Site icon Vistara News

ಬಂದೂಕು ಲಾಬಿ ವಿರುದ್ಧ ನಾವು ಒಂದಾಗಿ ನಿಂತು ಹೋರಾಡುವುದು ಎಂದು? ಶಾಲಾ ಮಕ್ಕಳ ಹತ್ಯೆಗೆ ಮರುಗಿದ ಜೊ ಬೈಡೆನ್

jo biden

ವಾಷಿಂಗ್ಟನ್:‌ “ಒಂದು ದೇಶವಾಗಿ ನಾವು ನಮ್ಮನ್ನೇ ಕೇಳಿಕೊಳ್ಳಬೇಕಾಗಿದೆ. ಬಂದೂಕು ಲಾಬಿಯ ಎದುರು ದೇವರ ಹೆಸರಿನಲ್ಲಿ ನಾವು ನಿಂತು ಹೋರಾಡುವುದು ಯಾವಾಗ? ನಾವು ಮಾಡಬೇಕಾಗಿರುವುದೇನು? ಆ ಶಾಲೆಯಲ್ಲಿ ನಡೆದ ಹತ್ಯಾಕಾಂಡದಲ್ಲಿ ಹಲವಾರು ಪೋಷಕರಿಗೆ ಇನ್ನು ಮುಂದೆ ತಮ್ಮ ಮಕ್ಕಳನ್ನು ಕಾಣಲಾಗದು. ಅವರ ಭವಿಷ್ಯದ ಕನಸುಗಳು ನುಚ್ಚುನೂರಾಗಿವೆ. ನಾವು ಈಗ ಗನ್‌ ಲಾಬಿ ವಿರುದ್ಧ ಕಾರ್ಯಪ್ರವೃತ್ತರಾಗಲೇ ಬೇಕಾಗಿದೆ…ʼʼ

ಅಮೆರಿಕವನ್ನು ಬೆಚ್ಚಿಬೀಳಿಸಿರುವ ಟೆಕ್ಸಾಸ್‌ ಶಾಲೆಯಲ್ಲಿ ಮಂಗಳವಾರ ನಡೆದ ಭೀಕರ ದುರಂತದ ಬಳಿಕ ಅಧ್ಯಕ್ಷ ಜೋ ಬೈಡೆನ್‌ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದಾಗ ಹೀಗೆ ಭಾವುಕರಾಗಿದ್ದರು.

” ಮಕ್ಕಳನ್ನು ಕಳೆದುಕೊಳ್ಳುವುದು ಎಂದರೆ ಪೋಷಕರಿಗೆ ತಮ್ಮ ಆತ್ಮದ ತುಂಡನ್ನು ಕಿತ್ತು ಹಾಕಿದಂತೆಯೇ ಸರಿ. ಅದು ಹೃದಯದಲ್ಲಿ ಸೃಷ್ಟಿಸುವ ಟೊಳ್ಳು ನಿಮ್ಮನ್ನು ಅದರೊಳಗೆ ಕುಸಿಯುವಂತೆ ಮಾಡುತ್ತದೆ. ಮತ್ತು ಆ ಶೋಕದಿಂದ ಎಂದೂ ಹೊರಬರಲು ಸಾಧ್ಯವಾಗುವುದಿಲ್ಲ. ಅದು ಅತ್ಯಂತ ಯಾತನಾದಾಯಕʼʼ ಎಂದು ಜೋ ಬೈಡೆನ್‌ ಮರುಗಿದರು.

́ʼ ಸ್ಯಾಂಡಿ ಹುಕ್‌ ಎಲಿಮಂಟರಿ ಸ್ಕೂಲ್‌ನಲ್ಲಿ 26 ಮಂದಿಯನ್ನು ಬಲಿ ತೆಗೆದುಕೊಂಡ ನರಮೇಧ ಸಂಭವಿಸಿ 3,448 ದಿನಗಳು (10 ವರ್ಷ) ಕಳೆದಿವೆ. ಬಳಿಕ ಇಲ್ಲಿಯವರೆಗೆ ಶಾಲೆಗಳ ಅಂಗಳದಲ್ಲಿ ಬಂದೂಕಿನ ಮೊರೆತದ 900ಕ್ಕೂ ಹೆಚ್ಚು ಪ್ರಕರಣಗಳು ನಡೆದಿವೆ. ನನಗೆ ಸಾಕಾಗಿ ಹೋಗಿದೆ. ಬಳಲಿದ್ದೇನೆ. ಆದರೆ ನಾವು ಕಾರ್ಯಪ್ರವೃತ್ತರಾಗಲೇಬೇಕು. ಇಂಥದ್ದನ್ನು ತಡೆಯಲಾಗದು ಎಂದು ಹೇಳದಿರಿ. 18 ವರ್ಷದ ಮಕ್ಕಳು ಗನ್‌ ಸ್ಟೋರ್‌ಗೆ ತೆರಳಿ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವುದೇ ದೊಡ್ಡ ತಪ್ಪು.

