Site icon Vistara News

7th Pay Commission : 7ನೇ ವೇತನ ಆಯೋಗದಿಂದ ಸಿಎಂ ಸಿದ್ದರಾಮಯ್ಯ ಭೇಟಿ; ಮಹತ್ವದ ಚರ್ಚೆ

7th pay commission meets CM Siddaramaiah

ಬೆಂಗಳೂರು: 7ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ (7th Pay Commission Chairman Sudhakar Rao) ಹಾಗೂ ಸದಸ್ಯರ ನಿಯೋಗವು ಶುಕ್ರವಾರ (ಸೆ. 29) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಈ ವೇಳೆ ಕೆಲವು ಮಹತ್ವದ ಸಂಗತಿಗಳ ಬಗ್ಗೆ ಸಿಎಂ ಗಮನ ಸೆಳೆಯಲಾಗಿದೆ ಎಂದು ತಿಳಿದು ಬಂದಿದೆ.

ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಾರ್ಯದರ್ಶಿಗಳಾದ ಪಿ.ಸಿ. ಜಾಫರ್, ಡಾ. ಎಂ.ಟಿ. ರೇಜು ಈ ವೇಳೆ ಭಾಗಿಯಾಗಿದ್ದರು.

ಇದನ್ನೂ ಓದಿ: Cauvery water dispute : ಸಂಕಷ್ಟ ಸೂತ್ರಕ್ಕೆ ಒತ್ತಡ ಹಾಕುವೆನೆಂದ ಸಿಎಂ; ನೀರು ಬಿಡದಿದ್ದರೆ ಸರ್ಕಾರವೇ ವಜಾ ಆಗಬಹುದು!

ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು (Revision of pay scales of state government employees) ಮತ್ತು ನೂತನ ವೇತನ ರಚನೆ (New pay structure) ಸೇರಿದಂತೆ ಇನ್ನಿತರ ಅಂಶಗಳಿಗಾಗಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಾಜ್ಯ ಸರ್ಕಾರ ರಚನೆ ಮಾಡಿತ್ತು. ಈ ಆಯೋಗವು ಈಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆಲವು ಸಂಗತಿಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದೆ.

2022ರಲ್ಲಿ ರಚನೆಯಾಗಿದ್ದ ಆಯೋಗ

2022ರ ನವೆಂಬರ್‌ 19ರಂದು ಆಗಿನ ಸಿಎಂ ಬಸವರಾಜ ಬೊಮ್ಮಾಯಿ (Former CM Basavaraj Bommai) ಅವರು 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿ ಆದೇಶಿಸಿದ್ದರು. ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ 6 ತಿಂಗಳ ಕಾಲಮಿತಿಯಲ್ಲಿ ವರದಿಯನ್ನು ಸಲ್ಲಿಸಲು, ತ್ರಿಸದಸ್ಯರ ಆಯೋಗವನ್ನು ಅವರು ರಚಿಸಿದ್ದರು.

ಈ 7ನೇ ರಾಜ್ಯ ವೇತನ ಆಯೋಗಕ್ಕೆ ಸುಧಾಕರ್ ರಾವ್ ಅಧ್ಯಕ್ಷ. ಪಿ. ಬಿ. ರಾಮಮೂರ್ತಿ, ಶ್ರೀಕಾಂತ್ ಬಿ. ವನಹಳ್ಳಿ, ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಕಾರ್ಯದರ್ಶಿಗಳಾಗಿ ನೇಮಕವಾಗಿದ್ದರು. ಈ ಹಿಂದಿನ ಆದೇಶದನ್ವಯ ಆಯೋಗವು 19/5/2023ಕ್ಕೆ ವರದಿ ನೀಡಬೇಕಿತ್ತು. ಆದರೆ, ಬಳಿಕ ವಿಧಾನಸಭಾ ಚುನಾವಣೆ ಬಂದಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೇ 19ಕ್ಕೆ ವರದಿ ನೀಡಬೇಕಿದ್ದ ಕಾಲಾವಧಿಯನ್ನು ಮತ್ತೆ 6 ತಿಂಗಳ ಅವಧಿಗೆ ವಿಸ್ತರಣೆ ಮಾಡಿ ಆದೇಶಿಸಿತ್ತು.

