ನವ ದೆಹಲಿ: ಇ-ಕಾಮರ್ಸ್ ಕಂಪನಿಗಳು ಮುಂಬರುವ ಶಾಪಿಂಗ್ ಸೀಸನ್‌ಗೆ ಪೂರ್ವಭಾವಿಯಾಗಿ ಡೆಲಿವರಿ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಯನ್ನು (E-commerce jobs) ಚುರುಕುಗೊಳಿಸಿವೆ. ಹಬ್ಬದ ಸಂದರ್ಭ ಡೆಲಿವರಿ ಸಿಬ್ಬಂದಿಯ ಕೊರತೆ ಉಂಟಾದರೆ ವ್ಯಾಪಾರ ವಹಿವಾಟಿಗೆ ಧಕ್ಕೆಯಾಗುವ ಅಪಾಯ ಇರುವುದರಿಂದ ಇ-ಕಾಮರ್ಸ್ ಕಂಪನಿಗಳು ಈಗಲೇ ನೇಮಕಾತಿಯನ್ನು ಚುರುಕುಗೊಳಿಸಿವೆ.
ಸೆಪ್ಟೆಂಬರ್‌ನಲ್ಲಿ ಹಬ್ಬಗಳ ಅವಧಿಯ ಶಾಪಿಂಗ್ ಸೀಸನ್ ಆರಂಭವಾಗಲಿದೆ. ಕಳೆದ ಕೆಲ ತಿಂಗಳುಗಳಿಂದ ಏರುಗತಿಯಲ್ಲಿದ್ದ ನಿರುದ್ಯೋಗದ ಮಟ್ಟ ಜೂನ್‌ನಲ್ಲಿ ೭%ಕ್ಕಿಂತ ಕೆಳಕ್ಕೆ ಇಳಿದಿತ್ತು.
ಹಬ್ಬಗಳ ಸೀಸನ್ ಸಮೀಪಿಸುತ್ತಿರುವುದರಿಂದ ಅರೆಕಾಲಿಕ ಡೆಲಿವರಿ ಸಿಬ್ಬಂದಿ ನೇಮಕಾತಿ ಚುರುಕಾಗಿದೆ ಎಂದು ಬಿಗ್ ಬಾಸ್ಕೆಟ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಟಿ.ಕೆ ಬಾಲಕುಮಾರ್ ತಿಳಿಸಿದ್ದಾರೆ. ಫ್ಲಿಪ್ ಕಾರ್ಟ್, ಅಮೆಜಾನ್, ಅಜಿಯೊ, ಜೆಪ್ಟೊ, ಸ್ವಿಗ್ಗಿ, ಜೊಮ್ಯಾಟೊ, ಬಿಗ್ ಬಾಸ್ಕೆಟ್, ಡೊನ್ಜೊ, ನೈಕಾ ಇತ್ಯಾದಿ ಇ-ಕಾಮರ್ಸ್ ಕಂಪನಿಗಳು ನೇಮಕಾತಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಇದರ ಪರಿಣಾಮ ಈ ವರ್ಷ ಶಾಪಿಂಗ್ ಸೀಸನ್‌ನಲ್ಲಿ ೧೦೫,೦೦೦ ಡೆಲಿವರಿ ಏಜೆಂಟ್‌ಗಳ ಉದ್ಯೋಗ ಸೃಷ್ಟಿಯಾಗುವ ಅಂದಾಜು ಇದೆ.