Site icon Vistara News

Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?

Akshardham

Akshardham

ನ್ಯೂ ಜೆರ್ಸಿ: ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ದಿನ ಹತ್ತಿರವಾಗುತ್ತಿದ್ದು, ಭಾರತದ ಹೊರಗೆ ನಿರ್ಮಾಣವಾದ ಅತೀ ದೊಡ್ಡ ಹಿಂದೂ ದೇವಾಲಯವೊಂದರ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್‌ 8ರಂದು ಸ್ವಾಮಿ ನಾರಾಯಣ್‌ ಅಕ್ಷರಧಾಮ(Akshardham) ದೇವಾಲಯವನ್ನು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ(New Jersey)ಉದ್ಘಾಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಲ್ಲಿದೆ?

ನ್ಯೂಯಾರ್ಕ್‌ನ ವಿಶ್ವ ಪ್ರಸಿದ್ಧ ಟೈಮ್ಸ್‌ ಸ್ವೈರ್‌ನಿಂದ(Times Square) ದಕ್ಷಿಣಕ್ಕೆ 60 ಮೈಲಿ(90 ಕಿ.ಮೀ.) ಮತ್ತು ವಾಷಿಂಗ್ಟನ್‌ ಡಿಸಿಯಿಂದ(Washington DC) ಉತ್ತರಕ್ಕೆ 180 ಮೈಲಿ(289 ಕಿ.ಮೀ.) ದೂರದಲ್ಲಿ ಈ ಬಿಎಪಿಎಸ್‌ ಸ್ವಾಮಿನಾರಾಯಣ್‌ ಅಕ್ಷರಧಾಮವಿದೆ. ನ್ಯೂಜೆರ್ಸಿಯ ರಾಬಿನ್ಸನ್‌ವಿಲ್ಲೆ ಟೌನ್‌ಶಿಪ್‌ನಲ್ಲಿ ಈ ದೇಗುಲವನ್ನು ನಿರ್ಮಿಸಲಾಗಿದೆ. ಅಮೆರಿಕಾದ 12,500ಕ್ಕಿಂತಲೂ ಹೆಚ್ಚು ಸ್ವಯಂ ಸೇವಕರು 2011ರಿಂದ 2023ರ ತನಕ ಸುಮಾರು 12 ವರ್ಷಗಳ ಕಾಲ ಈ ದೇಗುಲ ನಿರ್ಮಿಸಲು ಶ್ರಮಿಸಿದ್ದಾರೆ.

ವೈಶಿಷ್ಟ್ಯ ಏನೇನು?

ಅಕ್ಷರಧಾಮ ಎಂದೇ ಜನಪ್ರಿಯವಾಗಿರುವ ಈ ದೇಗುಲಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಲಿದ್ದಾರೆ. ಸುಮಾರು 183 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ದೇವಸ್ಥಾನ 255 ಅಡಿ x 345 ಅಡಿ x 191 ಅಡಿ ಅಳತೆ ಹೊಂದಿದೆ. ಇದನ್ನು ಪ್ರಾಚೀನ ಭಾರತೀಯ ಸಂಸ್ಕೃತಿ ಪ್ರಕಾರ ರಚಿಸಲಾಗಿದೆ. ಹಿಂದೂ ಸಂಪ್ರದಾಯಗಳನ್ನು ಸೂಚಿಸುವ ಸುಮಾರು 10 ಸಾವಿರದಷ್ಟು ಪ್ರತಿಮೆಗಳು, ಸಾಂಪ್ರದಾಯಿಕ ವಾದ್ಯೋಪಕರಣಗಳ ಮಾದರಿ, ನೃತ್ಯ ಪ್ರಕಾರಗಳನ್ನು ಕೆತ್ತಲಾಗಿದೆ.

ಈ ದೇಗುಲ ಕಾಂಬೋಡಿಯಾದ ಅಂಕೋರ್‌ ವಾಟ್‌ ಬಳಿಕ ಎರಡನೇ ಅತೀ ದೊಡ್ಡ ದೇಗುಲ ಎನಿಸಿಕೊಳ್ಳಲಿದೆ. 12ನೇ ಶತಮಾನದ ಅಂಕೋರ್‌ ವಾಟ್‌ ದೇಗುಲ ಸಂಕೀರ್ಣ ಅತೀ ದೊಡ್ಡ ಹಿಂದೂ ದೇವಾಲಯ ಎನಿಸಿಕೊಂಡಿದೆ. ಸುಮಾರು 500 ಎಕರೆ ಪ್ರದೇಶದಲ್ಲಿ ಹರಡಿರುವ ಇದು ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ನವದೆಹಲಿಯಲ್ಲಿ 2005ರ ನವೆಂಬರ್‌ ನಲ್ಲಿ ಉದ್ಘಾಟನೆಯಾದ ಅಕ್ಷರಧಾಮ ದೇವಸ್ಥಾನ 100 ಎಕ್ರೆಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿದೆ.

