ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Guarantee) ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿಗೆ (Yuva Nidhi Scheme) ನೋಂದಣಿ ದಿನಾಂಕವನ್ನು ಗುರುವಾರ (ಡಿ. 21) ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕೌಶಲ್ಯಾಭಿವೃದ್ಧಿ, ಜೀವನೋಪಯೋಗಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನು ನೀಡಲಿದ್ದಾರೆ ಎನ್ನಲಾಗಿದೆ.
ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಸಚಿವ ಶರಣ ಪ್ರಕಾಶ್ ಪಾಟೀಲ್ ನೋಂದಣಿ ಬಗ್ಗೆ ನಿಖರ ದಿನಾಂಕವನ್ನು ಘೋಷಣೆ ಮಾಡುವ ಸಂಭವ ಹೆಚ್ಚಿದೆ ಎನ್ನಲಾಗಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಿದ್ದೇವೆ ಎಂದು ಶರಣಪ್ರಕಾಶ್ ಪಾಟೀಲ್ ಅವರು ಅಧಿವೇಶನದಲ್ಲಿ ಹೇಳಿದ್ದರು. ಈ ಮೊದಲು ಡಿ. 26ರಂದು ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದರು. ಆದರೆ, ತರುವಾಯ ಅಧಿವೇಶನದಲ್ಲಿ ಉತ್ತರ ಕೊಡುವಾಗ ಡಿಸೆಂಬರ್ ಕೊನೇ ವಾರ ಎಂದು ಹೇಳಿದ್ದರು. ಹೀಗಾಗಿ ನೋಂದಣಿ ಪ್ರಕ್ರಿಯೆ ಆರಂಭದ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು. ಈಗ ಸ್ವತಃ ಸಚಿವರೇ ಸುದ್ದಿಗೋಷ್ಠಿಯನ್ನು ಕರೆದಿದ್ದು, ದಿನಾಂಕದ ಗೊಂದಲಗಳಿಗೆ ತೆರೆ ಬೀಳಲಿದೆ ಎನ್ನಲಾಗಿದೆ.
ಏನಿದು ಯುವನಿಧಿ ಯೋಜನೆ? ಯಾರಿಗೆ ಸಿಗುತ್ತದೆ ಹಣ?
- ಯುವ ನಿಧಿ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ಅರ್ಹತೆ ಮತ್ತು ಸಿಗುವ ಭತ್ಯೆ ವಿವರ ಹೀಗಿದೆ.
- 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ.
- ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ.
- ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.
- ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.
- ಯಾವುದಾದರೂ ಉದ್ಯೋಗ ಸಿಕ್ಕಿದ ಕೂಡಲೇ ಈ ಸವಲತ್ತು ಸ್ಥಗಿತಗೊಳ್ಳಲಿದೆ.
ಯುವ ನಿಧಿ ಯೋಜನೆ ಷರತ್ತುಗಳು ಇವು
- ‘ಸೇವಾ ಸಿಂಧು’ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು
- ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಣೆ ಮಾಡಿದರೆ ಸಾಕಾಗುತ್ತದೆ. ಆದರೆ, ಅಸತ್ಯದ ಪ್ರಮಾಣ ಸಲ್ಲದು.
- ಪದವಿ/ ಡಿಪ್ಲೊಮಾ ಮುಗಿಸಿದ ಫ್ರೆಷರ್ಸ್‌ಗೆ 6 ತಿಂಗಳಾದರೂ ಉದ್ಯೋಗ ಸಿಗದೆ ಇದ್ದರೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
- ಪ್ರತಿ ಫಲಾನುಭವಿಗೆ 2 ವರ್ಷಗಳಿಗೆ ಮಾತ್ರ ಈ ಯೋಜನೆ ಸೀಮಿತ. 2 ವರ್ಷಗಳೊಳಗೆ ಉದ್ಯೋಗ ದೊರೆತರೆ ಯೋಜನೆ ಸೌಲಭ್ಯ ಸ್ಥಗಿತವಾಲಿದೆ.
- ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಂಡು ಭತ್ಯೆ ಸ್ವೀಕರಿಸುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ.
ಯಾರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ?
- ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು.
- ಯಾವುದೇ ಅಪ್ರೆಂಟಿಸ್ ವೇತನ ಪಡೆಯುತ್ತಿರುವವರು.
- ಸರ್ಕಾರಿ/ ಖಾಸಗಿ ಉದ್ಯೋಗ ಪಡೆದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
- ಸರ್ಕಾರದ ನಾನಾ ಯೋಜನೆಗಳಡಿ ಅಥವಾ ಬ್ಯಾಂಕ್ ಸಾಲ ಪಡೆದು ಸ್ವಯಂ ಉದ್ಯೋಗ ಶುರು ಮಾಡಿದವರಿಗೂ ಇಲ್ಲ.
ಯುವ ನಿಧಿಗೆ ಅರ್ಜಿ ಸಲ್ಲಿಕೆ ಹೇಗೆ?
- ಕರ್ನಾಟಕ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
- ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತೆಗೆದಿಟ್ಟುಕೊಳ್ಳಿ.
- ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಸ್ಪಷ್ಟವಾಗಿರಬೇಕು, ಖಾತೆಯೇ ಇಲ್ಲದಿದ್ದರೆ ಈಗಲೇ ಮಾಡಿಸಿ, ಕೆವೈಸಿ ಕೂಡಾ ಮಾಡಿ ಇಡಿ.
- ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ ಕಡ್ಡಾಯ (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು)
- ಡಿಪ್ಲೊಮಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ. (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು).
ಇದನ್ನೂ ಓದಿ: COVID Subvariant JN1: ಇನ್ನು ಮಾಸ್ಕ್ ಧರಿಸಿ ಬಸ್‌ನಲ್ಲಿ ಪ್ರಯಾಣಿಸಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಯುವ ನಿಧಿ ಅರ್ಜಿ ಎಲ್ಲಿ ಸಲ್ಲಿಸಬೇಕು?
- ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಇನ್ನೂ ಅಧಿಕೃತವಾಗಿ ಹೇಳಿಲ್ಲ. ನಾವೇ ಮೊಬೈಲ್‌ನಲ್ಲಿ, ಕಂಪ್ಯೂಟರ್‌ಗಳಲ್ಲಿ ಅರ್ಜಿ ತುಂಬಬಹುದು. ಬೇರೆ ಕೇಂದ್ರಗಳ ಸಹಕಾರವನ್ನು ಕೂಡಾ ನೀಡಲಾಗುತ್ತದೆ ಎನ್ನಲಾಗಿದೆ.