ಬೆಂಗಳೂರು: ಪ್ರಧಾನ ಮಂತ್ರಿ ಅವರ ರೋಜಗಾರ್ ಮೇಳ (ಉದ್ಯೋಗ ಮೇಳ – Rozgar Mela) ದೇಶದ ಯುವ ಸಮೂಹಕ್ಕೆ ಉದ್ಯೋಗ ಒದಗಿಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು.
ಬೆಂಗಳೂರಿನಲ್ಲಿ ಇಂದು ಬಿಎಸ್ಎಫ್ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಲ್ಹಾದ್ ಜೋಶಿ, ಪ್ರಧಾನ ಮಂತ್ರಿ ರೋಜಗಾರ್ ಯೋಜನೆಯಡಿ ನರೇಂದ್ರ ಮೋದಿ (PM Narendra Modi) ಅವರ ಅವಧಿಯಲ್ಲಿ 7 ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ರೋಜ್‌ಗಾರ್ ಮೇಳ ದೇಶದ ಯುವಕರಿಗೆ ಉದ್ಯೋಗವನ್ನು ಒದಗಿಸುವ ಪ್ರಬಲ ಮಾಧ್ಯಮವೆಂಬುದು ಈಗ ಸಾಬೀತಾಗಿದೆ ಎಂದು ಪ್ರಲ್ಹಾದ್ ಜೋಶಿ ಪ್ರತಿಪಾದಿಸಿದರು.
2022ರ ಅಕ್ಟೋಬರ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದನ್ನು ಮಿಷನ್ ಮೋಡ್‌ನಲ್ಲಿ ಪ್ರಾರಂಭಿಸಿದಾಗಿನಿಂದ ಈವರೆಗೆ 7 ಲಕ್ಷಕ್ಕೂ ಅಧಿಕ ಯುವಕ – ಯುವತಿಯರು ಉದ್ಯೋಗ ಕಂಡುಕೊಂಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ನೇಮಕಾತಿ ಪತ್ರ ವಿತರಿಸಿದ ಪ್ರಲ್ಹಾದ್ ಜೋಶಿ
ಯುವಕರ ಸಬಲೀಕರಣಕ್ಕೆ ಮತ್ತು ಅವರಿಗೆ ಉದ್ಯೋಗ ಒದಗಿಸುವ ಮೂಲಕ ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ಭಾರತವನ್ನು ರಚಿಸುವಲ್ಲಿ ಮೋದಿ ಸರ್ಕಾರ ಸಾಧನೆ ತೋರಿದೆ ಎಂದು ಹೇಳಿದ ಪ್ರಲ್ಹಾದ್ ಜೋಶಿ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಘಟಕಗಳಲ್ಲಿ ನೇಮಕಗೊಂಡ ಯುವಕರಿಗೆ ಇದೇ ವೇಳೆ ಸಚಿವ ಪ್ರಲ್ಹಾದ್ ಜೋಶಿ ನೇಮಕಾತಿ ಪತ್ರಗಳನ್ನು ವಿತರಿಸಿದರು.
ಏನಿದು ರೋಜಗಾರ್ ಮೇಳ?
ಯುವ ಜನತೆಗೆ ಉದ್ಯೋಗ ಕಲ್ಪಿಸುವ ಸಂಬಂಧ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮವು ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಮಾರ್ಗದರ್ಶನದಲ್ಲಿ ಉದ್ಯೋಗ ಮೇಳ (ರೋಜ್‌ಗಾರ್ ಮೇಳ) ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಯುವ ಜನತೆಗೆ ಉದ್ಯೋಗ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ಯುವ ಜನತೆಗೆ ಉದ್ಯೋಗ ನೀಡುವುದರ ಜತೆ ಜತೆಗೆ ನಾಗರಿಕರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗುರಿಯನ್ನು ಹಾಕಿಕೊಂಡಿದ್ದಾರೆ. ಮೋದಿ ಆಶಯದ ಮತ್ತು ನಿರ್ದೇಶನದ ಮೇರೆಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ (ಪಿಎಂಒ) ಈಚೆಗೆ ಪ್ರಕಟಣೆ ಮೂಲಕ ತಿಳಿಸಿತ್ತು.
ಎಲ್ಲೆಲ್ಲ ಉದ್ಯೋಗಾವಕಾಶ?
ಪ್ರಧಾನಿ ಕಾರ್ಯಾಲಯದ ಮಾಹಿತಿಯನ್ವಯ, ಕೇಂದ್ರ ಸರ್ಕಾರದ 38 ಸಚಿವಾಲಯ ಅಥವಾ ಇಲಾಖೆಗಳಿಗಾಗಿ ದೇಶಾದ್ಯಂತ ನೇಮಕಾತಿ ನಡೆಯಲಿದೆ. ಗ್ರೂಪ್ ಎ ಶ್ರೇಣಿಯಿಂದ ಹುದ್ದೆಗಳಿಂದ ತೊಡಗಿ ಗ್ರೂಪ್ ಸಿ ಶ್ರೇಣಿಯ ಹುದ್ದೆಗಳವರೆಗೆ ನೇಮಕಾತಿಯನ್ನು ಮಾಡಲಾಗುವುದು. ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್-ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೆಬಲ್‌ಗಳು, ಎಲ್‌ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ಗಳು ಮತ್ತು ಎಂಟಿಎಸ್ ಹುದ್ದೆಗಳಿಗೆ ಸಹ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ.