Site icon Vistara News

Oldest Person | ಜಗತ್ತಿನ ದೀರ್ಘಾಯುಷಿ ಮಹಿಳೆ ಇನ್ನಿಲ್ಲ, ಅವರಿಗೆ 118 ವರ್ಷವಾಗಿತ್ತು

Lucile Randon

ಪ್ಯಾರಿಸ್‌: ಜಗತ್ತಿನ ಅತ್ಯಂತ ದೀರ್ಘಾಯುಷಿ ಎಂದು ಪರಿಗಣಿಸಲಾಗಿರುವ ವ್ಯಕ್ತಿ ಮೃತಪಟ್ಟಿದ್ದಾರೆ. ಫ್ರಾನ್ಸ್‌ನ ನನ್‌ ಲೂಸಿಲ್‌ ರ್‍ಯಾಂಡನ್‌ (Lucile Randon) ಮಂಗಳವಾರ ತಮ್ಮ 118ನೇ ವಯಸ್ಸಿನಲ್ಲಿ ಮೃತಪಟ್ಟರು.

ರ್‍ಯಾಂಡನ್‌ ಅವರನ್ನು ಸಿಸ್ಟರ್‌ ಆಂಡ್ರೆ ಎಂದೇ ಕರೆಯಲಾಗುತ್ತಿತ್ತು. ದಕ್ಷಿಣ ಫ್ರಾನ್ಸ್‌ನಲ್ಲಿ 1904ರ ಫೆಬ್ರವರಿ 11ರಂದು ಅವರು ಜನಿಸಿದ್ದರು. ಆಗಿನ್ನೂ ಮೊದಲ ಮಹಾಯುದ್ಧ ಆರಂಭವಾಗಿರಲಿಲ್ಲ.

ಇವರನ್ನು ಅತ್ಯಂತ ದೀರ್ಘಾಯುಷಿ ಯುರೋಪಿಯನ್‌ ಎಂದು ಪರಿಗಣಿಸಲಾಗಿದೆ. ಕಳೆದ ವರ್ಷ ಜಗತ್ತಿನ ಅತ್ಯಂತ ದೀರ್ಘಾಯುಷಿ ಎನಿಸಿದ್ದ ಜಪಾನಿನ ಕೇನ್‌ ತನಾಕಾ ತಮ್ಮ 119ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು. ಅವರ ನಂತರದ ದೀರ್ಘಾಯುಷಿ ಹೆಗ್ಗಳಿಕೆ ರ್‍ಯಾಂಡನ್‌ರದಾಗಿತ್ತು. 2022ರ ಏಪ್ರಿಲ್‌ನಲ್ಲಿ ಅವರ ಹೆಸರು ಅಧಿಕೃತವಾಗಿ ಗಿನ್ನೆಸ್‌ ವಿಶ್ವದಾಖಲೆ ಸೇರಿತ್ತು.

ರ್‍ಯಾಂಡನ್‌ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದಾರೆ. ಅವರು ಹುಟ್ಟಿದ ವರ್ಷ ನ್ಯೂಯಾರ್ಕ್‌ನ ಮೊತ್ತಮೊದಲ ಸಬ್‌ವೇ ಶುರುವಾಗಿತ್ತು. ಟೂರ್‌ ದಿ ಫ್ರಾನ್ಸ್‌ ಆ ವರ್ಷ ಆರಂಭವಾಗಿತ್ತು. ಏಲ್ಸ್‌ ಎಂಬ ಪಟ್ಟಣದಲ್ಲಿ ಮೂವರು ಸಹೋದರರ ಜತೆಗೆ ಆಕೆ ಹುಟ್ಟಿದ್ದರು. ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಆಕೆಯ ಇಬ್ಬರು ಸಹೋದರರು ಜೀವಂತವಾಗಿ ಮರಳಿ ಬಂದದ್ದು ಆಕೆಗೆ ಸಂತೋಷದ ವಿಷಯವಾಗಿತ್ತು. ನಂತರ ಈಕೆ ಪ್ಯಾರಿಸ್‌ನಲ್ಲಿ ಶಿಶುಪಾಲಕಿಯಾಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ | Thyroid Awareness Month | ನಮ್ಮ ಆರೋಗ್ಯದಲ್ಲಿ ಥೈರಾಯ್ಡ್‌ ಪಾತ್ರ ಅತಿ ಮುಖ್ಯ, ತಿಳಿದಿರಲಿ!

