ಬೆಂಗಳೂರು: ವೇತನ ಪರಿಷ್ಕರಣೆಗಾಗಿ ರಾಜ್ಯ ಸರ್ಕಾರಿ ನೌಕರರ ಹೋರಾಟ, ಮುಷ್ಕರದ ನಡುವೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ವೇತನ ಏರಿಕೆಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯವಾಗಿ ಅವರ ಕನಿಷ್ಠ ಮಾಸಿಕ ವೇತನ 26,000 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಹೋಳಿ ಹಬ್ಬಕ್ಕೆ ಮುನ್ನ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿಯಿದು. ಕೆಲ ದಿನಗಳಲ್ಲಿ ಕೇಂದ್ರ ಸರ್ಕಾರ ಉದ್ಯೋಗಿಗಳ ತುಟ್ಟಿಭತ್ಯೆ ( Dearness Allowance) ಮತ್ತು ಫಿಟ್‌ಮೆಂಟ್ ಫ್ಯಾಕ್ಟರ್ (fitment factor) ಅಡಿಯಲ್ಲಿ ಕನಿಷ್ಠ ವೇತನವನ್ನು ಏರಿಸುವ ಸಾಧ್ಯತೆ ಇದೆ. ( 7th Pay commission)
ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆ
ಕೇಂದ್ರ ಸಚಿವ ಸಂಪುಟ ಸಭೆ ಮಾರ್ಚ್ 1ರಂದು ನಡೆಯಲಿದ್ದು, ವೇತನ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸುದೀರ್ಘ ಕಾಲದಿಂದ ಉದ್ಯೋಗಿಗಳು ಡಿಎ ಏರಿಕೆಗೆ ಒತ್ತಾಯಿಸುತ್ತಿದ್ದಾರೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಸಲ ಏರಿಸುತ್ತದೆ. ಜನವರಿ ಹಾಗೂ ಜುಲೈನಲ್ಲಿ ಇದು ನಡೆಯುತ್ತದೆ. ಆದರೆ ಈ ಹಿಂದೆ ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆಯನ್ನು ಏರಿಸಿತ್ತು. ಇದೇ ಟ್ರೆಂಡ್ ಅನ್ನು ಸರ್ಕಾರ ಅನುಸರಿಸಿದರೆ 2023ರ ಮಾರ್ಚ್‌ನಲ್ಲಿ ತುಟ್ಟಿ ಭತ್ಯೆ ಏರಿಕೆಯಾಗಲಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಡಿಎ ಬೇಡಿಕೆಯನ್ನು ಪೂರೈಸಿದರೆ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ವೇತನ ತನ್ನಿಂತಾನೆ ಹೆಚ್ಚಳವಾಗಲಿದೆ. 4% ಡಿಎ ಹೆಚ್ಚಳವಾದರೆ 38%ರಿಂದ ೪೨% ಏರಿಕೆಯಾಗಲಿದೆ. ಇದರಿಂದ 48 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ 68 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಹಣಕಾಸು ಸಚಿವಾಲಯವು 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆಯನ್ನು (house rent allowance -HRA) ಪರಿಷ್ಕರಿಸಿತ್ತು.
ಇತ್ತೀಚಿನ ಗ್ರಾಹಕ ದರ ಸೂಚ್ಯಂಕ (consumer price index) ಆಧರಿಸಿ ತುಟ್ಟಿಭತ್ಯೆಯ ಪ್ರಮಾಣವನ್ನು ಸರ್ಕಾರ ನಿರ್ಧರಿಸುತ್ತದೆ. ಡಿಎ ಏರಿಕೆ 2023ರ ಜನವರಿಯಿಂದ ಅನ್ವಯವಾಗಲಿದೆ. ಈ ಹಿಂದೆ 2022ರ ಸೆಪ್ಟೆಂಬರ್ 28ರಂದು ತುಟ್ಟಿಭತ್ಯೆಯ ಪರಿಷ್ಕರಣೆ ನಡೆದಿತ್ತು. ಅದು 2022ರ ಜುಲೈ 1 ರಿಂದ ಜಾರಿಯಾಗಿತ್ತು.
ಕನಿಷ್ಠ ವೇತನ 18,000 ರೂ.ಗಳಿಂದ 26,000 ರೂ.ಗೆ ಏರಿಕೆ ಸಂಭವ: ಕೇಂದ್ರ ಸರ್ಕಾರಿ ನೌಕರರಿಗೆ ಫಿಟ್‌ಮೆಂಟ್ ಫ್ಯಾಕ್ಟರ್ ಅಡಿಯಲ್ಲಿ ವೇತನ ಪರಿಷ್ಕರಣೆ ಮಾಡಿದರೆ, ಕನಿಷ್ಠ ಮಾಸಿಕ ವೇತನ 18,000 ರೂ.ಗಳಿಂದ 26,000 ರೂ.ಗೆ ಏರಿಕೆಯಾಗಲಿದೆ. ೭ನೇ ವೇತನ ಆಯೋಗದ ಫಿಟ್‌ಮೆಂಟ್ ಫಾರ್ಮುಲಾ (Fitment Formula) ಅಡಿಯಲ್ಲಿ ಕನಿಷ್ಠ ವೇತನ ಪರಿಷ್ಕರಣೆ ಸನ್ನಿಹಿತವಾಗಿದೆ.
