Site icon Vistara News

World Sleep Day : ಉದ್ಯೋಗಿಗಳಿಗೆ ನಿದ್ದೆ ಮಾಡಲು ರಜೆ ಘೋಷಿಸಿದ ಬೆಂಗಳೂರಿನ ವೇಕ್‌ಫಿಟ್

sleep day

#image_title

ಬೆಂಗಳೂರು: ನಿಮಗೆ ಅಚ್ಚರಿಯಾಗಬಹುದು. ಸಾಮಾನ್ಯವಾಗಿ ಎಲ್ಲರೂ ಕಂಪನಿಗಳಲ್ಲಿ ಸಮಾ ದುಡಿದು ಬಸವಳಿದು ಮನೆಗೆ ಬರುತ್ತಾರೆ. ( world sleep day) ವಾರಾಂತ್ಯ ಬಂದರೆ ಸಾಕು ಎಂದು ಭಾವಿಸುತ್ತಾರೆ. ಆದರೆ ಈಗ ಕಾರ್ಪೊರೇಟ್‌ ಸಂಸ್ಕೃತಿ ಬದಲಾಗುತ್ತಿದೆ. ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಭತ್ಯೆ, ಬಡ್ತಿ, ವೇತನ ಹೆಚ್ಚಳ ಇತ್ಯಾದಿ ಹಣಕಾಸು ಪ್ಯಾಕೇಜ್‌ಗಳ ಜತೆಗೆ ವಿನೂತನ ಆಫರ್‌ಗಳನ್ನೂ ನೀಡುತ್ತಿವೆ. (World Sleep Day) ಅಂಥ ಒಂದು ವಿಶೇಷ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಮೂಲದ ವೇಕ್‌ಫಿಟ್‌ ಸಲ್ಯೂಷನ್ಸ್‌ (wakefit solutions) ತನ್ನ ಉದ್ಯೋಗಿಗಳಿಗೆ ಐಚ್ಛಿಕ ರಜೆಯನ್ನು ಇಂದು (ಮಾರ್ಚ್‌ 17) ನೀಡಿದೆ. ಏಕೆಂದರೆ ಇಂದು ವಿಶ್ವ ನಿದ್ದೆಯ ದಿನವಾಗಿದೆ. ಈ ಸ್ಟಾರ್ಟಪ್‌ ಹೋಮ್‌ & ಸ್ಲೀಪ್‌ ಸಲ್ಯೂಷನ್ಸ್‌ ನೀಡುತ್ತಿದ್ದು, ಗೃಹೋಪಕರಣಗಳ ಮಾರಾಟ ವಲಯದಲ್ಲಿ ( Home furnishings products) ವಹಿವಾಟು ನಡೆಸುತ್ತಿದೆ. ಈ ಸ್ಟಾರ್ಟಪ್‌ ಲಿಂಕ್ಡ್‌ ಇನ್‌ ಮೂಲಕ ಅಚ್ಚರಿಯ ಇ-ಮೇಲ್‌ನ ಸ್ಕ್ರೀನ್‌ಶಾಟ್‌ ಅನ್ನು ರವಾನಿಸಿದೆ.

ಈ ಇ-ಮೇಲ್‌ನಲ್ಲಿ ಅಚ್ಚರಿಯ ರಜಾ ದಿನ- ನಿದ್ದೆಯ ಕೊಡುಗೆ ಎಂಬ ಶೀರ್ಷಿಕೆ ಇದೆ. ವೇಕ್‌ಫಿಟ್‌ ಅಂತಾರಾಷ್ಟ್ರೀಯ ರಜಾ ದಿನವನ್ನು ಶುಕ್ರವಾರ ಘೋಷಿಸಿದೆ. ಇದು ಎಲ್ಲ ಉದ್ಯೋಗಿಗಳಿಗೆ ಐಚ್ಛಿಕ ರಜಾ ದಿನವಾಗಿದೆ. ನಿದ್ದೆಯ ದಿನವನ್ನು ನಾವು ಹಬ್ಬದ ದಿನ ಎಂದು ಪರಿಗಣಿಸಿದ್ದೇವೆ. ನೀವು ಯಾವುದೇ ಇತರ ದಿನದಲ್ಲೂ ಈ ದಿನದ ರಜೆಯನ್ನು ತೆಗೆದುಕೊಳ್ಳಬಹುದು ಎಂದು ವೇಕ್‌ಫಿಟ್‌ ಸಲ್ಯೂಷನ್ಸ್‌ ತನ್ನ ಉದ್ಯೋಗಿಗಳಿಗೆ ಇ-ಮೇಲ್‌ ಮೂಲಕ ತಿಳಿಸಿದೆ.

