Site icon Vistara News

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive and CM Siddaramaiah

ಬೆಳಗಾವಿ: ರಾಜ್ಯದಲ್ಲಿ ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು (Government Job) ಖಾಲಿ ಇರುವ ಬಗ್ಗೆ ವಿಸ್ತಾರ ನ್ಯೂಸ್‌ ಬಿತ್ತರಿಸಿದ ಎಕ್ಸ್‌ಕ್ಲೂಸಿವ್‌ ವರದಿಯು ಬೆಳಗಾವಿ ಚಳಿಗಾಳದ ಅಧಿವೇಶನದಲ್ಲಿ (Belagavi Winter Session) ಚರ್ಚೆಗೆ ಬಂದಿದ್ದು, ಆಡಳಿತ ಮತ್ತು ವಿಪಕ್ಷಗಳ ವಾಗ್ವಾದಕ್ಕೆ ಕಾರಣವಾಗಿದೆ. ಪರಿಷತ್‌ ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್‌, ಸರ್ಕಾರಿ ಇಲಾಖೆಯಲ್ಲಿ (Government Department) 7 ಲಕ್ಷ ಜನ ಮಾಡಬೇಕಾದ ಕೆಲಸವನ್ನು ಈಗ 4 ಲಕ್ಷ ಜನರು ಮಾಡುತ್ತಲಿದ್ದಾರೆ. ಇದರ ಬಗ್ಗೆ ವಿಸ್ತಾರ ನ್ಯೂಸ್‌ನಲ್ಲಿ (Vistara News) ಪ್ರಸಾರ ಮಾಡಲಾಗಿದೆ. ಸರ್ಕಾರ ಹುದ್ದೆಗಳ ಬಗ್ಗೆ ಕೊಟ್ಟ ಉತ್ತರ ಅಸಮರ್ಪಕವಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದಿದ್ದು, ಗದ್ದಲಕ್ಕೆ ಕಾರಣವಾಗಿದೆ.

ಖಾಲಿ ಹುದ್ದೆ ಬಗ್ಗೆ ಸರ್ಕಾರ ಕೊಟ್ಟ ಉತ್ತರ ಅಸಮರ್ಪಕವಾಗಿದೆ ಎಂದು ತೇಜಸ್ವಿನಿ ರಮೇಶ್‌ ಹೇಳಿಕೆ ನೀಡುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ಸಲೀಂ ಅಹಮದ್‌, ಸರ್ಕಾರ ಈಗಾಗಲೇ ಉತ್ತರ ಕೊಟ್ಟಿದೆ ಎಂದು ಹೇಳಿದರು. ಆಗ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಮಾತನಾಡಿ, ಈ ಹಿಂದೆ ನಿಮ್ಮ ಸರ್ಕಾರದ ಇತ್ತಲ್ಲವೇ? ಆಗ ಏನು ಕತ್ತೆ ಕಾಯ್ತಾ ಇದ್ರಾ? ಕೇಂದ್ರ ಸರ್ಕಾರದಲ್ಲಿ ಒಂದು ಕೋಟಿ ಹುದ್ದೆ ಖಾಲಿ ಇದೆ ಎಂದು ಹೇಳಿದರು. ಇದು ಬಿಜೆಪಿ ಸದಸ್ಯರನ್ನು ಮತ್ತಷ್ಟು ಕೆರಳಿಸಿತು.

