ನವದೆಹಲಿ: ಮೈಕ್ರೋಸಾಫ್ಟ್ (Microsoft) ಒಡೆತನದ ಚಾಟ್‌ಜಿಪಿಟಿ (ChatGPT) ಮಾನವ ಉದ್ಯೋಗಗಳಿಗೆ ಕುತ್ತು ತರಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ಈಗ ನಿಜವಾಗುತ್ತಿದೆ. ಅಮೆರಿಕದ ಹಲವು ಕಂಪನಿಗಳು, ಕೆಲಸಗಾರರ ಬದಲಿಗೆ ಎಐ ಚಾಟ್‌ಬಾಟ್‌ಗಳನ್ನು ನಿಯೋಜಿಸುತ್ತಿದ್ದಾರೆ. ಈ ಮೂಲಕ ಸಾವಿರಾರು ಡಾಲರ್ ಹಣ ಉಳಿತಾಯ ಮಾಡುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಉದ್ಯೋಗ ಸಲಹಾ ವೇದಿಕೆಯಾಗಿರುವ Resumebuilder.com ಸಾವಿರ ಬಿಸಿನೆಸ್‌ಮನ್‌ಗಳನ್ನು ಮಾತನಾಡಿಸಿ ಈ ಸಮೀಕ್ಷೆಯನ್ನು ಸಿದ್ಧಪಡಿಸಿದೆ. ಅಂದರೆ, ಅಮೆರಿಕದ ಅರ್ಧದಷ್ಟು ಕಂಪನಿಗಳು ಈ ಸಮೀಕ್ಷೆಯ ಭಾಗವಾಗಿದ್ದವು. ಈ ಪೈಕಿ ಹಲವು ಕಂಪನಿಗಳು ಈಗಾಗಲೇ, ಕೆಲಸಗಾರರ ಬದಲಿಗೆ ಚಾಟ್‌ಜಿಪಿಟಿಯನ್ನು ನಿಯೋಜಿಸಿದ್ದು, ಸಾವಿರಾರು ಡಾಲರ್ ಹಣವನ್ನು ಉಳಿತಾಯ ಮಾಡುತ್ತಿವೆ.
ಚಾಟ್‌ಜಿಪಿಟಿ ಬಳಕೆಗೆ ಸಂಬಂಧಿಸಿದಂತೆ ಬಹಳಷ್ಟು ಉತ್ಸಾಹವಿದೆ ಎಂದು Resumebuilder.com ಮುಖ್ಯ ವೃತ್ತಿ ಸಲಹೆಗಾರರಾದ ಸ್ಟೇಸಿ ಹಾಲರ್ ಹೇಳಿದ್ದಾರೆ. ಈ ಹೊಸ ತಂತ್ರಜ್ಞಾನದ ಬಳಕೆಯು ಕೆಲಸದ ಸ್ಥಳದಲ್ಲಿ ಹೆಚ್ಚುತ್ತಿದೆ. ಕಾರ್ಮಿಕರು ತಮ್ಮ ಪ್ರಸ್ತುತ ಕೆಲಸದ ಜವಾಬ್ದಾರಿಗಳ ಮೇಲೆ ಇದು ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ಯೋಚಿಸಬೇಕು. ಈ ಸಮೀಕ್ಷೆಯ ಫಲಿತಾಂಶಗಳು ಉದ್ಯೋಗದಾತರು ಚಾಟ್‌ಜಿಪಿಟಿಯನ್ನು ಬಳಸಿಕೊಂಡು ಕೆಲವು ಕೆಲಸದ ಜವಾಬ್ದಾರಿಗಳನ್ನು ಸುಗಮಗೊಳಿಸಲು ಬಯಸುತ್ತಿದ್ದಾರೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ChatGPT: ನಟ ಶಿವಣ್ಣನಿಗೆ ‘ದಿ ಲೆಗಸಿ’ ಚಿತ್ರಕತೆ ಬರೆದ ಚಾಟ್‌ಜಿಪಿಟಿ! ಹೇಗಿದೆ ಈ ಸಿನಿಮಾ ಕತೆ?
ಅಮೆರಿಕನ್ ಕಂಪನಿಗಳು ಹಲವಾರು ಉದ್ದೇಶಗಳಿಗಾಗಿ ಚಾಟ್‌ಜಿಪಿಟಿಯನ್ನು ಬಳಸುತ್ತಿವೆ. ಶೇ. 66 ಕೋಡ್ ಬರೆಯಲು, ಶೇ.58 ಗದ್ಯ ಮತ್ತು ಕಂಟೆಂಟ್ ರಚಿಸಲು, ಶೇ.57 ಗ್ರಾಹಕ ಸೇವೆಗಾಗಿ ಮತ್ತು ಶೇ.52 ಸಭೆಯ ಸಾರಾಂಶಗಳು ಮತ್ತು ಇತರ ಪೇಪರ್‌ಗಳಿಗಾಗಿ ಬಳಕೆಯಾಗುತ್ತಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.