ಮಾಸ್ಕೋ: ರಷ್ಯಾದ ಮಿಲಿಟರಿಯ ವಿರುದ್ಧ ಬಂಡೆದ್ದು ಭಾರಿ ಸದ್ದು ಮಾಡಿದ್ದ ಬಾಡಿಗೆ ಹಂತಕರ ಸೇನೆ ವ್ಯಾಗ್ನರ್ ಗ್ರೂಪ್ (Wagner Group) ಮುಖ್ಯಸ್ಥ ಯೆವ್ಗಿನಿ ಪ್ರಿಗೋಜಿನ್‌ನನ್ನು (Yevgeny Prigozhin) ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಸ್ಕೋದ ಉತ್ತರ ಭಾಗದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಯೆವ್ಗಿನಿ ಜತೆಗೆ ಇತರ ಒಂಬತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಒಂದು ಕಾಲದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರ ಪರಮಾಪ್ತನಾಗಿದ್ದವನು ಯೆವ್ಗಿನಿ. ನಿಜವೆಂದರೆ ಉಕ್ರೇನ್ ಮೇಲೆ ರಷ್ಯಾ ದಾಳಿ (Russia- Ukraine war) ಮಾಡುವುದರ ಹಿಂದಿದ್ದ ನಿಜವಾದ ಶಕ್ತಿಯೇ ಇವನಾಗಿದ್ದ. ಆದರೆ, ಯುದ್ಧ ತೀವ್ರವಾಗುತ್ತಿದ್ದಂತೆಯೇ ಆಂತರಿಕ ಬಂಡಾಯವನ್ನು ಎಬ್ಬಿಸಿದ್ದ ಯೆವ್ಗಿನಿ ಪುಟಿನ್ ವಿರುದ್ಧ ತನ್ನ ವ್ಯಾಗ್ನರ್ ಗ್ರೂಪನ್ನು ಛೂಬಿಟ್ಟಿದ್ದ. ಒಂದು ಹಂತದಲ್ಲಿ ಈ ಆಂತರಿಕ ಬಂಡಾಯ ಎಷ್ಟು ತೀವ್ರವಾಗಿತ್ತೆಂದರೆ ಪುಟಿನ್ ಇವರ ದಾಳಿಯಿಂದ ಪ್ರಾಣವನ್ನೇ ಕಳೆದುಕೊಳ್ಳಬಹುದು ಎಂಬಷ್ಟು ಆತಂಕ ಹುಟ್ಟಿಸಿತ್ತು.
ರಷ್ಯಾ ಸೈನ್ಯದ ವಿರುದ್ಧ ದಾಳಿ ಆರಂಭಿಸಿದ್ದ ಪ್ರಿಗೋಜಿನ್‌ನ ʼವ್ಯಾಗ್ನರ್ ಗ್ರೂಪ್ʼ ಸೇನಾಪಡೆ, ದಕ್ಷಿಣ ಮಿಲಿಟರಿ ಪ್ರಾಂತ್ಯವಾದ ರಾಸ್ತಾವಾನ್ ಡಾನ್ ಪಟ್ಟಣವನ್ನು ವಶಪಡಿಸಿಕೊಂಡಿತ್ತು. ಆದರೆ ಬಳಿಕ ಬಂಡಾಯ ಶಮನವಾಗಿತ್ತು.
ಮಾಸ್ಕೋದಿಂದ ಪೀಟರ್ಸ್‌ಬರ್ಗ್‌ಗೆ ಪ್ರಯಾಣಿಸುತ್ತಿದ್ದ ಎಂಬ್ರೇಯರ್ -135 (Embraer-135 EBM-135BJ)ನಲ್ಲಿ ಏಳು ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿ ಇದ್ದರು ಎಂದು ರಷ್ಯಾದ ರೋಸಾವಿಯಾಟ್ಸಿಯಾ ಏವಿಯೇಷನ್ ಅಥಾರಿಟಿ ತಿಳಿಸಿದೆ.
ಇದನ್ನೂ ಓದಿ : ವಿಸ್ತಾರ Explainer: Russian Coup: ರಷ್ಯ ಅಧ್ಯಕ್ಷ ಪುಟಿನ್‌ಗೆ ಪರಮವೈರಿಯಾದ ಪರಮಾಪ್ತ; ಯಾರಿವನು ಯೆವ್ಗೆನಿ ಪ್ರಿಗೋಜಿನ್?
ಇದೊಂದು ಸಹಜ ಅಪಘಾತ ಎಂದು ವಿಮಾನಯಾನ ಪ್ರಾಧಿಕಾರ ಹೇಳಿದ್ದರೆ, ರಷ್ಯಾದ ರಕ್ಷಣಾ ವ್ಯವಸ್ಥೆ ವಿಮಾನವನ್ನು ಹೊಡೆದುರುಳಿಸಿದೆ ಎಂಬ ಆಪಾದನೆಯೂ ಕೇಳಿಬಂದಿದೆ.