ಸಿಎಂ ಕಲಾಪಕ್ಕೆ ಬಂದು ಉತ್ತರಿಸಲಿ

ಈ ಹೇಳಿಕೆಯಿಂದ ಆಕ್ರೋಶಗೊಂಡ ಪ್ರತಿಪಕ್ಷ ಬಿಜೆಪಿ ಸದಸ್ಯರು, ಕತ್ತೆ ಅನ್ನೋ ಪದವನ್ನು ಕಡಿತದಿಂದ ತೆಗೆಯಲು ಒತ್ತಾಯ ಮಾಡಿದರು. ಬಳಿಕ ಮಾತನಾಡಿದ ತೇಜಸ್ವಿನಿ ರಮೇಶ್‌, ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ನಮಗೆ ಆರೋಪಿಸುತ್ತಾರೆ. ಆದರೆ, ನಾವು ಬ್ಲಾಕ್‌ಮೇಲ್ ಮಾಡುತ್ತಿಲ್ಲ. ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ಖಾಲಿ ಹುದ್ದೆ ಬಗ್ಗೆ ವಿಸ್ತಾರ ನ್ಯೂಸ್‌ನಲ್ಲಿ ಪ್ರಸಾರ ಆಗುತ್ತಾ ಇದೆ. ಯಾವ ಯಾವ ಇಲಾಖೆಗಳಲ್ಲಿ ಎಷ್ಟೆಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ ಅಂತ ತೋರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಕಲಾಪಕ್ಕೆ ಆಗಮಿಸಿ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಸಿಎಂ ಉತ್ತರಕ್ಕಾಗಿ ಪಟ್ಟು

ಆಗ ಮಾತನಾಡಿದ ಯು.ಬಿ. ವೆಂಕಟೇಶ್, ಈಗಾಗಲೇ ಮುಖ್ಯಮಂತ್ರಿಗಳಿಂದಲೇ ಉತ್ತರ ಕೊಡಿಸಿಯಾಗಿದೆ. ಇವರು ಕಳೆದ ಐದು ವರ್ಷದಿಂದ ಏನ್ ಕತ್ತೆ ಕಾಯುತ್ತಿದ್ದರಾ? ಯಾಕೆ ಏಳನೇ ವೇತನ ಆಯೋಗ ಜಾರಿ ಮಾಡಲಿಲ್ಲ? ಎಂದು ಪ್ರಶ್ನೆ ಮಾಡಿದರು. ಇದರಿಂದ ಅಸಮಾಧಾನಗೊಂಡ ತೇಜಸ್ವಿನಿ ರಮೇಶ್, ಕತ್ತೆ ಕಾಯುವ ಕೆಲಸ ಸದನದಲ್ಲಿ ಮಾಡಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ಬಂದು ಉತ್ತರ ಕೊಡಬೇಕು. ಅಲ್ಲಿಯವರೆಗೂ ಧರಣಿ ವಾಪಸ್ ಪಡೆಯಲ್ಲ ಎಂದು ಪಟ್ಟುಹಿಡಿದು ಕುಳಿತರು.

ಕತ್ತೆಯ ಗುಣವನ್ನು ಬೆಳೆಸಿಕೊಳ್ಳಬೇಕು

ಆಗ ಬೋಜೇಗೌಡ ಮಾತನಾಡಿ, ಕತ್ತೆಗಿರುವ ಗೌರವವನ್ನು ಸಹ ಕಾಂಗ್ರೆಸ್‌ನವರು ಹಾಳು ಮಾಡಿದ್ದಾರೆ. ಕತ್ತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಆಗ ಸಚಿವ ಕೃಷ್ಣ ಬೈರೆಗೌಡ ಮಾತನಾಡಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡಿ. ಸಿಎಂ ಬೆಂಗಳೂರಿನ ಕಾರ್ಯಕ್ರಮದಲ್ಲಿದ್ದಾರೆ. ಅವರು ಬಂದ ಕೂಡಲೇ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

ಸಿಎಂರಿಂದ ಉತ್ತರ ಕೊಡಿಸುವ ಭರವಸೆ

ಇಷ್ಟಾದರೂ ಗದ್ದಲ ನಿಲ್ಲದೇ ಇದ್ದಾಗ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶಿಸಿ, ಸದನದ ಕಲಾಪವನ್ನು ನಡೆಸಲು ಬಿಡಿ. ಇದೇ ರೀತಿಯಾದರೆ ಸದನವನ್ನು ಮುಂದೂಡುತ್ತೇನೆ. ಏನ್ ಹುಡುಗಾಟಿಕೆ ಮಾಡಿಕೊಂಡಿದ್ದೀರಿ? ಎಂದು ಗರಂ ಆದರು. ಸಿಎಂ ಸಿದ್ದರಾಮಯ್ಯ ಅವರಿಂದ ಉತ್ತರ ಕೊಡಿಸುವ ಭರವಸೆ ಸಿಕ್ಕ ಮೇಲೆ ಪ್ರತಿಪಕ್ಷಗಳು ಧರಣಿಯನ್ನು ವಾಪಸ್‌ ಪಡೆದವು.

‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ವಿಸ್ತಾರ ನ್ಯೂಸ್‌ನಲ್ಲಿ ಮೆಗಾ EXCLUSIVE ಸ್ಟೋರಿ ಇದಾಗಿದ್ದು, ರಾಜ್ಯ ಸರ್ಕಾರಿ ಇಲಾಖೆಯಲ್ಲಿ ಲಕ್ಷ, ಲಕ್ಷ ಖಾಲಿ ಹುದ್ದೆ (Government Job) ಇರುವುದು ಗೊತ್ತಾಗಿದೆ. ಗ್ಯಾರಂಟಿ ಯೋಜನೆಯನ್ನು ಕೊಟ್ಟಿರುವ ಕಾಂಗ್ರೆಸ್‌ ಸರ್ಕಾರದಲ್ಲಿ (Congress Government) ಉದ್ಯೋಗ ಸೃಷ್ಟಿಗೆ ‘ಗ್ಯಾರಂಟಿ’ಯೇ ಇಲ್ಲ ಎನ್ನುವಂತೆ ಆಗಿದೆ. ಸರ್ಕಾರ ಬಂದು 6 ತಿಂಗಳು ಕಳೆದರೂ ಉದ್ಯೋಗ ಭರ್ತಿಗೆ ಹೊಸ ನೋಟಿಫಿಕೇಷನ್ ಮಾಡಲಾಗಿಲ್ಲ. ಖಾಲಿ ಹುದ್ದೆ ಭರ್ತಿ ಹೇಳಿಕೆಯು ಕೇವಲ ಬಜೆಟ್‌ಗೆ ಸೀಮಿತವಾಗಿದೆ. ಯಾವ್ಯಾವ ಸರ್ಕಾರಿ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ? ಎಂಬ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಒಳಾಡಳಿತ ಇಲಾಖೆ, ಆರೋಗ್ಯ – ವೈದ್ಯಕೀಯ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರ್ಥಿಕ ಇಲಾಖೆ, ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆಗಳಲ್ಲಿ ಒಟ್ಟು 2,47,558 ಹುದ್ದೆಗಳು ಖಾಲಿ ಇವೆ.

ಇಲ್ಲಿ ದಾಖಲೆಗಳ ಸಮೇತ ಖಾಲಿ ಹುದ್ದೆಗಳ ವಿವರ; ಇಲ್ಲಿದೆ ವಿಡಿಯೊ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ

ಒಳಾಡಳಿತ ಇಲಾಖೆ

ಉನ್ನತ ಶಿಕ್ಷಣ ಇಲಾಖೆ

ಆರೋಗ್ಯ ಮತ್ತು ವೈದ್ಯಕೀಯ

ಕಂದಾಯ ಇಲಾಖೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಆರ್ಥಿಕ ಇಲಾಖೆ

ಕೃಷಿ ಇಲಾಖೆ

ಪಶುಸಂಗೋಪನೆ ಇಲಾಖೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

ಗ್ರಾಮೀಣಾಭಿವೃದ್ಧಿ ಇಲಾಖೆ

ಸಮಾಜ ಕಲ್ಯಾಣ ಇಲಾಖೆ

ಲೋಕೋಪಯೋಗಿ ಇಲಾಖೆ

ನೀರಾವರಿ ಇಲಾಖೆ

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಡಿಕೆ ಬೆಳೆಯ ಸಂಕಷ್ಟಗಳನ್ನು ನಿವಾರಿಸಿ

ಒಟ್ಟು 2,47,558 ಹುದ್ದೆಗಳು ಖಾಲಿ ಇದ್ದು, ಇದರ ಭರ್ತಿಗೆ ರಾಜ್ಯ ಸರ್ಕಾರ ಚಿಂತನೆಯನ್ನೇ ನಡೆಸಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದರೂ ಸಹ ಯಾವುದೇ ನೋಟಿಫಿಕೇಶನ್‌ ಆಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂಬ ಆಗ್ರಹಗಳು ಕೇಳಿ ಬಂದಿವೆ.

Exit mobile version