Site icon Vistara News

Youngest Artist: ಅಂಬೆಗಾಲಿಡುವ ಬಾಲಕ ಈಗ ವಿಶ್ವದ ಅತಿ ಕಿರಿಯ ಚಿತ್ರ ಕಲಾವಿದ!

Youngest Artist

ಅಂಬೆಗಾಲಿಡುವ (Toddler) ಮಗು ವರ್ಣಚಿತ್ರಗಳನ್ನು (Youngest Artist) ರಚಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records) ಬರೆದಿದೆ. ವಿಶ್ವದ ಅತ್ಯಂತ ಕಿರಿಯ ಚಿತ್ರ ಕಲಾವಿದ ಎನ್ನುವ ಖ್ಯಾತಿಗೆ ಈ ಮಗು ಪಾತ್ರವಾಗಿದೆ. ಘಾನಾದ (Ghana) 1 ವರ್ಷ 152 ದಿನಗಳ ಏಸ್-ಲಿಯಾಮ್ ನಾನಾ ಸ್ಯಾಮ್ ಆಂಕ್ರಾ (Ace-Liam Nana Sam Ankrah) ತಾನೇ ರಚಿಸಿದ 9 ವರ್ಣಚಿತ್ರಗಳನ್ನು ಮಾರಾಟ ಮಾಡಿ ಈ ದಾಖಲೆ ನಿರ್ಮಿಸಿದೆ.

ಏಸ್- ಲಿಯಾಮ್ ನಾನಾ ಸ್ಯಾಮ್ ಆಂಕ್ರಾ ವಿಶ್ವದ ಅತ್ಯಂತ ಕಿರಿಯ ಪುರುಷ ಚಿತ್ರ ಕಲಾವಿದನಾಗಿ ಪ್ರತಿಷ್ಠಿತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ. ಆಂಕ್ರಾನ ಈ ಸಾಧನೆ ಹಲವಾರು ಮಂದಿಯ ಗಮನ ಸೆಳೆದಿದ್ದ್ದು, ಜಾಗತಿಕ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ವಿಶ್ವ ದಾಖಲೆ ಪಟ್ಟಿಯಲ್ಲಿ ಆಂಕ್ರಾ ಹೆಸರು ಸೇರ್ಪಡೆಗೆ ಸಾಕಷ್ಟು ಮಂದಿ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.


ಯಾವಾಗ ಚಿತ್ರಕಲೆ ಪ್ರಾರಂಭಿಸಿದ್ದು?

ಈಗಷ್ಟೇ ಅಂಬೆಗಾಲಿಡುತ್ತಿರುವ ಆಂಕ್ರಾ ಕೇವಲ ಆರು ತಿಂಗಳಲ್ಲೇ ಚಿತ್ರಕಲೆಯನ್ನು ಪ್ರಾರಂಭಿಸಿದನು ಎನ್ನುತ್ತಾರೆ ಆತನ ತಾಯಿ. ಚಿತ್ರಕಲೆಯ ಮೇಲಿನ ಆತನ ಉತ್ಸಾಹವು ಚಿಕ್ಕ ವಯಸ್ಸಿನಿಂದಲೂ ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆತ ಕಲಿಯಲು ಪ್ರಾರಂಭ ಮಾಡಿದಾಗಲೇ ಕ್ಯಾನ್ವಾಸ್‌ನ ತುಂಡನ್ನು ನೆಲದ ಮೇಲೆ ಹರಡಿ ಅದರ ಮೇಲೆ ಸ್ವಲ್ಪ ಬಣ್ಣವನ್ನು ಬೀಳಿಸಿದೆ. ಕ್ಯಾನ್ವಾಸ್‌ನಾದ್ಯಂತ ಆತ ಬಣ್ಣವನ್ನು ಹರಡಿ ಕೊನೆಗೊಳಿಸಿದ. ಇದು ಆತನ ಮೊದಲ ವರ್ಣಚಿತ್ರ ‘ದಿ ಕ್ರಾಲ್’ ಎಂದು ಅವರು ವಿವರಿಸಿದರು.


ಅಂಬೆಗಾಲಿಡುವ ಘಾನಾದ ಆಂಕ್ರಾ ಈಗ ಸೆಲೆಬ್ರಿಟಿಯಾಗಿದ್ದಾನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಮಾತ್ರವಲ್ಲದೆ ಘಾನಾ ಗಣರಾಜ್ಯದ ಪ್ರಥಮ ಮಹಿಳೆಯ ಗಮನವನ್ನೂ ಆತ ಸೆಳೆದಿದ್ದಾನೆ.

