ಅವಳಿ ಮಕ್ಕಳಿಗೆ ಜನ್ಮ ನೀಡಿದ 19 ವರ್ಷದ ಯುವತಿ ಈಗ ವೈದ್ಯಕೀಯ ಲೋಕಕ್ಕೇ ಅಚ್ಚರಿ ತಂದಿದ್ದಾಳೆ. ಆಕೆ ಗರ್ಭಿಣಿಯಾಗಿದ್ದಾಗಿನಿಂದ ಚಿಕಿತ್ಸೆ ನೀಡಿ, ಹೆರಿಗೆ ಮಾಡಿಸಿದ ವೈದ್ಯೆ ತುಲಿಯೊ ಜಾರ್ಜ್ ಫ್ರಾಂಕೊ ‘ಈ ಯುವತಿಯ ಕೇಸ್ ತುಂಬ ಅಪರೂಪ’ ಎಂದಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಅವಳಿ ಮಕ್ಕಳಿಗೆ ಜನ್ಮ ನೀಡಿದ ಯುವತಿ ಯಾಕೆ ಅಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾಳೆ?- ಈ ಸ್ಟೋರಿ ಓದಿ.
19 ವರ್ಷದ ಯುವತಿ ಒಂದೇ ದಿನ ಇಬ್ಬರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಳು. ಅದಾದ ಬಳಿಕ ಗರ್ಭ ಧರಿಸಿ, 9 ತಿಂಗಳ ನಂತರ ಇಬ್ಬರು ಮಕ್ಕಳಿಗೆ ಜನ್ಮ ನೀಡಿದಳು. ಆದರೆ ತಾನು ಒಂದೇ ದಿನ ಇಬ್ಬರೊಂದಿಗೆ ಸೆಕ್ಸ್ ನಡೆಸಿದ್ದರಿಂದ ಈ ಮಕ್ಕಳ ಅಪ್ಪ ಯಾರು ಎಂಬುದು ಆಕೆಗೆ ಗೊತ್ತಾಗಬೇಕಿತ್ತು. ಹಾಗಾಗಿ ತಾನು 8 ತಿಂಗಳ ಗರ್ಭಿಣಿ ಆಗಿದ್ದಾಗ ಮಕ್ಕಳ ಪಿತೃತ್ವ ಪರೀಕ್ಷೆ (ಡಿಎನ್ಎ ಟೆಸ್ಟ್) ಮಾಡಿಸಿದಳು. ಅದರಲ್ಲಿ ಬಂದ ವರದಿ ಮಾತ್ರ ಯುವತಿಯನ್ನೇ ಕಂಗಾಲು ಮಾಡಿತ್ತು. ಇಬ್ಬರೂ ಮಕ್ಕಳ ತಂದೆ ಒಬ್ಬರೇ ಆಗಿರಲಿಲ್ಲ. ಅಂದು ಯುವತಿ ಲೈಂಗಿಕ ಕ್ರಿಯೆ ನಡೆಸಿದ್ದ ಇಬ್ಬರಿಂದಲೂ ಒಂದೊಂದು ಮಗು ಜನಿಸಿತ್ತು!
ಈ ವಿಚಿತ್ರ ಘಟನೆ ನಡೆದದ್ದು ಬ್ರೆಜಿಲ್ನ ಮಿನಿರೋಸ್ ಎಂಬಲ್ಲಿ. ಯುವತಿ ತನ್ನ ಹೆಸರು ಹೇಳಲು ಇಚ್ಛಿಸದೆ ವಿಷಯವನ್ನು ಹಂಚಿಕೊಂಡಿದ್ದಾಳೆ. ‘ಡಿಎನ್ಎ ಟೆಸ್ಟ್ನ ವರದಿ ನೋಡಿ ನನಗೇ ಶಾಕ್ ಆಯಿತು. ಇಂಥದ್ದೊಂದು ವಿದ್ಯಮಾನ ಆಗಬಹುದು ಎಂದುಕೊಂಡಿರಲಿಲ್ಲ. ನಾನು ಕೇಳಿಯೂ ಇರಲಿಲ್ಲ. ಇಬ್ಬರೂ ಮಕ್ಕಳು ಬೇರೆಯವರಿಂದಲೇ ಹುಟ್ಟಿದ್ದರೂ ನೋಡಲು ಬಹುತೇಕ ಒಂದೇ ರೂಪದಲ್ಲಿದ್ದಾರೆ’ ಎಂದು ಹೇಳಿದ್ದಾಳೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯುವತಿಯ ವೈದ್ಯರು ‘ಮಹಿಳೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆಕೆಯ ಗರ್ಭಾವಸ್ಥೆ ಅವಧಿ ಎಲ್ಲ ಚೆನ್ನಾಗಿಯೇ ಇತ್ತು. ಯಾವುದೇ ರೀತಿಯ ತೊಂದರೆಯೂ ಆಗಿರಲಿಲ್ಲ. ಆದರೆ ಈ ಇಬ್ಬರೂ ಮಕ್ಕಳೂ ಒಬ್ಬ ವ್ಯಕ್ತಿಗೇ ಹುಟ್ಟದೆ ಇರುವುದೇ ವಿಚಿತ್ರ. ಇದು ತುಂಬ ಅಪರೂಪದ ಪ್ರಕರಣ. ಇಲ್ಲಿಯವರೆಗೆ ವಿಶ್ವದಾದ್ಯಂತ 20 ಕೇಸ್ಗಳು ಇರಬಹುದಷ್ಟೇ’ ಎಂದಿದ್ದಾರೆ.
