ಕೊಲಂಬೊ: ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಇಂದು ಮುಂಜಾನೆ ಪತ್ನಿ ಮತ್ತು ಇಬ್ಬರು ಅಂಗರಕ್ಷರೊಡನೆ ಮಾಲ್ಡಿವ್ಸ್‌ಗೆ ಪಲಾಯನ ಮಾಡಿದ್ದಾರೆ. ಇದಕ್ಕಾಗಿ ಲಂಕಾದಲ್ಲಿ ಸಾವಿರಾರು ಜನ ಬೀದಿಗಿಳಿದು ಸಂಭ್ರಮಾಚರಿಸಿದ್ದಾರೆ. ಯುದ್ಧದಲ್ಲಿ ಗೆದ್ದಂತೆ ಬೀಗಿದ್ದಾರೆ.
ಎಲ್‌ಟಿಟಿಇ ವಿರುದ್ಧದ ಕಾರ್ಯಾಚರಣೆಯ ಹೀರೊ
ಅಧ್ಯಕ್ಷ ಗೊಟಬಯ ರಾಜಪಕ್ಸ ಈ ಹಿಂದೆ ಶ್ರೀಲಂಕಾದ ಅತ್ಯಂತ ಶಕ್ತಿಶಾಲಿ ರಾಜಕಾರಣಿಯಾಗಿ ಮೆರೆದವರು. ೨೦೦೯ರಲ್ಲಿ ಎಲ್‌ಟಿಟಿಇ ದಂಗೆಯನ್ನು ಮಟ್ಟ ಹಾಕಿದ ಮಿಲಿಟರಿ ಕಾರ್ಯಾಚರಣೆಯ ಮುಂಚೂಣಿಯಲ್ಲಿ ಇದ್ದವರು ಇದೇ ಗೊಟಬಯ ರಾಜಪಕ್ಸ. ಲಂಕಾ ಸೇನಾಪಡೆಯ ಉನ್ನತ ಹುದ್ದೆಯಲ್ಲಿದ್ದ ರಾಜಪಕ್ಸ ಬಳಿಕ ರಾಜಕಾರಣಿಯಾಗಿ ಬೆಳೆದು ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದರು.
ಹೀಗಿದ್ದರೂ, ಎಲ್‌ಟಿಟಿ ವಿರುದ್ಧದ ಕಾರ್ಯಾಚರಣೆಯ ವೇಳೆ ಸಾವಿರಾರು ಮಂದಿ ತಮಿಳರ ವಿರುದ್ಧ ಭಾರಿ ದೌರ್ಜನ್ಯ ಎಸಗಿದ ಆರೋಪವನ್ನೂ ಗೊಟಬಯ ಎದುರಿಸುತ್ತಿದ್ದಾರೆ.
ರಾಜಪಕ್ಸ ಕುಟುಂಬದ ಪ್ರಾಬಲ್ಯ ಅಂತ್ಯ
ಕಳೆದ ಎರಡು ದಶಕಗಳಿಂದಲೂ ರಾಜಪಕ್ಸ ಅವರ ಕುಟುಂಬವು ಶ್ರೀಲಂಕಾದ ರಾಜಕಾರಣದಲ್ಲಿ ಹಿಡಿತ ಸಾಧಿಸಿತ್ತು. ಗೊಟಬಯ ರಾಜಪಕ್ಸ ಅವರ ಸೋದರ ಮಹೀಂದ್ರಾ ರಾಜಪಕ್ಸ ಕೂಡ ಪ್ರಧಾನಿಯಾಗಿ ಅಧಿಕಾರದಲ್ಲಿ ಇದ್ದವರು. ೨೦೧೯ರ ನವೆಂಬರ್‌ನಲ್ಲಿ ಪ್ರಧಾನಿಯಾಗಿ, ೨೦೨೨ರ ಮೇನಲ್ಲಿ ಒತ್ತಡಕ್ಕೆ ಮಣಿದು ರಾಜೀನಾಮೆ ಕೊಟ್ಟಿದ್ದಾರೆ. ಗೊಟಬಯ ರಾಜಪಕ್ಸ ಕೂಡ ೨೦೧೯ರಲ್ಲಿ ಅಧ್ಯಕ್ಷರಾಗಿದ್ದರು. ಹೀಗೆ ಶ್ರೀಲಂಕಾದ ಅಧ್ಯಕ್ಷ ಮತ್ತು ಪ್ರಧಾನಿ ಹುದ್ದೆಯನ್ನು ಅಣ್ಣ ಮತ್ತು ತಮ್ಮ ವಹಿಸಿಕೊಂಡಿದ್ದರು. ಸಿಂಹಳ ಬೌದ್ಧ ಸಮುದಾಯದ ಬೆಂಬಲವನ್ನು ರಾಜಪಕ್ಸ ಗಳಿಸಿದ್ದರು. ಆದರೆ ದುರಾಡಳಿತ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಶ್ರೀಲಂಕಾವನ್ನು ತೀವ್ರ ಆರ್ಥಿಕ ದುಸ್ಥಿತಿಗೆ ತಳ್ಳಿದ್ದು, ಜನಾಕ್ರೋಶದ ಪರಿಣಾಮ ರಾಜಪಕ್ಸ ಕುಟುಂಬದ ರಾಜಕೀಯ ಪಾರಮ್ಯ ಅಂತ್ಯವಾಗಿದೆ ಎನ್ನುತ್ತಾರೆ ವಿಶ್ಲೇಷಕರು. ಮಾತ್ರವಲ್ಲದೆ ರಾಜಪಕ್ಸ ಕುಟುಂಬಕ್ಕೆ ದೇಶದಿಂದಲೇ ಪಲಾಯನ ಮಾಡುವ ಸನ್ನಿವೇಶವನ್ನು ಸೃಷ್ಟಿಸಿದೆ. ಶ್ರೀಲಂಕಾದಲ್ಲಿ ಆರ್ಥಿಕತೆ ಸಂಪೂರ್ಣ ಕುಸಿದಿದೆ ಎಂದು ಪ್ರಧಾನಿ ವಿಕ್ರಮಸಿಂಘೆ ಕೂಡ ಇತ್ತೀಚೆಗೆ ಹೇಳಿದ್ದರು.
