Site icon Vistara News

Liz Truss | ಬ್ರಿಟನ್‌ ಪ್ರಧಾನಿ ಲಿಜ್‌ ಟ್ರಸ್‌ ಹಿನ್ನೆಲೆ ಏನು? ಇವರ ಎದುರಿರುವ ಸವಾಲುಗಳು ಯಾವವು?

Liz Truss

ಲಂಡನ್‌: ಸುದೀರ್ಘ ಪ್ರಕ್ರಿಯೆಯ ಬಳಿಕ ಬ್ರಿಟನ್‌ ನೂತನ ಪ್ರಧಾನಿಯಾಗಿ ಲಿಜ್‌ ಟ್ರಸ್‌‌ (Liz Truss) ಅವರು ಆಯ್ಕೆಯಾಗಿದ್ದಾರೆ. ರಾಜಕೀಯ ಬಿಕ್ಕಟ್ಟು, ಆರ್ಥಿಕ ಹಿಂಜರಿತ, ಜನರ ಆಕ್ರೋಶದ ಮಧ್ಯೆಯೇ ಟ್ರಸ್ ಪ್ರಧಾನಿ ಹುದ್ದೆಗೇರಿದ್ದಾರೆ. ಹಾಗಾಗಿ, ಟ್ರಸ್‌ ಅವರ ಮೇಲೆ ಬ್ರಿಟನ್‌ ನಾಗರಿಕರ ನಿರೀಕ್ಷೆ ಹೆಚ್ಚಿದೆ. ಹಾಗಾದರೆ ಟ್ರಸ್ ಅವರ ಹಿನ್ನೆಲೆ, ರಾಜಕೀಯ ಅನುಭವ, ಆಡಳಿತಾತ್ಮಕ ಚಾಣಾಕ್ಷತನ ಹೇಗಿದೆ? ಅವರ ಮುಂದಿರುವ ಪ್ರಮುಖ ಸವಾಲುಗಳು ಯಾವವು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಲಿಜ್‌ ಟ್ರಸ್‌ ಹಿನ್ನೆಲೆ

ಲಿಜ್‌ ಟ್ರಸ್‌ ಅವರಿಗೆ ಬಾಲ್ಯದಿಂದಲೂ ರಾಜಕೀಯದಲ್ಲಿ ಅತೀವ ಆಸಕ್ತಿ ಇತ್ತು. ಹಾಗಾಗಿಯೇ ಅವರು ಪ್ರಾಥಮಿಕ ಶಾಲೆ ಹಂತದಲ್ಲಿಯೇ ಲಿಬರಲ್‌ ಡೆಮಾಕ್ರಟ್ಸ್‌ ಪಕ್ಷದ ಸದಸ್ಯೆಯಾಗಿದ್ದರು. ಇದಾದ ಬಳಿಕ ಬಲಬಂಥೀಯ ನಿಲುವುಳ್ಳ ಕನ್ಸರ್ವೇಟಿವ್‌ ಪಕ್ಷ ಸೇರಿದ ಅವರು ರಾಜಕೀಯ ದೃಷ್ಟಿಕೋನ, ಚಾಣಾಕ್ಷತನದಿಂದ ಹಲವು ಹುದ್ದೆಗಳನ್ನು ಪಡೆದರು.

2010ರಲ್ಲಿ ಸಂಸತ್‌ ಪ್ರವೇಶಿಸಿದ ಟ್ರಸ್‌ ಹಲವು ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಡೇವಿಡ್‌ ಕ್ಯಾಮರೂನ್‌, ಥೆರೆಸಾ ಮೇ ಹಾಗೂ ಬೋರಿಸ್‌ ಜಾನ್ಸನ್‌ ಸಂಪುಟದಲ್ಲಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ವ್ಯಾಪಾರ, ವಿದೇಶಾಂಗ ವ್ಯವಹಾರಗಳ ಮೇಲೆ ಹೆಚ್ಚಿನ ಹಿಡಿತ ಇರುವುದರಿಂದ ಇವರು ಸಮರ್ಥವಾಗಿ ದೇಶ ಮುನ್ನಡೆಸಲಿದ್ದಾರೆ ಎಂಬ ನಿರೀಕ್ಷೆ ಇದೆ. ‌ಬೋರಿಸ್‌ ಜಾನ್ಸನ್‌ ಸಂಪುಟದಲ್ಲಿ ಇವರು ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದರು.