ಹೀಗೆ ಆಗಬಹುದಾ?
ಇಬ್ಬರು ಪ್ರತ್ಯೇಕ ಪುರುಷರಿಂದ ಅವಳಿ ಮಕ್ಕಳು ಹುಟ್ಟುವುದು ತೀರ ಅಪರೂಪ. ಹಾಗಿದ್ದಾಗ್ಯೂ ಸಾಧ್ಯವೇ ಇಲ್ಲವೆಂದೂ ಹೇಳಲಾಗುವುದಿಲ್ಲ. ಹೀಗೆ ಒಬ್ಬ ಮಹಿಳೆ ಇಬ್ಬರು ಪುರುಷರಿಂದ ಅವಳಿ ಮಕ್ಕಳನ್ನು ಪಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ವೈದ್ಯಕೀಯ ತಜ್ಞರು. ‘ಒಬ್ಬ ಮಹಿಳೆ ಅಂಡೋತ್ಪತ್ತಿ ಸಂದರ್ಭದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಾಗ (ಮಹಿಳೆಯ ಋತುಚಕ್ರದ ನಂತರ 11ನೇ ದಿನದಿಂದ ಆಕೆಯಲ್ಲಿ ಅಂಡಾಣು ಉತ್ಪತ್ತಿಯಾಗುತ್ತದೆ. ಇದು ಗರ್ಭ ಧರಿಸಲು ಸೂಕ್ತ ಸಮಯ) ಹೀಗೆ ಇಬ್ಬರು ಪುರುಷರಿಂದ ಬಿಡುಗಡೆಯಾಗುವ ವೀರ್ಯ ಈಕೆಯಲ್ಲಿ ಉತ್ಪತ್ತಿಯಾದ ಎರಡೂ ಮೊಟ್ಟೆಗಳನ್ನು ಫಲವತ್ತುಗೊಳಿಸಿದರೆ ಆಕೆ ಇಬ್ಬರ ಮಕ್ಕಳಿಗೂ ತಾಯಿಯಾಗುತ್ತಾಳೆ. ಭ್ರೂಣವೆಂಬುದು ಅಮ್ಮನ ಆನುವಂಶೀಯತೆಯನ್ನು ಒಳಗೊಂಡು ಬೆಳೆಯಲು ಪ್ರಾರಂಭಿಸುತ್ತದೆ. ಹೀಗಾಗಿ ನೋಡಲೂ ಒಂದೇ ತರ ಕಾಣುತ್ತವೆ’ ಎನ್ನುತ್ತಾರೆ ವೈದ್ಯರು. ಸಾಮಾನ್ಯವಾಗಿ ಮಹಿಳೆಯರಲ್ಲೂ ತಿಂಗಳಿಗೆ ಒಂದು ಅಂಡಾಣು ಬಿಡುಗಡೆಯಾಗುತ್ತದೆ. ಅಪರೂಪಕ್ಕೆ ತಿಂಗಳಿಗೆ ಎರಡು ಮೊಟ್ಟೆ ಉತ್ಪತ್ತಿಯಾಗುವ ಸಾಧ್ಯತೆಯೂ ಇರುತ್ತದೆ.
ಇದನ್ನೂ ಓದಿ: ಪತ್ನಿಯ ಮೋಜು ಮಸ್ತಿ: ಬೇಸತ್ತು ಮಕ್ಕಳೊಂದಿಗೆ ವಿಷ ಕುಡಿದ ವ್ಯಕ್ತಿ ಸಾವು, ಜೀವನ್ಮರಣ ಹೋರಾಟದಲ್ಲಿ 3 ಮಕ್ಕಳು