ʼʼನಮ್ಮ ಆಧ್ಯಾತ್ಮಿಕ ಗುರು ಪ್ರಮುಖ್‌ ಸ್ವಾಮಿ ಮಹರಾಜ್‌ ಹಿಂದೂಗಳು ಮಾತ್ರವಲ್ಲ, ಭಾರತೀಯರು ಮಾತ್ರವಲ್ಲ, ಒಂದು ಪ್ರತ್ಯೇಕ ಗುಂಪು ಮಾತ್ರವಲ್ಲ ಪ್ರಪಂಚದ ಎಲ್ಲಾ ಜನರಿಗೆ ಹೊಂದಬಹುದಾದ ತಾಣವೊಂದನ್ನು ರೂಪಿಸಬೇಕು ಎನ್ನುವ ಗುರಿ ಹೊಂದಿದ್ದರು. ಇದು ಹಿಂದೂ ಸಂಪ್ರದಾಯದ ಆಧಾರದಲ್ಲಿ ಕೆಲವು ಸಾರ್ವರ್ತಿಕ ಮೌಲ್ಯಗಳನ್ನು ಅರಿತುಕೊಳ್ಳಲು ನೆರವಾಗಲಿದೆʼʼ ಎಂದು ಬಿಎಪಿಎಸ್‌ ಸ್ವಾಮಿ ನಾರಾಯಣ್‌ ಸಂಸ್ಥದ ಅಕ್ಷರವತ್ಸಲ್‌ ದಾಸ್‌ ಸ್ವಾಮಿ ಹೇಳಿದ್ದಾರೆ.

ʼʼಇದು ಅವರ ಸಂಕಲ್ಪವಾಗಿತ್ತು. ಅವರ ಆಶಯದಂತೆ ಅಕ್ಷರಧಾಮ ದೇಗುಲವನ್ನು ಹಿಂದೂ ಸಂಪ್ರದಾಯಿಕ ವಾಸ್ತು ಶಿಲ್ಪದೊಂದಿಗೆ ನಿರ್ಮಿಸಲಾಗಿದೆʼʼ ಎಂದು ಅವರು ತಿಳಿಸಿದ್ದಾರೆ. ಅಕ್ಷರಧಾಮವು ಒಂದು ಮುಖ್ಯ ದೇವಾಲಯ, 12 ಉಪ ದೇವಾಲಯ, 9 ಶಿಖರಗಳು ಮತ್ತು 9 ಪಿರಮಿಡ್‌ ಆಕೃತಿಯ ಶಿಖರಗಳನ್ನು ಒಳಗೊಂಡಿದೆ. ಇದನ್ನು ಸಾವಿರ ವರ್ಷಗಳ ತನಕ ಉಳಿಯುವಂತೆ ನಿರ್ಮಿಸಿರುವುದು ವಿಶೇಷ.

4 ಮಾದರಿಯ ಶಿಲೆ

ಇನ್ನು ಅಕ್ಷರಧಾಮ ದೇಗುಲ ರಚನೆಗೆ 4 ಮಾದರಿಯ ಕಲ್ಲುಗಳನ್ನು ಬಳಸಲಾಗಿದೆ. ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಮಾರ್ಬಲ್‌ ಮತ್ತು ಗ್ರಾನೈಟ್‌ಗಳನ್ನು ಬಳಸಲಾಗಿದ್ದು, ಇವು ಅತೀ ಹೆಚ್ಚಿನ ಶಾಖ ಮತ್ತು ಶೀತವನ್ನು ತಡೆದುಕೊಳ್ಳಬಲ್ಲವು. ಸುಮಾರು 2 ಮಿಲಿಯನ್‌ ಕ್ಯೂಬಿಕ್‌ ಅಡಿ ಕಲ್ಲುಗಳನ್ನು ದೇಗುಲ ರಚನೆಗೆ ಬಳಸಲಾಗಿದ್ದು ಇವನ್ನು ಪ್ರಪಂಚದ ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಲಾಗಿದೆ. ಬಲ್ಗೇರಿಯಾ ಮತ್ತು ತುರ್ಕಿಯಿಂದ ಸುಣ್ಣದ ಕಲ್ಲು, ತುರ್ಕಿ, ಇಟಲಿ, ಗ್ರೀಸ್‌ನಿಂದ ಮಾರ್ಬಲ್‌, ಭಾರತ ಮತ್ತು ಚೀನಾದಿಂದ ಗ್ರಾನೈಟ್‌, ಭಾರತದಿಂದ ಮರಳುಗಲ್ಲು, ಇತರ ಅಲಂಕೃತ ಕಲ್ಲುಗಳನ್ನು ಯುರೋಪ್‌, ಏಷ್ಯಾ, ಮತ್ತು ಲ್ಯಾಟಿನ್‌ ಅಮೆರಿಕಾದಿಂದ ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ

ಭಾರತದ ಪ್ರಾಚೀನ ಬ್ರಹ್ಮ ಕುಂಡ್‌ ಸೇರಿದಂತೆ ಭಾರತ ಮತ್ತು ಅಮೆರಿಕಾದ ವಿವಿಧ ರಾಜ್ಯಗಳ ಪವಿತ್ರ ನದಿಗಳ ನೀರನ್ನು ಸಂಗ್ರಹಿಸಲಾಗಿದೆ. ಸಾವಿರಾರು ಸ್ವಯಂಸೇವಕರ ಶ್ರಮ ಈ ದೇಗುಲದ ಹಿಂದಿದೆ. ಮಹಂತ್‌ ಸ್ವಾಮಿ ಮಹಾರಾಜ್‌ ನೇತೃತ್ವದಲ್ಲಿ ಅಕ್ಟೋಬರ್‌ 8ರಂದು ಉದ್ಘಾಟನೆ ಆಯೋಜಿಸಲಾಗಿದೆ. ಅಕ್ಟೋಬರ್‌ 18ರಂದು ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ.

Exit mobile version