ನೂತನ ಪ್ರಧಾನಿ ಎದುರಿರುವ ಸವಾಲುಗಳೇನು?

  1. ನಾಗರಿಕರ ಜೀವನ ವೆಚ್ಚವು ಗರಿಷ್ಠವಾಗಿದ್ದು, ಇದು ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಕಳೆದ ವರ್ಷ ಮನೆಯೊಂದರ ಸರಾಸರಿ ವಿದ್ಯುತ್‌ ಬಿಲ್‌ 1,200 ಪೌಂಡ್‌ ಇದ್ದರೆ, ಈಗ ಅದು 3 ಸಾವಿರ ಪೌಂಡ್‌ ದಾಟಿದೆ. ಇಂತಹ ಹಲವು ರೀತಿಯ ಬಿಲ್‌ಗಳು ಜನರನ್ನು ಬಾಧಿಸುತ್ತಿವೆ. ಇದನ್ನು ಟ್ರಸ್‌ ಹೇಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
  2. ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಜನ ಎರಡು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನೂತನ ಪ್ರಧಾನಿ ಆಯ್ಕೆಯಾದರೂ ನಮ್ಮ ಜೀವನಮಟ್ಟ ಸುಧಾರಿಸುವುದಿಲ್ಲ ಎಂದು ಈಗಾಗಲೇ ನಾಗರಿಕರು ಹೇಳುತ್ತಿದ್ದಾರೆ. ಹಾಗಾಗಿ, ಟ್ರಸ್‌ ಅವರು ಪ್ರತಿಭಟನೆ, ಜನರ ಆಕ್ರೋಶವನ್ನು ಶಮನ ಮಾಡುವುದು ಸವಾಲಾಗಿದೆ.
  3. ಸಂಸದರೊಬ್ಬರ ಹಗರಣ, ಆ ಸಂಸದರನ್ನು ರಕ್ಷಿಸಿದ ಆರೋಪದಿಂದಲೇ ಬೋರಿಸ್‌ ಜಾನ್ಸನ್‌ ಅಧಿಕಾರ ಕಳೆದುಕೊಳ್ಳುವಂತಾಯಿತು. ಹೀಗೆ, ಹಗರಣಗಳನ್ನು ಮೆಟ್ಟಿ, ಪಾರದರ್ಶಕ ಆಡಳಿತ ನೀಡುವುದು ಲಿಜ್‌ ಟ್ರಸ್‌ ಅವರಿಗೆ ನಿಜವಾಗಿಯೂ ಸವಾಲೆನಿಸಿದೆ. ಸಂಸದರ ವಿಶ್ವಾಸ ಗಳಿಸಿ, ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಮೆಟ್ಟಿ, ಉತ್ತಮ ಆಡಳಿತ ನೀಡುವ ಸವಾಲು ಟ್ರಸ್‌ ಎದುರಿಗಿದೆ.
  4. ಬ್ರೆಕ್ಸಿಟ್‌ ವಿಚಾರದಲ್ಲಿ ಈಗಾಗಲೇ ಲಿಜ್‌ ಟ್ರಸ್‌ ಅವರು ಯುಟರ್ನ್‌ ತೆಗೆದುಕೊಂಡಿರುವುದು ಟೀಕೆಗೆ ಕಾರಣವಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಬ್ರೆಕ್ಸಿಟ್‌ ವಿಚಾರದಲ್ಲಿ ಸ್ಪಷ್ಟ ನಿಲುವು, ಉಕ್ರೇನ್‌ ಬಿಕ್ಕಟ್ಟು, ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ವಿಚಾರದಲ್ಲಿ ಜಾಗತಿಕವಾಗಿ ಸಮನ್ವಯ ಸಾಧಿಸುವುದು ನೂತನ ಪ್ರಧಾನಿ ಮುಂದಿರುವ ಪ್ರಮುಖ ಸವಾಲುಗಳಾಗಿವೆ.

ಇದನ್ನೂ ಓದಿ | Liz Truss | ಇನ್ಫಿ ಮೂರ್ತಿ ಅಳಿಯ ಸುನಕ್‌ಗೆ ಕೈತಪ್ಪಿದ ಬ್ರಿಟನ್‌ ಪ್ರಧಾನಿ ಹುದ್ದೆ, ಲಿಜ್‌ ಟ್ರಸ್‌ಗೆ ಗೆಲುವು

Exit mobile version