7ನೇ ವೇತನ ಆಯೋಗದ ಕಾರ್ಯಚಟುವಟಿಕೆ ಏನು?

ಈ 7ನೇ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ (ಯುಜಿಸಿ/ ಎಐಸಿಟಿಇ/ ಐಸಿಎಆರ್/ ಎನ್‌ಜೆಪಿಸಿ ವೇತನ ಶ್ರೇಣಿ ಹೊಂದಿರುವವರನ್ನು ಹೊರತುಪಡಿಸಿ), ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿಗೆ ಮರಣ ಹಾಗೂ ನಿವೃತ್ತಿ ಉಪದಾನ ಸೌಲಭ್ಯಗಳನ್ನೊಳಗೊಂಡಂತೆ ಲಭ್ಯವಿರುವ ಎಲ್ಲ ಕ್ರೋಢೀಕೃತ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಂಡು, ಈ ಸಿಬ್ಬಂದಿ ಪ್ರಸ್ತುತ ವೇತನ ರಚನೆಯನ್ನು ಪರಿಶೀಲಿಸುವುದು ಹಾಗೂ ಅಪೇಕ್ಷಣೀಯವಾದ ಹಾಗೂ ಕಾರ್ಯಸಾಧ್ಯವಿರುವ ನೂತನ ವೇತನ ರಚನೆಯನ್ನು ರೂಪಿಸಬೇಕು ಎಂಬುದಾಗಿ ರಾಜ್ಯ ಸರ್ಕಾರವು ಕಾರ್ಯಚಟುವಟಿಕೆಯನ್ನು ಸೂಚಿಸಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವೃಂದದ ಹುದ್ದೆಗಳನ್ನು ಸಮೀಕರಿಸಿ ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಗಳನ್ನು ಪರಿಶೀಲನೆ ಮಾಡಬೇಕು. ರಾಜ್ಯ ಸರ್ಕಾರವು ಅಳವಡಿಸಿಕೊಳ್ಳಬಹುದಾದ ತುಟ್ಟಿಭತ್ಯೆಯ ಸೂತ್ರವನ್ನು ನಿರ್ಧರಿಸಿ ಪರಿಶೀಲಿಸಬೇಕು. ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ, ವಿಶೇಷ ಭತ್ಯೆಗಳು ಇತ್ಯಾದಿ ಮತ್ತು ರಜೆ ಪ್ರಯಾಣ ರಿಯಾಯಿತಿ ಹಾಗೂ ವೈದ್ಯಕೀಯ ಮರುಪಾವತಿ ಸೌಲಭ್ಯಗಳನ್ನೊಳಗೊಂಡಂತಹ ವಿವಿಧ ಭತ್ಯೆಗಳನ್ನು ಪರಿಶೀಲಿಸುವುದರ ಜತೆಗೆ ಅಪೇಕ್ಷಣೀಯವಾದ ಹಾಗೂ ಕಾರ್ಯಸಾಧ್ಯವಿರುವ ಬದಲಾವಣೆಗಳನ್ನು 7ನೇ ವೇತನ ಆಯೋಗವು ಸಲಹೆ ಮಾಡಬೇಕಿದೆ.

ಪರಿಶೀಲನೆ ಮಾಡಬೇಕಾದ ಇತರೆ ಅಂಶಗಳೇನು?

