ಇಸ್ಲಮಾಬಾದ್: ಧರ್ಮಕ್ಕೆ ಅಪಚಾರ ಮಾಡುವ ವಿಷಯಗಳನ್ನು ತೆಗೆದುಹಾಕುವಂತೆ ವಿಕಿಪೀಡಿಯಾಕ್ಕೆ ಸೂಚಿಸಿದ್ದ ಪಾಕಿಸ್ತಾನ, ಈಗ ವಿಕಿಪೀಡಿಯಾವನ್ನೇ ದೇಶದಲ್ಲಿ ನಿರ್ಬಂಧಿಸಿದೆ (Pakistan blocks Wikipedia). ‘ಧರ್ಮ ನಿಂದನೆ’ಗೆ ಸಂಬಂಧಪಟ್ಟ ಯಾವೆಲ್ಲ ವಿಷಯಗಳನ್ನು ತೆಗೆಯಲು ವಿಕಿಪೀಡಿಯಾಕ್ಕೆ ಪಾಕಿಸ್ತಾನ ಸೂಚಿಸಿತ್ತು ಎಂಬುದು ಸ್ಪಷ್ಟವಾಗಿಲ್ಲ. ಫೆ.1ರಂದು ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (PTA) ವಿಕಿಪೀಡಿಯಾಕ್ಕೆ 48ಗಂಟೆಗಳ ಗಡುವು ಕೊಟ್ಟು, ಅಷ್ಟರೊಳಗೆ ಧರ್ಮ ನಿಂದನೆ ವಿಷಯಗಳನ್ನೆಲ್ಲ ತೆಗೆದು ಹಾಕದೆ ಇದ್ದರೆ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಆದರೆ ವಿಕಿಪೀಡಿಯಾ ಇದಕ್ಕೆ ಯಾವುದೇ ಪ್ರತ್ಯುತ್ತರವನ್ನೂ ಕೊಟ್ಟಿಲ್ಲ, ಪಾಕ್ ಹೇಳಿದ ವಿಷಯಗಳನ್ನು ತೆಗೆದೂ ಇಲ್ಲ. ಹೀಗಾಗಿ ಪಾಕಿಸ್ತಾನ ವಿಕಿಪಪೀಡಿಯಾವನ್ನೇ ಬ್ಲಾಕ್ ಮಾಡಿದೆ.
ವಿಕಿಪೀಡಿಯಾದಲ್ಲಿ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡುವ ಹಲವು ವಿಷಯಗಳಿವೆ ಎಂಬುದು ಪಾಕಿಸ್ತಾನದ ವಾದ. ಅಂದಹಾಗೇ, ಧರ್ಮನಿಂದನೆ ಪಾಕಿಸ್ತಾನದಲ್ಲಿ ಅತ್ಯಂತ ಸೂಕ್ಷ್ಮ ವಿಷಯ. ಹೀಗಾಗಿ ಅಂಥ ವಿಷಯಗಳನ್ನೆಲ್ಲ ತೆಗೆದು ಹಾಕುವಂತೆ ವಿಕಿಪೀಡಿಯಾಕ್ಕೆ ಪಾಕಿಸ್ತಾನದ ಪಿಟಿಎ ಸೂಚಿಸಿತ್ತು. 48 ಗಂಟೆ ಕಳೆದ ಮೇಲೆ ಕೂಡ ಅವೆಲ್ಲ ವಿಷಯಗಳೂ ವಿಕಿಪೀಡಿಯಾದಲ್ಲಿ ಲಭ್ಯವಾಗುತ್ತಿವೆ. ಇದೀಗ ನಿರ್ಬಂಧಗೊಂಡಿರುವ ವಿಕಿಪೀಡಿಯಾವನ್ನು ಮರುಸ್ಥಾಪಿಸುವ ಬಗ್ಗೆ ಸದ್ಯ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ನಾವು ಹೇಳಿದ ವಿಷಯಗಳನ್ನೆಲ್ಲ ತೆಗೆದು ಹಾಕಿದರೆ ಮಾತ್ರ ಮರುಸ್ಥಾಪಿಸಲಾಗುವುದು ಎಂದು ಪಿಟಿಎ ಅಧಿಕಾರಿಗಳು ಹೇಳಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ವಿಸ್ತಾರ Explainer: ಪಾಕಿಸ್ತಾನಕ್ಕೆ ಐಎಂಎಫ್ ಷರತ್ತುಗಳ ಉರುಳು, ಹೊಸ ಹಣಕಾಸು ಸಹಾಯ ಸದ್ಯಕ್ಕಿಲ್ಲ