Site icon Vistara News

ಸಲ್ಮಾನ್‌ ರಶ್ದಿ ಮೇಲೆ ದಾಳಿ ನಡೆಸಿದವನು ಯಾರು?

rusdie

ನ್ಯೂಯಾರ್ಕ್‌ನಲ್ಲಿ ಭಾರತೀಯ ಮೂಲದ ಲೇಖಕ ಸಲ್ಮಾನ್‌ ರಶ್ದಿ ಅವರ ಮೇಲೆ ದಾಳಿ ಮಾಡಿ ಚಾಕುವಿನಿಂದ ಇರಿದ ವ್ಯಕ್ತಿಯನ್ನು ಹದಿ ಮಾಟರ್‌ (24) ಎಂದು ಗುರುತಿಸಲಾಗಿದೆ. ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ. ರಶ್ದಿ ಅವರ ಆರೋಗ್ಯದ ಸ್ಥಿತಿಗತಿ ನೋಡಿಕೊಂಡು ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ.

ಸಲ್ಮಾನ್‌ ರಶ್ದಿ ಅವರು ಮಾತನಾಡಲು ವೇದಿಕೆಗೆ ಆಗಮಿಸುತ್ತಿದ್ದಂತೆ ಆರೋಪಿ ಅವರಿಗೆ ಕನಿಷ್ಠ ಹೊಟ್ಟೆಗೆ ಒಂದು ಬಾರಿ, ಕುತ್ತಿಗೆಗೆ ಒಂದು ಬಾರಿ ಇರಿದಿದ್ದಾನೆ.

ದಾಳಿಕೋರ ಹದಿ ಮಾಟರ್‌ ಮ್ಯಾನ್‌ಹಟ್ಟನ್‌ನ ಹಡ್ಸನ್‌ ನದಿಯ ಸಮೀಪದ ಫೇರ್‌ವ್ಯೂ ಅಪಾರ್ಟ್‌ಮೆಂಟ್‌ ನಿವಾಸಿ ಎಂದು ಗುರುತಿಸಲಾಗಿದೆ. ರಶ್ದಿ ಭಾಷಣಕ್ಕೆ ಈತ ಪಾಸ್‌ ಹೊಂದಿದ್ದ. ಈತನ ದಾಳಿಯ ಉದ್ದೇಶ ಇನ್ನೂ ಅಸ್ಪಷ್ಟವಾಗಿದೆ. ಈತ ಒಬ್ಬನೇ ಕಾರ್ಯಾಚರಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಮುಸ್ಲಿಂ ಮತೀಯ ಕಾರಣಗಳಿರಬಹುದು ಎಂಬುದನ್ನು ಪೊಲೀಸರು ಅಲ್ಲಗಳೆದಿಲ್ಲ. ಎಲೆಕ್ಟ್ರಾನಿಕ್‌ ಸಾಧನಗಳಿದ್ದ ಒಂದು ಬ್ಯಾಗನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.

ಹದಿ ಮಾಟರ್‌ ಇರಾನ್‌ ಸರ್ಕಾರದ ಪರ ಒಲವು ಇದ್ದವನು. ಇರಾನ್‌ ಸರ್ಕಾರ ರಶ್ದಿ ಅವರ ಮೇಲೆ ಫತ್ವಾ ಹೊರಡಿಸಿತ್ತು. ಹದಿಯ ಫೇಸ್‌ಬುಕ್‌ ಖಾತೆಯಲ್ಲಿ ರಶ್ದಿ ಮೇಲೆ ಫತ್ವಾ ಹೇರಿದ್ದ ಇರಾನಿನ ಧರ್ಮಗುರು ಅಯತೊಲ್ಲಾ ಖೊಮೇನಿಯ ಫೋಟೋ ಹಾಕಿಕೊಂಡಿದ್ದಾನೆ. 1989ರಲ್ಲಿ ರಶ್ದಿ ಅವರ ʼಸಟಾನಿಕ್‌ ವರ್ಸಸ್‌ʼ ಕೃತಿ ಹೊರಬಂದಾಗ ಅವರ ಮೇಲೆ ತಲೆದಂಡ ಹೊರಡಿಸಲಾಗಿತ್ತು. ಇರಾನ್‌ ಸರ್ಕಾರದ ಬೆಂಬಲವಾಗಿ ಈತ ಪೋಸ್ಟ್‌ಗಳನ್ನು ಮಾಡಿದ್ದಿದೆ. ಶಿಯಾ ಮತೀಯವಾದವನ್ನು ಈತ ಬೆಂಬಲಿಸಿದ್ದಾನೆ.

ದಾಳಿ ಮಾಡುವ ಸಮಯದಲ್ಲಿ ಹದಿ ಮಾಟರ್‌ ಕಪ್ಪು ಮುಸುಕು ಹಾಕಿಕೊಂಡಿದ್ದ ಹಾಗೂ ಕಪ್ಪು ದಿರಸು ಧರಿಸಿದ್ದ.

ಇದನ್ನೂ ಓದಿ: ಸಲ್ಮಾನ್ ರಶ್ದಿಗೆ ಶಸ್ತ್ರಚಿಕಿತ್ಸೆ; ಇರಿದ ಆರೋಪಿ ಪೊಲೀಸರ ವಶಕ್ಕೆ

Exit mobile version