ಮೊದಲ ಪ್ರದರ್ಶನ

ಏಸ್- ಲಿಯಾಮ್ ಆಂಕ್ರಾ ಇತ್ತೀಚೆಗೆ ತನ್ನ ಚಿತ್ರಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನ ನಡೆಸಿದ. ಇದರಲ್ಲಿ ಆತನ ಹತ್ತು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಅವುಗಳಲ್ಲಿ ಒಂಬತ್ತು ಮಾರಾಟವಾಗಿವೆ. ಏಸ್- ಲಿಯಾಮ್‌ನ ಕಲೆಯು ನಿರ್ದಿಷ್ಟ ಸಂದೇಶಗಳನ್ನು ರವಾನಿಸುವುದಕ್ಕಿಂತ ಹೆಚ್ಚಾಗಿ ಅಭಿವ್ಯಕ್ತಿ ಮತ್ತು ಅನ್ವೇಷಣೆಯ ಬಗ್ಗೆ ಹೆಚ್ಚಾಗಿದೆ ಎಂದು ಆತನ ತಾಯಿ ಹೇಳಿದ್ದಾರೆ.

ಅವನ ಅಮೂರ್ತ ವರ್ಣಚಿತ್ರಗಳು ಸುತ್ತಲಿನ ಪ್ರಪಂಚದಿಂದ ಪ್ರೇರಿತವಾಗಿವೆ. ಬಣ್ಣ, ಆಕಾರ, ಟೆಕಶ್ಚರ್ ಮತ್ತು ಅವನ ಮನಸ್ಥಿತಿಯನ್ನು ಇದು ಅವಲಂಬಿಸಿದೆ. ಪ್ರತಿ ಚಿತ್ರಕಲೆಯು ಹೊಸ ವಿಷಯಗಳನ್ನು ಕಂಡುಹಿಡಿಯುವಲ್ಲಿ ಆತನ ಕುತೂಹಲ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ ಎಂದಿದ್ದಾರೆ ಅವರು.


ಭವಿಷ್ಯದ ಯೋಜನೆಗಳು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ವಿಶ್ವದ ಅತ್ಯಂತ ಕಿರಿಯ ಕಲಾವಿದ ಲಿಯಾಮ್ ಅವರ ದಾಖಲೆಯನ್ನು ಅನುಮೋದಿಸಿದ ಬಳಿಕ ಆತನ ಕುಟುಂಬವು ಆತನ ಕಲಾತ್ಮಕ ಪ್ರತಿಭೆಗೆ ಗುಣಮಟ್ಟದ ಶಿಕ್ಷಣದ ಮೂಲಕ ಪೋಷಿಸಲು ಅವಕಾಶಗಳನ್ನು ಹುಡುಕುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನದ ಅವಕಾಶಗಳು ಅವರಿಗೆ ದೊರೆಯುತ್ತದೆ ಮತ್ತು ಆತನ ಕಲಾಕೃತಿಗಳನ್ನು ಮಾರಾಟ ಮಾಡಲು ಬಯಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

ಏಸ್-ಲಿಯಾಮ್ ತಾಯಿಯ ಸಲಹೆ ಏನು?

ತಮ್ಮ ಆಸಕ್ತಿಗಳನ್ನು ಕಂಡುಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಲು ಪೋಷಕರಿಗೆ ಸಲಹೆ ನೀಡಿದ ಅವರು, ಪ್ರತಿ ಮಗು ಅನನ್ಯವಾಗಿದೆ ಮತ್ತು ಅವರ ಭಾವೋದ್ರೇಕಗಳನ್ನು ಪೋಷಿಸುವುದು ಅದ್ಭುತ ಆವಿಷ್ಕಾರಗಳು ಮತ್ತು ಸಾಧನೆಗಳಿಗೆ ಕಾರಣವಾಗಬಹುದು. ಅದನ್ನು ಪ್ರಯತ್ನಿಸುವ ಮೊದಲು ಅದನ್ನು ಮತ್ತೆ ಮತ್ತೆ ಓದಿ ಮತ್ತು ನೆನಪಿಡಿ. ಪ್ರಯಾಣ ಮತ್ತು ಅದು ತರುವ ಸಂತೋಷವು ತುಂಬಾ ತೃಪ್ತಿಕರವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Exit mobile version