ಲಂಡನ್: ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ಸೋಲಿಸಿ ಬ್ರಿಟನ್ ಪ್ರಧಾನಿ ಹುದ್ದೆಗೇರಿದ್ದ ಲಿಜ್ ಟ್ರಸ್ ಅವರು ಈಗ ರಾಜೀನಾಮೆ (Liz Truss Resigned) ನೀಡುವುದಾಗಿ ಪ್ರಕಟಿಸಿದ್ದಾರೆ. ಅಧಿಕಾರವಹಿಸಿಕೊಂಡು ಕೆಲವೇ ದಿನಗಳಲ್ಲಿ ಅವರ ವಿರುದ್ಧ ಅವಿಶ್ವಾಸದ ಮಾತುಗಳು ಕೇಳಿ ಬಂದಿದ್ದವು. ವಿಶೇಷವಾಗಿ, ಏರುತ್ತಿರುವ ಹಣದುಬ್ಬರ, ಆರ್ಥಿಕ ನೀತಿಗಳ ಸಂಬಂಧ ಲಿಜ್ ಸರ್ಕಾರದ ನೀತಿಗಳ ವಿರುದ್ಧ ವಿರೋಧ ವ್ಯಕ್ತವಾಗುತ್ತಿದ್ದವು. ಜತೆಗೇ, ಕನ್ಸರ್ವೇಟಿವ್ ಪಕ್ಷದೊಳಗೇ ಅಸಮಾಧಾನ ಹೊಗೆಯಾಡುತ್ತಿತ್ತು. ಹಾಗಾಗಿ, ಟ್ಯಾಬ್ಲಾಯ್ಡ್‌ವೊಂದು ಲಿಜ್ ವರ್ಸಸ್ ಎಲೆಕೋಸು (Liz v/s Lettuce) ಎಂಬ ತಮಾಷೆಯ ಸ್ಪರ್ಧೆಯನ್ನು ಲೈವ್ ಆಗಿ ಏರ್ಪಡಿಸಿತ್ತು!
ಇಂಗ್ಲೆಂಡ್‌ನ ದಿ ಡೈಲಿ ಸ್ಟಾರ್ ಪತ್ರಿಕೆಯ, ಯಾರು ಮೊದಲು ಅವಸಾನವಾಗುತ್ತಾರೆ ಎಂಬ ಪರಿಕಲ್ಪನೆಯಡಿ ಲಿಜ್ ವರ್ಸಸ್ ಎಲೆಕೋಸು ಸ್ಪರ್ಧೆ ಏರ್ಪಡಿಸಿತ್ತು. ಈ ಬಗ್ಗೆ ಲೈವ್ ಫೀಡ್ ಆರಂಭಿಸಿತ್ತು. ಅದರಲ್ಲಿ ಲಿಜ್ ಫೋಟೋ ಜತೆಗೆ ಮಂಜುಗಡ್ಡೆ ಆವೃತ್ತ ಎಲೆಕೋಸು ಇಡಲಾಗಿತ್ತು. ಈ ಸ್ಪರ್ಧೆಯಲ್ಲಿ ಓದುಗರು ತಮ್ಮ ಉತ್ತರವನ್ನು ಹೇಳಲು ಅವಕಾಶವಿತ್ತು. ಪ್ರಧಾನಿ ಹುದ್ದೆಯಿಂದ ಲಿಜ್ ಮೊದಲಿಗೆ ಇಳಿಯುತ್ತಾರಾ ಅಥವಾ ಎಲೆಕೋಸು ಮೊದಲು ಕೊಳೆಯುತ್ತಾ ಎಂಬುದನ್ನು ತಿಳಿಸಬೇಕಿತ್ತು. ಕೊನೆಗೆ ಈ ತಮಾಷೆಯ ಸ್ಪರ್ಧೆಯಲ್ಲಿ ಎಲೆಕೋಸು ಗೆದ್ದಿದೆ. ಲಿಜ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದಾರೆ!
ವಾಸ್ತವದಲ್ಲಿ ಈ ಎಲೆಕೋಸು ತಮಾಷೆಯ ಸ್ಪರ್ಧೆಗೆ ಡೈಲಿ ಸ್ಟಾರ್‌ಗೆ ಪ್ರೇರಣೆ ನೀಡಿದ್ದು, ದಿ ಎಕನಾಮಿಸ್ಟ್ ಮ್ಯಾಗ್‌ಜಿನ್‌ನಲ್ಲಿ ಪ್ರಕಟಾಗುವ ದಿ ಐಸ್‌ಬರ್ಗ್ ಲೇಡಿ ಕಾಲಂ. ಈ ಅಂಕಣದಲ್ಲಿ ಟ್ರಸ್ ಅವರನ್ನು ಶೆಲ್ಫ್-ಲೈಫ್ ಆಫ್ ಲೆಟಿಸ್ ಎಂದು ಬಣ್ಣಿಸಿದ್ದರು. ಅಂದರೆ, ಶೆಲ್ಪ್‌ನಲ್ಲಿಟ್ಟ ಎಲೆಕೋಸು ಎಷ್ಟು ದಿನ ಬಾಳಿಕೆ ಬರುತ್ತದೋ ಅಷ್ಟು ದಿನ ಲಿಜ್ ಅಧಿಕಾರದಲ್ಲಿ ಇರಬಹುದು ಎಂಬ ತಾತ್ಪರ್ಯವಷ್ಟೇ. ಅಂದರೆ, ಬೇಗನೆ ಅಧಿಕಾರ ಕಳೆದುಕೊಳ್ಳಬಹುದು ಎಂಬುದು ಆ ಅಂಕಣದ ತಿರುಳಾಗಿತ್ತು. ಅದೇ ಕಲ್ಪನೆಯನ್ನು ದಿ ಡೈಲಿ ಸ್ಟಾರ್ ವಾಸ್ತವ ರೂಪಕ್ಕೆ ತಂದಿತ್ತು.
ಇದನ್ನೂ ಓದಿ | Liz Truss Resign | ಬ್ರಿಟನ್ ಪಿಎಂ ಸ್ಥಾನಕ್ಕೆ ಲಿಜ್ ರಾಜೀನಾಮೆ, 44 ದಿನದ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ್ದರು