ಬೆಂಗಳೂರು: ನಿರುದ್ಯೋಗಿ ಯುವಕರಿಗೆ ಯುವ ನಿಧಿ ಕೊಡುವ ಜತೆಗೆ ಇವರಿಗೆ ಉದ್ಯೋಗ ಸೃಷ್ಟಿಸುವ ಮತ್ತು ಉದ್ಯೋಗ ಮಾಡಲು ಅಗತ್ಯವಾದ ತರಬೇತಿಗಳನ್ನೂ ನೀಡಲಾಗುವುದು. ಪ್ರತಿ ವರ್ಷ ಉದ್ಯೋಗ ಮೇಳ (Job Fair) ನಡೆಸಲಾಗುವುದು. ಹೊಸ ಹೊಸ ಉದ್ಯೋಗ ಸೃಷ್ಟಿ ಮತ್ತು ತರಬೇತಿಗಾಗಿ ಈಗಿರುವ ಜಿಟಿಟಿಸಿ (GTTC – Government Tool Room & Training Centre) ಗಳ ಸಂಖ್ಯೆಯನ್ನು ಇನ್ನಷ್ಟು ಜಿಟಿಟಿಸಿಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಅರಮನೆ ಮೈದಾನದಲ್ಲಿ ನಡೆದ ಬೃಹತ್ ಯುವ ಸಮೃದ್ಧಿ ಸಮ್ಮೇಳನ ಮತ್ತು ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿರುದ್ಯೋಗ ದೇಶದ ಪ್ರಮುಖ ಸಮಸ್ಯೆಯಾಗಿದೆ. ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ಬೃಹತ್ತಾಗಿ ಬೆಳೆದಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಭರವಸೆ ನೀಡಿ ಯುವ ಸಮೂಹದ ಮತ ಗಳಿಸಿದರು. ಈ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಇರುವ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ. ಹೀಗಾಗಿ ಪ್ರತಿ ವರ್ಷ ನಿರುದ್ಯೋಗ ಪ್ರಮಾಣವು ಬೃಹತ್ತಾಗಿ ಬೆಳೆಯುತ್ತಾ ಶೇ. 8.40 ಏರಿಕೆಯಾಗಿದೆ ಎಂದು ವಿವರಿಸಿದರು.
ನಾವು ಯುವ ನಿಧಿಯನ್ನೂ ಕೊಡ್ತೀವಿ. ಉದ್ಯೋಗವನ್ನೂ ಸೃಷ್ಟಿಸುತ್ತೇವೆ, ಉದ್ಯೋಗಕ್ಕೆ ಬೇಕಾದ ಕೌಶಲ್ಯ ತರಬೇತಿಯನ್ನೂ ನೀಡುತ್ತೇವೆ. ಇದು ನಮ್ಮ ಸರ್ಕಾರ ವಿದ್ಯಾರ್ಥಿ ಯುವಜನರಿಗೆ ಮಾಡುವ ಅಭಯ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ್ ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು, ನೂರಾರು ಉದ್ಯಮಿಗಳು, ಸುಮಾರು 80 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಗುರಿ, ಕಾರ್ಯಯೋಜನೆ ಏನು?
- ರಾಜ್ಯ ಸರ್ಕಾರವು ಯುವ ಸಮೃದ್ಧಿ ಸಮ್ಮೇಳನದ – 2024 ಅನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆಯೋಜಿಸಲಾಗಿದೆ.
- ಕರ್ನಾಟಕದಲ್ಲಿ ಅಂದಾಜು ಪ್ರತಿ ವರ್ಷ ಪಿ.ಯು.ಸಿ.ಯಲ್ಲಿ 932450, ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 62437, ಪಾಲಿಟೆಕ್ನಿಕ್ನಲ್ಲಿ 48153, ಪದವಿಯಲ್ಲಿ 480000 ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ.
- ಇವರಲ್ಲಿ ನಿರುದ್ಯೋಗದ ಶೇಕಡಾವಾರು ದರ ಪಿರಿಯೋಡಿಕ್ ಲೇಬರ್ ಫೋರ್ಸ್ ಸರ್ವೆ ಪ್ರಕಾರ ಶೇ. 2.4 ಇದೆ.
- ಹೀಗಾಗಿ ರಾಜ್ಯದಲ್ಲಿನ ನಿರುದ್ಯೋಗಿ ಯುವಜನತೆಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮುಖೇನ ಇಂದಿನ ಯುವಜನತೆಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವುದರೊಂದಿಗೆ ಈ ಮೂಲಕ ಕೌಶಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸುವುದಾಗಿದೆ.
- ರಾಜ್ಯದ ಯುವ ಜನತೆಗೆ ಉಚಿತ ಅಲ್ಪಾವಧಿ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯಮಶೀಲತೆಯ ನೆರವು ಹಾಗೂ ಜೀವನೋಪಾಯಕ್ಕೆ ಅಡಿಪಾಯವನ್ನು ರೂಪಿಸಿ ಮೌಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸುವ ಗುರಿ ಹೊಂದಲಾಗಿದೆ.
- ಈ ಉದ್ಯೋಗ ಮೇಳದಲ್ಲಿ 1,10,000ಕ್ಕೂ ಅಧಿಕ ಉದ್ಯೋಗವಕಾಶಗಳು ಇದ್ದು, 600ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಿವೆ
- ಈ ಸರ್ಕಾರದ ಅವಧಿವರೆಗೆ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
- ಪ್ರಸ್ತುತ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ವರ್ಷಕ್ಕೆ ಒಮ್ಮೆ ಆಯೋಜಿಸಲಾಗುವುದು. ಜತೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ
- ಈ ಬಜೆಟ್ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುವನಿಧಿಗೆ ನೋಂದಣಿಯಾದ ಅಭ್ಯರ್ಥಿಗಳಲ್ಲಿ ಕನಿಷ್ಠ 25,000 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಘೋಷಣೆ ಮಾಡಲಾಗಿದೆ.
- ಅದರಂತೆ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಗಳ ಮೂಲಕ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು. ಕಲಿಕೆ ಜತೆಗೆ ಕೌಶಲ್ಯ ಕಾರ್ಯಕ್ರಮ ಅನುಷ್ಠಾನಗೊಳಿಸಲು ಘೋಷಿಸಲಾಗಿದೆ.
- ರಾಜ್ಯದ ಆಯ್ದ 62 ಕಾಲೇಜುಗಳಲ್ಲಿನ ಬಿ.ಎ/ ಬಿ.ಕಾಂ/ ಬಿ.ಬಿ.ಎ/ ಬಿ.ಎಸ್.ಸಿ/ ಪದವಿಯ 5 & 6 ನೇ ಸೆಮಿಸ್ಟರ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ 28 ವಿವಿಧ ಕೈಗಾರಿಕಾ ಬೇಡಿಕೆ ಆಧಾರಿತ ಅಲ್ಪಾವಧಿ ತರಬೇತಿ ನೀಡಲಾಗುವುದು.
- ನೇರವಾಗಿ ಕೈಗಾರಿಕೆ/ ಉದ್ಯಮಗಳ ಪ್ರಮಾಣಪತ್ರವನ್ನು ನೀಡುವ ಮುಖೇನ ಉದ್ಯೋಗಾವಕಾಶವನ್ನು ಕಲ್ಪಿಸಲು 102 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 150 ಉನ್ನತೀಕರಿಸಿದ ಸರ್ಕಾರಿ ಐಟಿಐ, 32 ಜಿಟಿಟಿಸಿ ಮತ್ತು 8 ಕೆಜಿಟಿಟಿಐಗಳ ಮೂಲಕ ತರಬೇತಿ ನೀಡಲು ಕ್ರಮ
- ಕರ್ನಾಟಕ ಕರಿಯರ್ ಪ್ಲಾನಿಂಗ್ ಕಾರ್ಯಕ್ರಮದಡಿ “ನನ್ನ ವೃತ್ತಿ, ನನ್ನ ಆಯ್ಕೆ” ಎಂಬ ಧೇಯವಾಕ್ಯದೊಂದಿಗೆ 8 ನೇತರಗತಿಯಿಂದ 12 ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಇದು 150 ಎನ್.ಎಸ್.ಕ್ಯೂ.ಎಫ್ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುತ್ತಿದೆ.
- ಇ ಕೌಶಲ್ಯ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಎಲ್.ಎಂ.ಎಸ್) ಭವಿಷ್ಯದ ಕೌಶಲ್ಯಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30ಕ್ಕೂ ಹೆಚ್ಚು ಕೋರ್ಸ್ಗಳನ್ನು ಕಲಿಯಲು ಕೌಶಲ್ಯ ಆಕಾಂಕ್ಷಿಗಳಿಗೆ ಆನ್ಲೈನ್ ವೇದಿಕೆಯನ್ನು ಒದಗಿಸಲಾಗಿದೆ.