ನವದೆಹಲಿ: ಹಮಾಸ್ ಬಂಡುಕೋರರು (Hamas Terrorists) ಮತ್ತು ಇಸ್ರೇಲ್ (Israel) ನಡುವಿನ ಯುದ್ಧವು (War) ಈಗ 21ನೇ ದಿನಕ್ಕೆ ಕಾಲಿಟ್ಟಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ದಾಳಿ (Hamas Attack) ಮಾಡುವ ಮೂಲಕ ಯುದ್ಧಕ್ಕೆ ನಾಂದಿ ಹಾಡಿದ್ದರು. ಹಮಾಸ್ ದಾಳಿಯಲ್ಲಿ 1,400 ಇಸ್ರೇಲಿಗರು ಮೃತರಾಗಿದ್ದರು. ಪ್ರತಿಯಾಗಿ ಇಸ್ರೇಲ್ ಗಾಜಾ ಪಟ್ಟಿಯ (Gaza Strip) ಮೇಲೆ ಯುದ್ಧವನ್ನು ಸಾರಿದ್ದು, 5000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಈ ಮಧ್ಯೆ, ಗಾಜಾ ಪಟ್ಟಿಯ ಸ್ವಾಧೀನಕ್ಕೆ ಮುಂದಾಗಿರುವ ಇಸ್ರೇಲ್‌ಗೆ ಹಮಾಸ್ ರಚಿಸಿಕೊಂಡಿರುವ ಸುರಂಗಗಳು ಭಾರಿ ಅಡ್ಡಿಯಾಗಿವೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ, ‘ಸ್ಪಾಂಜ್ ಬಾಂಬ್’ಗಳನ್ನು (Sponge Bomb) ಬಳಸಿ, ಹಮಾಸ್ ಬಂಡುಕೋರರಿಗೆ ಶಾಕ್ ನೀಡುತ್ತಿದೆ(Israel Palestine War).
ಶುಕ್ರವಾರ ಇಸ್ರೇಲಿ ಮಿಲಿಟರಿ ಹಮಾಸ್ ವಿರುದ್ಧ ಸಂಭಾವ್ಯ ನೆಲದ ಆಕ್ರಮಣಕ್ಕೆ ತಯಾರಿ ನಡೆಸುತ್ತಾ ಗಾಜಾದೆಡೆಗೆ ಮುನ್ನಡೆದಿದೆ. ಅದೇನೇ ಇದ್ದರೂ, ಹಮಾಸ್‌ನ ವ್ಯಾಪಕವಾದ ಸುರಂಗ ಜಾಲವು ಇಸ್ರೇಲಿ ಪಡೆಗಳಿಗೆ ದೊಡ್ಡ ಅಡಚಣೆಯಾಗಿದೆ. ಈ ಸುರಂಗಗಳಲ್ಲೇ ಹಮಾಸ್ ಬಂಡುಕೋರರು ಇಸ್ರೇಲಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ವರದಿಯಾಗಿದೆ.
ಏನಿದು ಸ್ಪಾಂಜ್ ಬಾಂಬ್?
ಹಮಾಸ್‌ನ ಈ ಸುರಂಗ ಜಾಲದ ವಿರುದ್ಧ ಹೋರಾಡಲು ಇಸ್ರೇಲ್ ಸ್ಪಾಂಜ್ ಬಾಂಬ್‌ಗಳನ್ನು ಬಳಸುತ್ತಿದೆ. ಈ ಬಾಂಬ್‌ಗಳು ಹಠಾತ್ ಬುರುಗು ಸೃಷ್ಟಿಸಿ, ವೇಗವಾಗಿ ಆಕ್ರಮಿಸಿಕೊಳ್ಳುತ್ತವೆ ಮತ್ತು ಅಷ್ಟೇ ವೇಗದಲ್ಲಿ ವಾಪಸ್ ಗಟ್ಟಿಯಾಗುತ್ತವೆ. ಹಮಾಸ್ ಗುಂಪು ತನ್ನ ಕಾರ್ಯಾಚರಣೆಗಾಗಿ ಬಳಸುತ್ತಿರುವ ಸುರಂಗ ಪ್ರವೇಶದ್ವಾರಗಳನ್ನು ಮುಚ್ಚಲು ಇಸ್ರೇಲ್ ಸ್ಪಾಂಜ್ ಬಾಂಬ್‌ಗಳನ್ನು ಬಳಸುತ್ತಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಈ ಸುದ್ದಿಯನ್ನೂ ಓದಿ: ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ ಭಾರತ ಕಾರಣ ಎಂದಿದ್ದ ಬೈಡೆನ್! ವೈಟ್ ಹೌಸ್ ಸ್ಪಷ್ಟೀಕರಣ ಏನು?
