ಲಂಡನ್: ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ ಭಾರತ ಮೂಲದ ರಿಷಿ ಸುನಕ್ (Rishi Sunak) ಇತಿಹಾಸ ಸೃಷ್ಟಿಸಿದ್ದಾರೆ. ಬ್ರಿಟನ್‌ನ ಅತಿ ಕಿರಿಯ ವಯಸ್ಸಿನ ಪ್ರಧಾನಿ, ಬ್ರಿಟನ್ ಪಿಎಂ ಹುದ್ದೆಗೆ ಏರಿದ ಮೊದಲ ಅನಿವಾಸಿ ಭಾರತೀಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಆದರೆ, ರಿಷಿ ಸುನಕ್ ಅವರು ಪ್ರಧಾನಿಯಾಗಿ ಹಲವು ಸಮಸ್ಯೆ, ಬಿಕ್ಕಟ್ಟು, ಸವಾಲುಗಳನ್ನು ಎದುರಿಸಬೇಕಾಗಿದೆ. ಬ್ರಿಟನ್ ರಾಜಕೀಯದಲ್ಲಿ ಬಿಕ್ಕಟ್ಟು ಉಂಟಾಗಿರುವ ಕಾಲದಲ್ಲಿ ರಿಷಿ ಪ್ರಧಾನಿಯಾದ ಕಾರಣ ಅವರ ಎದುರು ಬೆಟ್ಟದಷ್ಟು ಸವಾಲುಗಳಿವೆ. ಹಾಗಾದರೆ, ಯಾವವು ಆ ಸವಾಲುಗಳು? ಇಲ್ಲಿದೆ ಮಾಹಿತಿ.
- ಬ್ರಿಟನ್ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಕಳೆದ 13 ವರ್ಷದಲ್ಲೇ ಕಂಡು ಕೇಳರಿಯದ ಬಿಕ್ಕಟ್ಟು ಉಂಟಾಗಿದೆ. ಅಕ್ಟೋಬರ್‌ನಲ್ಲಿ ಆರ್ಥಿಕ ಚಟುವಟಿಕೆಯು 21 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇಂತಹ ಆರ್ಥಿಕ ದುಸ್ಥಿತಿಯನ್ನು ಮೆಟ್ಟಿ ನಿಲ್ಲುವುದು ರಿಷಿ ಸುನಕ್ ಅವರ ಪ್ರಮುಖ ಸವಾಲಾಗಿದೆ.
- ಆರ್ಥಿಕ ಬಿಕ್ಕಟ್ಟನ್ನು ಮೆಟ್ಟಿ ನಿಲ್ಲುವುದರ ಜತೆಗೆ ಆರ್ಥಿಕ ನೀತಿಗಳಲ್ಲಿ ಬದಲಾವಣೆ ತರುವುದು ಕೂಡ ಪ್ರಮುಖವಾಗಿದೆ. ಜನರ ಜೀವನ ವೆಚ್ಚ ಕಡಿಮೆಗೊಳಿಸುವುದು, ತೆರಿಗೆ ಇಳಿಸುವುದು, ವಿದ್ಯುತ್ ಶುಲ್ಕ ಸೇರಿ ಹಲವು ಶುಲ್ಕಗಳನ್ನು ಕಡಿಮೆ ಮಾಡುವುದು ಒಳಗೊಂಡು ಹತ್ತಾರು ಕ್ರಮಗಳ ಅವಶ್ಯಕತೆ ಇದೆ.
- ಉಕ್ರೇನ್ ಮೇಲೆ ಎಂಟು ತಿಂಗಳಿಂದ ಆಕ್ರಮಣ ಮಾಡುತ್ತಿರುವ ರಷ್ಯಾ ಮೇಲೆ ಬ್ರಿಟನ್ ಹತ್ತಾರು ನಿರ್ಬಂಧ ಹೇರಿದೆ. ಮತ್ತೊಂದೆಡೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕಚ್ಚಾ ತೈಲದ ಬೆಲೆಯನ್ನು ಗಗನಕ್ಕೇರಿಸಿದ್ದಾರೆ. ನಿರ್ಬಂಧದ ಹೊರತಾಗಿಯೂ ರಷ್ಯಾ ಜತೆ ಉತ್ತಮ ಬಾಂಧವ್ಯ ಹೊಂದಿ, ಇಂಧನ ಸಮಸ್ಯೆ ಬಗೆಹರಿಸುವುದು ಸವಾಲಿನ ಸಂಗತಿ.
- ಹಾಗೆ ನೋಡಿದರೆ, ಬ್ರಿಟನ್ ಆರ್ಥಿಕ ಹಿಂಜರಿತ, ಇಂಧನ ಸಮಸ್ಯೆ, ತೆರಿಗೆ ಕಡಿತದಷ್ಟೇ ಗಂಭೀರ ಸವಾಲು ಕನ್ಸರ್ವೇಟಿವ್ ಪಕ್ಷದಲ್ಲಿರುವ ಬಿಕ್ಕಟ್ಟು ಶಮನಗೊಳಿಸುವುದಾಗಿದೆ. ಬೋರಿಸ್ ಜಾನ್ಸನ್ ಆಪ್ತರು, ಅತೃಪ್ತರನ್ನು ಒಗ್ಗೂಡಿಸಿಕೊಂಡು ಸರ್ವರನ್ನು ಒಳಗೊಂಡ ಆಡಳಿತ ನೀಡುವುದು, ಇದೇ ಒಗ್ಗಟ್ಟು ಮುಂದುವರಿಸುವುದು ಕೂಡ ಸುನಕ್ ಅವರಿಗೆ ಸವಾಲಿನ ಸಂಗತಿಯಾಗಿದೆ.
- ಬ್ರಿಟನ್‌ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಆಡಳಿತ ವಿರೋಧಿ ಅಲೆಯಿದೆ. ಕೆಲವೇ ತಿಂಗಳುಗಳಲ್ಲಿ ಬಿಕ್ಕಟ್ಟಿನಿಂದಾಗಿ ಇಬ್ಬರು ಪ್ರಧಾನಿಗಳು ರಾಜೀನಾಮೆ ನೀಡಿದ್ದಾರೆ. ಹಾಗಾಗಿ, ಪ್ರತಿಪಕ್ಷಗಳು ಪ್ರಧಾನಿ ಮೇಲೆ ಕೆಂಗಣ್ಣು ಬೀರಿವೆ. ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗಿದೆ. ಹಾಗಾಗಿ, ಪ್ರತಿಪಕ್ಷಗಳಲ್ಲಿ ಒಮ್ಮತ ಮೂಡಿಸುವ ಜತೆಗೆ ಜನಪರ ಆಡಳಿತವು ಪ್ರಮುಖ ಸವಾಲಾಗಿದೆ.
ಇದನ್ನೂ ಓದಿ | Rishi Sunak | ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ನೂತನ ಪ್ರಧಾನಿ, ಅ.28ಕ್ಕೆ ಪದಗ್ರಹಣ