41ರ ವಯಸ್ಸಿನಲ್ಲಿ ನನ್‌ ಆಗಿದ್ದ ಅವರು, ನಂತರ 31 ವರ್ಷ ಕಾಲ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದರು. 2021ರಲ್ಲಿ ಆಕೆಯಿದ್ದ ನರ್ಸಿಂಗ್‌ ಹೋಮ್‌ನಲ್ಲ ಇಲ್ಲರನ್ನೂ ಕೋವಿಡ್‌ ಕಾಡಿತ್ತು. ಈಕೆಯನ್ನೂ ಬಾಧಿಸಿತ್ತು. ʼʼನನ್ನನ್ನು ಕೆಲಸವೇ ಪೊರೆದಿದೆ. ನನ್ನ 108ನೇ ವಯಸ್ಸಿನವರೆಗೂ ನಾನು ಕೆಲಸ ಮಾಡಿದೆʼʼ ಎಂದಾಕೆ ಹೇಳುತ್ತಿದ್ದರು.

ಕಣ್ಣುಗಳನ್ನು ಕಳೆದುಕೊಂಡು ವ್ಹೀಲ್‌ಚೇರ್‌ನಲ್ಲಿ ಓಡಾಡುತ್ತಿದ್ದರೂ, ತನಗಿಂತ ಸಣ್ಣವರಾದ ವೃದ್ಧರ ಆರೈಕೆಯಲ್ಲಿ ಆಕೆ ತೊಡಗಿಕೊಂಡಿದ್ದರು. ʼʼಮನುಷ್ಯರು ಪರಸ್ಪರ ಸಹಾಯ ಮಾಡಬೇಕು, ಪ್ರೀತಿಸಬೇಕು. ಆಗ ಜಗತ್ತು ಇನ್ನಷ್ಟು ಸಹನೀಯವಾಗುತ್ತದೆʼʼ ಎಂದವರು ಯಾವಾಗಲೂ ಹೇಳುತ್ತಿದ್ದರು. ಆದರೆ ದೀರ್ಘಾಯುಷ್ಯದ ರಹಸ್ಯ ತಿಳಿಯುವ ಸಂಶೋಧನೆಗೆ ತಮ್ಮ ಡಿಎನ್‌ಎ ಸ್ಯಾಂಪಲ್‌ ನೀಡಲು ಒಪ್ಪಿರಲಿಲ್ಲ. ʼʼಕೇವಲ ದೇವರು ಮಾತ್ರ ಅದರ ರಹಸ್ಯ ತಿಳಿದಿರಬಲ್ಲʼʼ ಎಂದು ಅವರು ಹೇಳುತ್ತಿದ್ದರು.

ಇದುವರೆಗೆ ಅತ್ಯಂತ ದೀರ್ಘಾಯುಷಿಯಾಗಿ ಬದುಕಿದ್ದ ಲಿಖಿತ ದಾಖಲೆಯನ್ನು ದಕ್ಷಿಣ ಫ್ರಾನ್ಸ್‌ನ ಜೀನ್‌ ಕಾಮೆಂಟ್‌ (Jeanne Calment) ಹೊಂದಿದ್ದಾರೆ. ಅವರು 122 ವರ್ಷ ಬದುಕಿದ್ದರು.

ಇದನ್ನೂ ಓದಿ | ವಿಸ್ತಾರ Explainer: ನಾವೇಕೆ ಟರ್ಮ್ ಇನ್ಸುರೆನ್ಸ್ ಹೊಂದಿರಬೇಕು?

Exit mobile version