಿಮಾನ ಆಗಿತ್ತು. ಟ್ವೆರ್ ಪ್ರದೇಶದ ಕುಜೆಂಕಿನೋ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ ಎಂದು ರಷ್ಯಾ ವಿಮಾನಯಾನ ಸಚಿವಾಲಯ ತಿಳಿಸಿದೆ. ಶೋಧಕಾರ್ಯ ನಡೆಸಲಾಗುತ್ತಿದೆ. ವ್ಯಾಗ್ನರ್‌ನ ಅಧಿಕೃತ ಟೆಲಿಗ್ರಾಂ ಖಾತೆಯಲ್ಲಿ ಉರಿಯುತ್ತಿರುವ ವಿಮಾನದ ವಿಡಿಯೊವೊಂದನ್ನು ಪೋಸ್ಟ್ ಮಾಡಲಾಗಿದೆ.
ಮೇ ತಿಂಗಳಲ್ಲಿ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಪುಟಿನ್ ವಿರುದ್ಧ ಬಂಡೆದ್ದಿದ್ದರು. ರಷ್ಯಾದ ಮಿಲಿಟರಿ ನಾಯಕರು ತನ್ನ ಪಡೆಗಳಿಗೆ ಮದ್ದುಗುಂಡುಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿದ್ದರು. ಜೂನ್ 23ರ ರಾತ್ರಿ, ರಷ್ಯಾದ ಮಿಲಿಟರಿ ಕಮಾಂಡ್ ಅನ್ನು ಉರುಳಿಸಲು ಯೆವ್ಗೆನಿ ಪ್ರಿಗೊಜಿನ್ ಕರೆ ನೀಡಿದ್ದರು. 24 ಗಂಟೆಗಳ ಬಿಗಿ ಪರಿಸ್ಥಿತಿಯ ಬಳಿಕ ಪ್ರಿಗೋಜಿನ್ ತನ್ನ ಪಡೆಗಳನ್ನು ಹಿಂದೆ ತೆಗೆದುಕೊಂಡಿದ್ದ. ಯೆವ್ಗೆನಿ ಮತ್ತು ಪುಟಿನ್ ನಡುವೆ ರಾಜಿ ಸಂಧಾನ ನಡೆದಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ವಿಸ್ತಾರ Explainer: Russian Coup: ರಷ್ಯ ಅಧ್ಯಕ್ಷ ಪುಟಿನ್‌ಗೆ ಪರಮವೈರಿಯಾದ ಪರಮಾಪ್ತ; ಯಾರಿವನು ಯೆವ್ಗೆನಿ ಪ್ರಿಗೋಜಿನ್?