ಬೆಂಗಳೂರು: ನೀವು ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದರೆ ಜನಪ್ರಿಯ ಇಂಟರ್‌ನೆಟ್ ಭಾಷೆ ‘ರಿಜ್’ (Rizz) ಎಂಬ ಪದವನ್ನು ಕೇಳಿರಬಹುದು. ಈ ಪದವು ವಿಶ್ವದಾದ್ಯಂತ ಎಷ್ಟು ಜನಪ್ರಿಯವಾಗಿದೆ ಎಂದರೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಪ್ರೆಸ್ ಅಧಿಕೃತವಾಗಿ ‘ರಿಜ್’ ಅನ್ನು 2023ರ ವರ್ಷದ ಪದವಾಗಿ (Word of the Year) ಗುರುತಿಸಿದೆ. ಮೋಡಿ ಅಥವಾ ಸ್ಟೈಲ್ ಅನ್ನು ಸೂಚಿಸಲು ಈ ಪದವನ್ನು ಬಳಸಲಾಗುತ್ತದೆ.
ಆಯ್ಕೆ ಮಾಡಿದ್ದು ಹೇಗೆ?
“ಈ ವರ್ಷ, ನಾವು ಎಂಟು ಪದಗಳ ಶಾರ್ಟ್‌ಲಿಸ್ಟ್ ತಯಾರಿಸಿದ್ದೆವು. ತಮ್ಮ ನೆಚ್ಚಿನ ಪದಗಳ ಪರವಾಗಿ ಮತ ಚಲಾಯಿಸಲು ಸಾರ್ವಜನಿಕರ ಮುಂದೆ ಇರಿಸಿದ್ದೆವು. ಮತ ಚಲಾವಣೆಗೆ 4 ದಿನಗಳ ಕಾಲಾವಕಾಶ ನೀಡಲಾಗಿತ್ತು. ಸಾರ್ವಜನಿಕರು ಅಂತಿಮ ಸ್ಪರ್ಧೆಗೆ 4 ಪದಗಳನ್ನು ಪಟ್ಟಿ ಮಾಡಿದರು. ಅವುಗಳೆಂದರೆ ರಿಜ್, ಸ್ವಿಫ್ಟಿ, ಪ್ರಾಂಪ್ಟ್ ಮತ್ತು ಸಿಚುವೇಶನ್‌ಶಿಪ್ (Rizz, Swiftie, Prompt, Situationship). ಬಳಿಕ ಈ 4 ಪದಗಳನ್ನು ಭಾಷಾ ತಜ್ಞರಿಗೆ ರವಾನಿಸಿದೆವು. ಅವರು ಡೇಟಾ, ಮತ ಎಣಿಕೆ ಮತ್ತು ಪದಗಳ ಸುತ್ತಲಿನ ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸಿ 2023ರ ಪದವಾಗಿ ರಿಜ್ ಅನ್ನು ಆಯ್ಕೆ ಮಾಡಿದರು ಎಂದು ಎಂದು ಆಕ್ಸ್‌ಫರ್ಡ್ ವಿವಿ ಪ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ. ರಿಜ್ ಪದದ ಪರವಾಗಿ 32,000 ಮತಗಳು ಚಲಾವಣೆಯಾಗಿದ್ದವು.
ಯಾಕಾಗಿ ರಿಜ್ ಪದ?
ರಿಜ್ ಎನ್ನುವುದು ‘ವರ್ಚಸ್ಸು’ (charisma) ಎಂಬ ಪದದ ಸಂಕ್ಷಿಪ್ತ ರೂಪದಿಂದ ಹುಟ್ಟಿಕೊಂಡಿದೆ. ಇದನ್ನು ಪದದ ಮಧ್ಯ ಭಾಗದಿಂದ ತೆಗೆದುಕೊಳ್ಳಲಾಗಿದೆ. ಇದು ಅಸಾಮಾನ್ಯ ಪದ ರಚನೆಯ ಮಾದರಿ. ಭಾಷೆಯೊಂದು ಸಮುದಾಯಗಳಲ್ಲಿ ಹೇಗೆ ಹುಟ್ಟಿಕೊಳ್ಳುತ್ತದೆ, ರೂಪುಗೊಳ್ಳುತ್ತದೆ ಮತ್ತು ವ್ಯಾಪಿಸುತ್ತದೆ ಎನ್ನುವುದನ್ನು ತಿಳಿಸಲು ನಮ್ಮ ಭಾಷಾ ತಜ್ಞರು ʼರಿಜ್ʼ ಪದವನ್ನು ಉದಾಹರಣೆಯಾಗಿ ಆರಿಸಿಕೊಂಡರು ಎಂದು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ವಿವರಿಸಿದೆ. ಕಳೆದ ವರ್ಷ ʼಗೋಬ್ಲಿನ್ ಮೋಡ್ʼ (Goblin mode) ವರ್ಷದ ಪದವಾಗಿ ಆಯ್ಕೆಯಾಗಿತ್ತು.
ನೆಟ್ಟಿಗರು ಏನಂದ್ರು?
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನೆಟ್ಟಿಗರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ರಿಜ್- ವರ್ಷದ ಆಕ್ಸ್‌ಫರ್ಡ್ ಪದ? ಈ ಪದವನ್ನು ಹಿಂದೆಂದೂ ಕೇಳಿರಲಿಲ್ಲʼʼ ಎಂದು ಒಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಆಕ್ಸ್‌ಫರ್ಡ್ ಯುನಿವರ್ಸಿಟಿಯ ವರ್ಷದ ಪದ: ರಿಜ್. ನಾನು ಅದನ್ನು ಎಂದಿಗೂ ಎಲ್ಲಿಯೂ ಬಳಸಿಲ್ಲ” ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಇನ್ನು ಬಹುತೇಕರು ಈ ಪದದ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: PM Narendra Modi: ಮೋದಿ ಜಗತ್ತಿನ ಅತ್ಯಂತ ಜನಪ್ರಿಯ ನಂ.1 ನಾಯಕ! ರ‍್ಯಾಂಕಿಂಗ್ ಪಟ್ಟಿ ಪ್ರಕಟ