ಈ ಸಾಧನಗಳನ್ನು ಎರಡು ಪ್ರತ್ಯೇಕ ದ್ರವಗಳನ್ನು ಬೇರ್ಪಡಿಸುವ ಲೋಹದ ತಡೆಗೋಡೆಯೊಂದಿಗೆ ರಕ್ಷಣಾತ್ಮಕ ಪ್ಲಾಸ್ಟಿಕ್ ಕವಚದಲ್ಲಿ ಇಡಲಾಗಿರುತ್ತದೆ. ಸಕ್ರಿಯಗೊಳಿಸಿದ ನಂತರ, ಈ ದ್ರವಗಳು ಸಂಯೋಜಿಸುತ್ತವೆ ಮತ್ತು ಅವುಗಳ ಗೊತ್ತುಪಡಿಸಿದ ಗುರಿಯತ್ತ ಚಲಿಸುತ್ತವೆ. 2021ರಲ್ಲಿ ಗಾಜಾ ಗಡಿಯ ಸಮೀಪ ಸಿಮ್ಯುಲೇಟೆಡ್ ಸುರಂಗ ವ್ಯವಸ್ಥೆ ದ್ವಾರ ಬಂದ್ ಮಾಡಲು ಇಸ್ರೇಲ್ ರಕ್ಷಣಾ ಪಡೆಗಳು ಈ ಸ್ಪಾಂಜ್ ಬಾಂಬ್ ಬಳಸಿ, ಪರೀಕ್ಷಿಸಿದ್ದವು.
ಹಮಾಸ್, ಗಾಜಾಪಟ್ಟಿಯಲ್ಲಿ 1990ರ ಮಧ್ಯ ಭಾಗದಲ್ಲೇ ಸುರಂಗಗಳನ್ನು ಕೊರೆಯಲು ಶುರು ಮಾಡಿತ್ತು. 2006ರಲ್ಲಿ ಗಾಜಾ ಪಟ್ಟಿಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈ ಪ್ರಕ್ರಿಯೆಯನ್ನು ಪೂರೈಸಲು ಅವರಿಗೆ ಮತ್ತಷ್ಟು ಸರಳವಾಯಿತು. ನೆಲದಿಂದ ಆಕ್ರಮಣ ಮಾಡುತ್ತಿರುವ ಇಸ್ರೇಲ್ ಪಡೆಗಳಿಗೆ ಹಮಾಸ್ ಬಂಡುಕೋರರು ಈ ಸುರಂಗ ಮಾರ್ಗದ ಮೂಲಕ ಅಚ್ಚರಿ ರೀತಿಯಲ್ಲಿ ಪ್ರತಿ ದಾಳಿ ಮಾಡುತ್ತಿದ್ದಾರೆ. ಈ ಸುರಂಗಗಳ ಪ್ರವೇಶದ್ವಾರವನ್ನು ಮುಚ್ಚಿದರೆ ಅವರಿಗೆ ದಾಳಿ ಮಾಡಲು ಸಾಧ್ಯವಾಗುವುದಿಲ್ಲ. ಆ ಕೆಲಸಕ್ಕಾಗಿ ಈ ಸ್ಪಾಂಜ್ ಬಾಂಬ್ ಬಳಸಲಾಗುತ್ತಿದೆ.