ಈ ಎರಡು ವಿಧದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳ ವೇತನ ಪರಿಷ್ಕರಣೆಯು ಹೋಳಿ (ಮಾರ್ಚ್ 8) ಹಬ್ಬದ ಬಳಿಕ ನಡೆಯಲಿದೆ ಎಂದು ವರದಿಯಾಗಿದೆ. ಪ್ರಸ್ತುತ ಫಿಟ್‌ಮೆಂಟ್ ಫ್ಯಾಕ್ಟರ್ 2.57 ಪರ್ಸೆಂಟ್‌ನಷ್ಟಿದೆ. ಅಂದರೆ ಕೇಂದ್ರ ಸರ್ಕಾರಿ ಉದ್ಯೋಗಿಯೊಬ್ಬನ ಮೂಲವೇತನವು 4200 ಗ್ರೇಡ್ ಪೇ ಅಡಿಯಲ್ಲಿ 15,500 ರೂ. ಇದ್ದರೆ, ಒಟ್ಟು ಮಾಸಿಕ ವೇತನ 15,500×2.57 ಅಥವಾ 39,835 ರೂ. ಆಗಲಿದೆ. ಉದ್ಯೋಗಿಗಳು ಈಗ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು 3.68ಕ್ಕೆ ಏರಿಸಲೂ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾದರೆ ಸರ್ಕಾರಿ ಉದ್ಯೋಗಿಗಳು ಸಾಫ್ಟ್‌ವೇರ್ ಎಂಜಿನಿಯರ್‌ಗಳ್ನೂ ಮೀರಿಸುವಂತೆ ವೇತನ ಪಡೆಯಲಿದ್ದಾರೆ ಎನ್ನುತ್ತಾರೆ ನೆಟ್ಟಿಗರು.
ಕೇಂದ್ರ ಸರ್ಕಾರ ಕಳೆದ ಜನವರಿಯಲ್ಲಿ ಬಿಡುಗಡೆಗೊಳಿಸಿರುವ ಪರಿಷ್ಕೃತ ಎಚ್‌ಆರ್‌ಎ ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರಿ ಉದ್ಯೋಗಿಯೊಬ್ಬರು ಮತ್ತೊಂದು ಸರ್ಕಾರದ ವಸತಿ ವ್ಯವಸ್ಥೆ ಹೊಂದಿದ್ದರೆ, ಕೇಂದ್ರದ ಎಚ್‌ಆರ್‌ಎ ಸಿಗುವುದಿಲ್ಲ. ಮಗ, ಮಗಳು, ಪೋಷಕರಿಗೆ ಸಿಕ್ಕಿರುವ ಸರ್ಕಾರಿ ವಸತಿಯಲ್ಲಿ ಇದ್ದರೆ, ಕೇಂದ್ರದ ಎಚ್‌ಆರ್‌ಎ ಸಿಗುವುದಿಲ್ಲ. ಸಾರ್ವಜನಿಕ ವಲಯದ ಸ್ವಾಯತ್ತ ಸಂಸ್ಥೆಗಳು, ಅರೆ-ಸರ್ಕಾರಿ ಸಂಸ್ಥೆಗಳ ಮೂಲಕ ವಸತಿ ಪಡೆದಿದ್ದರೂ, ಕೇಂದ್ರದ ಎಚ್‌ಆರ್‌ಎ ಸಿಗದು.
ರಾಜ್ಯ ಸರ್ಕಾರಿ ನೌಕರರ ಹೋರಾಟ:
ಏಳನೇ ವೇತನ ಆಯೋಗದ (7th Pay commission) ಶಿಫಾರಸುಗಳ ಮತ್ತು ಹಳೆ ಪಿಂಚಣಿ ಯೋಜನೆ (ಓಪಿಎಸ್) ಜಾರಿಗಾಗಿ ಒತ್ತಾಯಿಸಿ ಈಗಾಗಲೇ ತೀರ್ಮಾನಿಸಿದಂತೆ ಸರ್ಕಾರಿ ನೌಕರರೆಲ್ಲರೂ ಒಗ್ಗಟ್ಟಾಗಿ ಮಾ.1 ರಿಂದ ಮುಷ್ಕರ ಆಂರಭಿಸುತ್ತೇವೆ. ಇದು ಖಚಿತ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.
ವೇತನ ಹೆಚ್ಚಳದ ಕುರಿತು ಸರ್ಕಾರ ಬಾಯಿ ಮಾತಿನ ಹೇಳಿಕೆ ನೀಡುತ್ತಿದೆ. ಆದರೆ ಈ ಸಂಬಂಧ ಆದೇಶ ಹೊರಡಿಸಲು ಯಾವುದೇ ತೊಂದರೆಗಳಿಲ್ಲ. ಇದಕ್ಕಾಗಿ ನಾವು ಕಳೆದ ಎಂಟು ತಿಂಗಳಿನಿಂದ ಕಾಯುತ್ತಿದ್ದೇವೆ. ಬಜೆಟ್‌ನಲ್ಲಿ ಈ ಬಗ್ಗೆ ಪ್ರಕಟಿಸಲಾಗುತ್ತದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ. ಅಲ್ಲದೆ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂಬುದು ನಮ್ಮ ಇನ್ನೊಂದು ಪ್ರಮುಖ ಬೇಡಿಕೆಯಾಗಿದ್ದು, ಈ ಬಗ್ಗೆಯೂ ಸರ್ಕಾರ ಇದುವರೆಗೂ ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ಹೀಗಾಗಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.