ಶ್ರೀಲಂಕಾದಲ್ಲಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ
ಶ್ರೀಲಂಕಾದಲ್ಲಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಮತ್ತು ಪ್ರಭಾವ ಇದೆ. ಮಿಲಿಟರಿಯ ಮುಖ್ಯಸ್ಥರೂ ಅವರೇ ಆಗಿರುತ್ತಾರೆ. ಅವರು ಅಧಿಕಾರದಲ್ಲಿ ಇರುವ ತನಕ ಅರೆಸ್ಟ್ ಮಾಡುವಂತಿಲ್ಲ. ಅವರ ಅನುಪಸ್ಥಿತಿಯಲ್ಲಿ ಪ್ರಧಾನಿಯವರು ಡೆಪ್ಯುಟಿಯಾಗಿ ಜವಾಬ್ದಾರಿ ವಹಿಸಬಹುದು. ಆದರೆ ಲಂಕಾದಲ್ಲಿ ರಾಜಪಕ್ಸ ಕುಟುಂಬಕ್ಕೆ ಆಪ್ತರಾಗಿರುವ ಈಗಿನ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರಿಗೆ ಜನಪ್ರಿಯತೆ ಇಲ್ಲ.
ಕೊಲಂಬೊದಲ್ಲಿ ಸಂಭ್ರಮಾಚರಣೆ
ಅಧ್ಯಕ್ಷ ಗೊಟಬಯ ರಾಜಪಕ್ಸ ದೇಶ ಬಿಟ್ಟು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಕೊಲಂಬೊದಲ್ಲಿ ಸಾವಿರಾರು ಮಂದಿ ಬೀದಿಗಿಳಿದು ವಿಜಯೋತ್ಸವ ಆಚರಿಸಿದರು. ಪ್ರತಿಭಟನೆ ನಡೆಯುತ್ತಿರುವ ಸ್ಥಳ ಗಾಲೆ ಫೇಸ್ ಗ್ರೀನ್‌ನಲ್ಲಿ ಪ್ರತಿಭಟನಾಕಾರರು ಸಂಭ್ರಮಿಸಿದರು. ರಾಜಪಕ್ಸ ಕುಟುಂಬದಿಂದ ಭಾರಿ ವಂಚನೆಗೀಡಾಗಿರುವುದಾಗಿ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂದು ಸಂಜೆ ರಾಜೀನಾಮೆ ಸಂಭವ
ಇಷ್ಟೆಲ್ಲ ಆಗಿದ್ದರೂ ಅಧ್ಯಕ್ಷ ಗೊಟಬಯ ರಾಜಪಕ್ಸ ಇನ್ನೂ ಸ್ಪೀಕರ್‌ಗೆ ಅಧಿಕೃತವಾಗಿ ರಾಜೀನಾಮೆಯನ್ನು ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಇಂದು ಸಂಜೆಯ ವೇಳೆಗೆ ರಾಜೀನಾಮೆ ಪತ್ರ ರವಾನಿಸುವ ನಿರೀಕ್ಷೆ ಇದೆ.
ಗೊಟಬಯಗೆ ಸಹಕರಿಸಿಲ್ಲ ಎಂದು ಸ್ಪಷ್ಟಪಡಿಸಿದ ಭಾರತ
ಶ್ರೀಲಂಕಾ ಅಧ್ಯಕ್ಷ ಗೊಟಬಯ ಅವರು ಶ್ರೀಲಂಕಾದಿಂದ ಪರಾರಿಯಾಗಲು ಭಾರತ ಸಹಕರಿಸಿದೆ ಎಂಬ ವದಂತಿಗಳನ್ನು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಅಲ್ಲಗಳೆದಿದೆ.
ಇದನ್ನೂ ಓದಿ: ರಾಜೀನಾಮೆಗೆ ಮುನ್ನ ಶ್ರೀಲಂಕಾದಿಂದ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡಿವ್ಸ್‌ಗೆ ಪಲಾಯನ