ಇಂಡಿಯನ್‌ ಸ್ಲೀಪ್‌ ಸ್ಕೋರ್‌ಕಾರ್ಡ್‌ ಪ್ರಕಾರ 2022ರಲ್ಲಿ ಉದ್ಯೋಗಿಗಳು ಕೆಲಸದ ವೇಳೆ ನಿದ್ದೆಯ ಮಂಪರಿಗೆ ಒಳಗಾಗುವ ಪ್ರವೃತ್ತಿಯಲ್ಲಿ 21% ಏರಿಕೆಯಾಗಿದೆ. ನಿದ್ರಾಹೀನತೆಯ ಸಮಸ್ಯೆಯನ್ನು ತಪ್ಪಿಸಲು ನಿದ್ದೆಯ ಕೊಡುಗೆ ಕೊಡುವುದು ಉತ್ತಮ ಎಂದು ಸ್ಟಾರ್ಟಪ್‌ ಇ-ಮೇಲ್‌ ಮೂಲಕ ತಿಳಿಸಿದೆ.

ವಿಶ್ವ ನಿದ್ದೆಯ ದಿನವನ್ನು ನಿದ್ದೆಯ ಮಹತ್ವವನ್ನು ಪ್ರಚುರಪಡಿಸಲು ಬಳಸಿಕೊಳ್ಳಲಾಗುತ್ತಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯ ನಿದ್ದೆ ಅವಶ್ಯಕವಾಗಿದೆ. ಗುಣಮಟ್ಟದ ನಿದ್ದೆ ಕೂಡ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿದ್ದೆ ಮಾಡಲು ಒಂದು ದಿನ ರಜೆ ನೀಡುವುದು ಉದ್ಯೋಗಿಗಳನ್ನು ಆರೋಗ್ಯದ ಕಾಳಜಿ ವಹಿಸುವಂತೆಯೂ ಮಾಡುತ್ತದೆ ಎಂದು ಸ್ಟಾರ್ಟಪ್‌ ವಿವರಿಸಿದೆ. ಕಳೆದ ವರ್ಷವೂ ವೇಕ್‌ಫಿಟ್‌ ಸಲ್ಯೂಷನ್ಸ್‌ ಉದ್ಯೋಗಿಗಳಿಗೆ ಕೆಲಸ ನಡುವೆ 30 ನಿಮಿಷಗಳ ಕಾಲ ನಿದ್ದೆ ಮಾಡಲು ಅವಕಾಶ ಕಲ್ಪಿಸಿತ್ತು.

ವೇಕ್‌ಫಿಟ್‌ನ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅವರು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ, ಕಂಪನಿಯಲ್ಲಿ ಉದ್ಯೋಗಿಗಳಿಗೆ ಮಧ್ಯಾಹ್ನ 2ರಿಂದ 2.30 ತನಕ ಅಧಿಕೃತವಾಗಿ ನಿದ್ದೆಯ ಅವಧಿಯನ್ನು ಘೋಷಿಸಲಾಗಿದೆ. ಕಚೇರಿಯ ಪ್ರಶಾಂತ ಕೊಠಡಿಗಳಲ್ಲಿ ನಿದ್ರಿಸಬಹುದು ಎಂದಿದ್ದಾರೆ. ಉದ್ಯೋಗಿಗಳು ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಇದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Exit mobile version