ಆಯೋಗವು ಶಿಫಾರಸು ಮಾಡುವಲ್ಲಿ, ರಾಜ್ಯ ಸಂಪನ್ಮೂಲಗಳು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತಾಗಿ ರಾಜ್ಯ ಸರ್ಕಾರದ ಹೊಣೆಗಳು, ಶಾಸನಬದ್ಧ ಹಾಗೂ ಕ್ರಮಬದ್ಧ ಕಾರ್ಯಗಳು, ಋಣಸೇವಾ ನಿರ್ವಹಣೆಗಳು ಮತ್ತು ಇತರೆ ಅಭಿವೃದ್ಧಿಯೇತರ ಅಗತ್ಯಗಳನ್ನು ಹಾಗೂ ವಿತ್ತೀಯ ಹೊಣೆಗಾರಿಕೆ ನಿರ್ವಹಣೆ ಅಧಿನಿಯಮ, 2002ರ ಅಧ್ಯಾದೇಶದ ಅವಕಾಶಗಳ ಪರಿಮಿತಿಯನ್ನು ಗಮನದಲ್ಲಿರಿಸಿಕೊಳ್ಳುವುದು ಹಾಗೂ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸುವುದು. ರಾಜ್ಯ ಸರ್ಕಾರದಿಂದ ವಹಿಸಲ್ಪಡುವ/ ಸೂಚಿಸಬಹುದಾದ ಇತರೆ ವಿಷಯಗಳನ್ನು ಈ ಆಯೋಗವು ಪರಿಶೀಲಿಸಬೇಕಿದೆ.

ಆಯೋಗವು ತನ್ನದೇ ಆದ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು ಹಾಗೂ ಪರಿಶೀಲನಾರ್ಹ ಅಂಶಗಳಿಗೆ ಅಗತ್ಯವೆನಿಸಿದ ಮಾಹಿತಿಗಳನ್ನು ವಿವಿಧ ಇಲಾಖೆಗಳಿಂದ ಪಡೆಯಬಹುದಾಗಿರುತ್ತದೆ. ಸರ್ಕಾರದ ಎಲ್ಲ ಇಲಾಖೆಗಳು ಆಯೋಗವು ಅಪೇಕ್ಷಿಸುವ ಎಲ್ಲ ಮಾಹಿತಿ, ದಾಖಲೆ ಹಾಗೂ ಇನ್ನಿತರೆ ಸಹಕಾರವನ್ನು ಒದಗಿಸಬೇಕು. ಎಲ್ಲ ಸೇವಾ ಸಂಘಟನೆಗಳು, ಸ್ಥಳೀಯ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳು ಮತ್ತು ಇತರೆ ಸಂಬಂಧಪಟ್ಟವರು ಆಯೋಗಕ್ಕೆ ಅವುಗಳ ಸಂಪೂರ್ಣ ಸಹಕಾರ ಮತ್ತು ನೆರವನ್ನು ನೀಡುತ್ತವೆ ಎಂದು ಸರ್ಕಾರವು ಭಾವಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಸರ್ಕಾರಿ ನೌಕರರು

ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಶೇ 38 ರಿಂದ 40ರಷ್ಟು ವೇತನ ಹೆಚ್ಚಾಗುವ ವಿಶ್ವಾಸವಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಹೇಳಿದ್ದಾರೆ.

ಇದನ್ನೂ ಓದಿ: Cauvery Water Dispute : ಕಾವೇರಿ ನೀರು ಹರಿಸುವ ಹೊಸ ಸೂತ್ರಕ್ಕೆ ಆಗ್ರಹ: ಡಿಸಿಎಂ ಡಿ.ಕೆ.ಶಿವಕುಮಾರ್

ನವೆಂಬರ್‌ ಅಂತ್ಯಕ್ಕೆ ವರದಿ?

7ನೇ ವೇತನ ಆಯೋಗವು ನವೆಂಬರ್ ಅಂತ್ಯದ ವೇಳೆಗೆ ವೇತನ ಹೆಚ್ಚಳಕ್ಕೆ ಪೂರಕವಾಗಿರುವ ವರದಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಮತ್ತೆ ಆರು ತಿಂಗಳು ಕಾಲ ಮಿತಿಯನ್ನು ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ನವೆಂಬರ್‌ ಅಂತ್ಯಕ್ಕೆ ವರದಿ ನೀಡಬಹುದಾಗಿದೆ. ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ಶೇ. 38ರಿಂದ 40ವೇತನ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

Exit mobile version