ಬೆಂಗಳೂರು: ಸಾಮಾನ್ಯವಾಗಿ ಎಐ ತಂತ್ರಜ್ಞಾನದ ಪರಿಣಾಮ ಉದ್ಯೋಗ ನಷ್ಟವಾಗುತ್ತಿದೆ ಎಂಬ ಆತಂಕದ ಮಾತುಗಳು ಕೇಳಿ ಬರುತ್ತಿವೆ. ಆದರೆ ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಕೃತಕ ಬುದ್ದಿಮತ್ತೆ ( Artificial intelligence-AI) ಅನೇಕ ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸಿದೆ. ಉದಾಹರಣೆಗೆ ಜಾಬ್ ಸರ್ಚ್ ಪೋರ್ಟಲ್ ಇಂಡೀಡ್ ಪ್ರಕಾರ (Indeed) ಎಐ ಮತ್ತು ಲಾರ್ಜ್ ಲಾಂಗ್ವೇಜ್ ಕುರಿತ ಹುದ್ದೆಗಳ ಪೋಸ್ಟ್‌ಗಳಲ್ಲಿ 158% ಹೆಚ್ಚಳವಾಗಿದೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮಾರುಕಟ್ಟೆಯಲ್ಲಿ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಭಾರತವು ಜಾಗತಿಕ ಎಐ ವಲಯದಲ್ಲಿ ಪ್ರಮುಖ ಸ್ಥಾನ ಗಳಿಸಿದೆ. ಪ್ರತಿಭಾವಂತ ಎಐ ವೃತ್ತಿಪರರ ತಾಣವಾಗಿ ಹೊರಹೊಮ್ಮಿದೆ. ದೇಶದಲ್ಲಿ ಸ್ಟೆಮ್ ಎಜುಕೇಶನ್ (STEM Education) S- ಸೈನ್ಸ್, T -ಟೆಕ್ನಾಲಜಿ, E- ಎಂಜಿನಿಯರಿಂಗ್, M- ಗಣಿತ, ಪ್ರಬಲವಾಗಿರುವುದರಿಂದ ಅನುಕೂಲವಾಗಿದೆ ಎಂದು ಇಂಡೀಡ್ ಇಂಡಿಯಾದ ಸೇಲ್ಸ್ ವಿಭಾಗದ ಮುಖ್ಯಸ್ಥ ಶಶಿ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: IBM halts hiring : ಐಬಿಎಂನಲ್ಲಿ ಎಐ ಹವಾ, 7800 ಉದ್ಯೋಗ ನಷ್ಟ ಸಂಭವ
ಭಾರತ ಮಾತ್ರವಲ್ಲದೆ ಸಿಂಗಾಪುರದಲ್ಲೂ ಎಐ ಜಾಬ್ ಪೋಸ್ಟ್‌ನಲ್ಲಿ 94% ಏರಿಕೆಯಾಗಿದೆ. ಅಮೆರಿಕದಲ್ಲಿ ಸಾಫ್ಟ್‌ವೇರ್ ಡೆವಲಪರ್ ಪೋಸ್ಟ್‌ಗಳಲ್ಲಿ 30% ಹೆಚ್ಚಳವಾಗಿದೆ ಎಂದು ಶಶಿ ಕುಮಾರ್ ತಿಳಿಸಿದ್ದಾರೆ.
ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TaTa Consultancy Services) ಚಾಟ್‌ಜಿಪಿಟಿ ಮಾದರಿಯಲ್ಲಿ (ChatGPT) ತನ್ನದೇ ಆದ ಕೃತಕಬುದ್ದಿಮತ್ತೆಯ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಚಾಟ್‌ಜಿಪಿಟಿಯನ್ನು ಓಪನ್ ಎಐ (OpenAI) ತಯಾರಿಸಿದೆ. ಎಂಟರ್‌ಪ್ರೈಸ್ ಕೋಡ್ ಸೃಷ್ಟಿಗೆ (enterprise code ) ಟಿಸಿಎಸ್ ಸೃಷ್ಟಿಸುವ ಎಐ ಸಾಫ್ಟ್‌ವೇರ್ ಬಳಕೆಯಾಗಲಿದೆ (artificial intelligence) ಎಂದು ಕಂಪನಿಯ ಚೀಫ್ ಆಪರೇಟಿಂಗ್ ಆಫೀಸರ್ ಎನ್.ಗಣಪತಿ ಸುಬ್ರಮಣಿಯನ್ ತಿಳಿಸಿದ್ದಾರೆ.
ಟಿಸಿಎಸ್‌ನ ಪ್ರಾಜೆಕ್ಟ್ ಆರಂಭಿಕ ಹಂತದಲ್ಲಿದ್ದು, ಆಂತರಿಕ ಕೋಡ್, ಡೇಟಾ ಮತ್ತು ರಿಸೋರ್ಸ್ ವಿಭಾಗ ಈ ಬಗ್ಗೆ ಸಕ್ರಿಯವಾಗಿದೆ. ಟಿಸಿಎಸ್ ಕಳೆದ ಹಲವಾರು ವರ್ಷಗಳಿಂದಲೂ ಕೋಡ್, ಡೇಟಾ ಅನುಭವವನ್ನು ಹೊಂದಿದೆ. ಈ ಎಲ್ಲ ಜ್ಞಾನವನ್ನು ಬಳಸಿಕೊಳ್ಳಲಾಗುವುದು. ಭವಿಷ್ಯದಲ್ಲಿ ಕಂಪನಿಯು ತನ್ನ ಗ್ರಾಹಕರ ಪ್ರಾಜೆಕ್ಟ್‌ಗಳನ್ನು ವಹಿಸುವ ಸಂದರ್ಭದಲ್ಲಿ ತನ್ನದೇ ಎಐ ಸಲ್ಯೂಷನ್ಸ್ ಅನ್ನು ಬಳಸುವುದು ಉತ್ತಮ. ಇದಕ್ಕಾಗಿ ಹಲವಾರು ಇತರ ಪೂರೈಕೆದಾರರ ಅವಲಂಬನೆ ಒಳ್ಳೆಯದಲ್ಲ ಎಂದು ಸಿಒಒ ಎನ್ ಗಣಪತಿ ಹೇಳಿದ್ದಾರೆ.