Site icon Vistara News

BYJU’S | 2,500 ಉದ್ಯೋಗ ಕಡಿತಕ್ಕೆ ಸಿಬ್ಬಂದಿಯ ಕ್ಷಮೆ ಯಾಚಿಸಿದ ಬೈಜೂಸ್

byju raveendran

ನವ ದೆಹಲಿ: ಆನ್‌ಲೈನ್‌ ಶಿಕ್ಷಣ ತಂತ್ರಜ್ಞಾನದ ದಿಗ್ಗಜ ಬೈಜೂಸ್‌ ಸಂಸ್ಥೆಯ (BYJU’S) ಸಿಇಒ ಬೈಜು ರವೀಂದ್ರನ್‌ ಅವರು ಕಂಪನಿಯ 2,500 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಕ್ಕೆ ಸಂಬಂಧಿಸಿ ಸಿಬ್ಬಂದಿಯ ಬಳಿ ಕ್ಷಮೆ ಕೋರಿದ್ದಾರೆ.

ಬೈಜೂಸ್‌ ಒಟ್ಟಾರೆಯಾಗಿ ಲಾಭದಾಯಕವಾಗಿ ಉಳಿದುಕೊಳ್ಳುವ ನಿಟ್ಟಿನಲ್ಲಿ ತನ್ನ 50,000 ಉದ್ಯೋಗಿಗಳ ಪೈಕಿ 2,500 ಮಂದಿಯನ್ನು ವಜಾಗೊಳಿಸುತ್ತಿದೆ. ಈ ಬಗ್ಗೆ ಉದ್ಯೋಗಿಗಳಿಗೆ ಇ-ಮೇಲ್‌ ಕಳಿಸಿರುವ ಬೈಜು ರವೀಂದ್ರನ್‌ ಅವರು, ವಜಾಗೊಳಿಸುತ್ತಿರುವುದಕ್ಕೆ ಕ್ಷಮೆ ಇರಲಿ ಎಂದು ಕೋರಿದ್ದಾರೆ.

ಸಿಬ್ಬಂದಿಯನ್ನು ವಜಾಗೊಳಿಸಲು ಕಾರಣವಾದ ಅಂಶಗಳ ಬಗ್ಗೆ ಅವರು ಉದ್ಯೋಗಿಗಳಿಗೆ ಬರೆದಿರುವ ಭಾವನಾತ್ಮಕ ಪತ್ರದಲ್ಲಿ ವಿವರಿಸಿದ್ದಾರೆ. ನೀವು ಕಳೆದ ಕೆಲ ವಾರಗಳಿಂದ ಕಂಪನಿಯ ಗಾತ್ರವನ್ನು ಪುನಾರಚಿಸುವುದಕ್ಕೆ ಸಂಬಂಧಿಸಿದ ಪ್ಲಾನ್‌ ಬಗ್ಗೆ ಕೇಳಿರಬಹುದು. ಗೊಂದಲವೂ ಇರಬಹುದು. ಆದ್ದರಿಂದ ನಾನೇ ನೇರವಾಗಿ ನಿಮಗೆ ಬರೆಯುತ್ತಿದ್ದೇನೆ. ಕಳೆದ ನಾಲ್ಕು ವರ್ಷಗಳಲ್ಲಿ ನಾವು ಬಿಸಿನೆಸ್‌ ವಿಸ್ತರಣೆಗೆ ತ್ವರಿತ ಮತ್ತು ವ್ಯಾಪಕವಾಗಿ ನೇಮಕಾತಿಯನ್ನು ಮಾಡಿದ್ದೆವು. ಜಾಗತಿಕವಾಗಿ ನಾವು ಈಗ ೧೫ ಕೋಟಿಗೂ ಹೆಚ್ಚು ಮಂದಿಗೆ ಕಲಿಸುತ್ತಿದ್ದೇವೆ. 2018 ಮತ್ತು 2021ರ ನಡುವೆ ನಾವು ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದ್ದೆವು. 2022ರಲ್ಲಿ ಜಾಗತಿಕ ವಿದ್ಯಮಾನಗಳು ಮತ್ತು ಪಲ್ಲಟಗಳ ಪರಿಣಾಮ ಪರಿಸ್ಥಿತಿ ಬದಲಾಗಿದೆ. ವಿಶ್ವಾದ್ಯಂತ ಕಂಪನಿಗಳು ಪ್ರತಿಕೂಲ ಪರಿಣಾಮವನ್ನು ಎದುರಿಸುತ್ತಿವೆ. ಇದಕ್ಕೆ ಬೈಜೂಸ್‌ ಕೂಡ ಹೊರತಾಗಿಲ್ಲ. ಹೀಗಾಗಿ ಕಂಪನಿಯ ಭವಿಷ್ಯದ ದೃಷ್ಟಿಯಿಂದ ಪುನಾರಚನೆ ಅನಿವಾರ್ಯವಾಗಿದೆ. ಭಾರವಾದ ಹೃದಯದೊಂದಿಗೆ ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ಬೈಜೂಸ್‌ ಅನ್ನು ತೊರೆಯಬೇಕಾಗಿ ಬಂದಿರುವ ಉದ್ಯೋಗಿಗಳ ಬಳಿ ನಾನು ಕ್ಷಮೆ ಯಾಚಿಸುತ್ತಿದ್ದೇನೆ. ನೀವು ಅಂದರೆ ಕೇವಲ ಸಂಖ್ಯೆಯಲ್ಲ, ನನ್ನ ಕಂಪನಿಯ ಐದು ಪರ್ಸೆಂಟ್‌ ಅಲ್ಲ, ನೀವು ನನ್ನ ಐದು ಪರ್ಸೆಂಟ್‌ ಎಂದು ಬೈಜೂಸ್‌ ಭಾವುಕರಾಗಿ ಬರೆದಿದ್ದಾರೆ.

Exit mobile version