ಐದು ದಿನಗಳ ಏಷ್ಯಾ ಪ್ರವಾಸದ ಬಳಿಕ ಅಮೆರಿಕಕ್ಕೆ ಹಿಂತಿರುಗಿದ್ದ ಜೋ ಬೈಡೆನ್‌ ಅವರಿಗೆ ದೊಡ್ಡ ಶಾಕ್‌ ಕಾದಿತ್ತು. ಟೆಕ್ಸಾಸ್‌ನ ಶಾಲೆಯಲ್ಲಿ 19 ವರ್ಷದ ಯುವಕ ನಡೆಸಿದ ಗುಂಡಿನ ದಾಳಿಗೆ 18 ಮಕ್ಕಳು ಸೇರಿ 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇದಾದ ಕೆಲ ಗಂಟೆಗಳಲ್ಲಿಯೇ ಶ್ವೇತಭವನದಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಜೋ ಬೈಡೆನ್‌, ಗನ್‌ ಲಾಬಿಯನ್ನು ಮಟ್ಟ ಹಾಕಲೇಬೇಕು ಎಂದು ಒತ್ತಿ ಹೇಳಿದ್ದಾರೆ.

” ಜಗತ್ತಿನ ಬೇರೆ ಎಲ್ಲೂ ಇಂಥ ಗುಂಡಿನ ದಾಳಿಗಳು ಶಾಲೆಗಳಲ್ಲಿ ನಡೆಯುತ್ತಿಲ್ಲ. ಇಲ್ಲಿ ಮಾತ್ರ ಏಕೆ ಹೀಗಾಗಿದೆ? ನಾವು ಇದನ್ನು ತಡೆಯಲೇಬೇಕುʼʼ ಎಂದು ಬೈಡೆನ್‌ ಹೇಳಿದರು.

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಮಾತನಾಡಿ, ” ನಮ್ಮ ಹೃದಯಗಳು ಒಡೆದು ಹೋಗಿವೆ. ಆದರೆ ದಾಳಿಯಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವಿನ ಮುಂದೆ ಇದು ಏನೂ ಅಲ್ಲ. ನಾವೆಲ್ಲರೂ ದಿಟ್ಟತನದಿಂದ ಇಂಥ ಹಿಂಸಾಚಾರ ಮರುಕಳಿಸದಂತೆ ನೋಡಿಕೊಳ್ಳಬೇಕು.

10 ದಿನಗಳಲ್ಲಿ ಎರಡನೇ ಬರ್ಬರ ಗುಂಡಿನ ದಾಳಿ

ಅಮೆರಿಕದಲ್ಲಿ ಕೇವಲ 10 ದಿನಗಳಲ್ಲಿ ಎರಡನೇ ಬಾರಿಗೆ ಭೀಕರ ಗುಂಡಿನ ದಾಳಿ ನಡೆದಿದೆ. ದೇಶದ ಶಾಲೆಗಳಲ್ಲಿ ಈ ವರ್ಷ ನಡೆದ 27ನೇ ಹಿಂಸಾಚಾರ ಇದಾಗಿದೆ. ಹತ್ತು ದಿನಗಳ ಹಿಂದೆ ಅಮೆರಿಕದ ಬಫಲೊದಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿ ನಡೆದ ಗುಂಡಿನ ದಾಳಿಗೆ 10 ಮಂದಿ ಅಸುನೀಗಿದ್ದರು. ಒಟ್ಟು 200ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿ ಪ್ರಕರಣಗಳು ನಡೆದಿವೆ. ಪ್ರತಿ ಘಟನೆಯಲ್ಲಿ ಸರಾಸರಿ 4 ಅಥವಾ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಅಮೆರಿಕದ ಶಾಲೆಗಳಲ್ಲಿ ನಡೆದ ಭೀಕರ ಗುಂಡಿನ ದಾಳಿ ಇದೇ ಮೊದಲಲ್ಲ…

Exit mobile version