ನವ ದೆಹಲಿ: ಭಾರತೀಯ ವಾಯುಪಡೆಯು ನೂತನ ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಅಗ್ನಿವೀರರ ನೇಮಕಾತಿ ಸಲುವಾಗಿ ನಡೆಸಿದ್ದ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಿದ್ದು, ದಾಖಲೆಯ ೭.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.
ಈ ಹಿಂದೆ ವಾಯುಪಡೆಯ (IAF) ನೇಮಕಾತಿ ಇತಿಹಾಸದಲ್ಲಿ ಗರಿಷ್ಠ ೬,೩೧,೫೨೮ ಅರ್ಜಿಗಳು ಸಲ್ಲಿಕೆಯಾಗಿತ್ತು. ಈ ಸಲ ೭,೪೯,೮೯೯ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ವಾಯುಪಡೆ ಟ್ವೀಟ್ ಮೂಲಕ ತಿಳಿಸಿದೆ.
ಜೂನ್ ೨೪ರಂದು ನೋಂದಣಿ ಆರಂಭವಾಗಿತ್ತು. ಜುಲೈ ೫ಕ್ಕೆ ಮುಕ್ತಾಯವಾಗಿತ್ತು. ವಾಯುಪಡೆಯ ೩,೦೦೦ ಹುದ್ದೆಗಳಿಗೆ ಅಗ್ನಿಪಥ್ ಯೋಜನೆಯಡಿ ನೇಮಕಾತಿ ನಡೆಯಲಿದೆ. ಜೂನ್ ೧೪ರಂದು ಸೇನೆಯ ನೂತನ ನೇಮಕಾತಿ ಯೋಜನೆಯಾದ ಅಗ್ನಿಪಥ್ ಘೋಷಣೆಯಾದ ಬಳಿಕ ಕೆಲ ರಾಜ್ಯಗಳಲ್ಲಿ ಸುಮಾರು ಒಂದು ವಾರ ತನಕ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿತ್ತು.
ಅಗ್ನಿಪಥ್ ಯೋಜನೆಯಲ್ಲಿ ಸೇನೆಗೆ ೧೭-೨೧ ವರ್ಷದ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಆಯ್ಕೆಯಾಗುವ ಅಗ್ನಿವೀರರ ಕೆಲಸದ ಅವಧಿ ೪ ವರ್ಷ. ಇವರಲ್ಲಿ ೨೫% ಮಂದಿ ಅರ್ಹರನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಉಳಿದವರಿಗೆ ಹಲವು ಸೌಕರ್ಯಗಳನ್ನು ಕೊಟ್ಟು ಬೀಳ್ಕೊಡಲಾಗುವುದು. ಹೀಗೆ ನಿರ್ಗಮಿಸುವ ಅಗ್ನಿವೀರರಿಗೆ ನಾನಾ ವಲಯಗಳಲ್ಲಿ ಉದ್ಯೋಗಾವಕಾಶಗಳು ದೊರೆಯುತ್ತವೆ.
ಇದನ್ನೂ ಓದಿ:ಹೊಸ ಮಾದರಿಯ ಯುದ್ಧ ಎದುರಿಸಲು ಅಗ್ನಿಪಥ್ ಅಸ್ತ್ರ; ಎನ್‌ಎಸ್‌ಎ ಅಜಿತ್ ದೋವಲ್ ಪ್ರತಿಪಾದನೆ