Site icon Vistara News

Google Layoff: 8 ತಿಂಗಳ ಗರ್ಭಿಣಿಯನ್ನು ವಜಾಗೊಳಿಸಿದ ಗೂಗಲ್‌, ಹೃದಯ ಚೂರಾದ ಅನುಭವ ಎಂದ ಉದ್ಯೋಗಿ

Google

ವಾಷಿಂಗ್ಟನ್‌: ಒಬ್ಬ ಉದ್ಯೋಗಿಯ ಜೀವನದ ಕೆಟ್ಟ ಅನುಭವ ಎಂದರೆ ಆತ ಅಥವಾ ಆಕೆ ಕೆಲಸದಿಂದ ವಜಾಗೊಳ್ಳುವುದು. ಕೊರೊನಾ ಬಿಕ್ಕಟ್ಟಿನ ನಂತರ ಅಮೆಜಾನ್‌, ಮೈಕ್ರೋಸಾಫ್ಟ್‌, ಗೂಗಲ್‌, ಟ್ವಿಟರ್‌ನಂತಹ ಜಾಗತಿಕ ದೈತ್ಯ ಕಂಪನಿಗಳೇ ಸಾವಿರಾರು ನೌಕರರನ್ನು ವಜಾಗೊಳಿಸಿದ್ದು, ನೂರಾರು ನೌಕರರು ಇಂತಹ ಕೆಟ್ಟ ಅನುಭವವನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಗೂಗಲ್‌ ಕಂಪನಿಯು (Google Layoff) ಎಂಟು ತಿಂಗಳ ಗರ್ಭಿಣಿಯನ್ನು ವಜಾಗೊಳಿಸಿದ್ದು, ಮಹಿಳೆಯು ಲಿಂಕ್ಡ್‌ಇನ್‌ನಲ್ಲಿ ನೋವು ತೋಡಿಕೊಂಡಿದ್ದಾರೆ.

ಹೌದು, ಗೂಗಲ್‌ ಕೆಲ ದಿನಗಳ ಹಿಂದಷ್ಟೇ ರಾತ್ರೋರಾತ್ರಿ ವಜಾಗೊಳಿಸಿದ 12 ಸಾವಿರ ಉದ್ಯೋಗಿಗಳಲ್ಲಿ ಗರ್ಭಿಣಿಯೂ ಒಬ್ಬರಾಗಿದ್ದಾರೆ. ಅವರು ಲಿಂಕ್ಡ್‌ಇನ್‌ನಲ್ಲಿ ವಜಾಗೊಂಡ ಕುರಿತು ಅಳಲು ತೋಡಿಕೊಂಡಿದ್ದಾರೆ. “ಬೆಳಗಿನ ಜಾವ 3 ಗಂಟೆಗೆ ನಾನು ವಜಾಗೊಂಡಿರುವುದು ಗೊತ್ತಾಯಿತು. ಇದರಿಂದ ನನ್ನ ಹೃದಯವೇ ಒಡೆದಂತಾಯಿತು. ನನ್ನ ಕೈಗಳು ನಡುಗಲು ಆರಂಭಿಸಿದವು. ಇಂತಹ ಸಂದರ್ಭದಲ್ಲಿ ವಜಾ ಏಕೆ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡೆ” ಎಂದು ಕ್ಯಾಲಿಫೋರ್ನಿಯಾ ಮೂಲದ ಪ್ರೋಗ್ರಾಂ ಮ್ಯಾನೇಜರ್‌ ಆಗಿರುವ ಕ್ಯಾಥೆರಿನ್‌ ವೋಂಗ್‌ ಅವರು ನೋವು ಹಂಚಿಕೊಂಡಿದ್ದಾರೆ.

“ನಾನು ಎಂಟು ತಿಂಗಳ ಗರ್ಭಿಣಿಯಾದ ಕಾರಣ ಕೆಲವೇ ದಿನದಲ್ಲಿ ನನಗೆ ಹೆರಿಗೆ ರಜೆ ಸಿಗುವುದಿತ್ತು. ನಕಾರಾತ್ಮಕ ಚಿಂತನೆಗಳನ್ನು ನನ್ನ ತಲೆಯಲ್ಲಿ ಬಿಟ್ಟುಕೊಳ್ಳಬಾರದು ಎಂದಿದ್ದೆ. ಆದರೆ, ಕೆಲಸದಿಂದ ವಜಾಗೊಂಡಿರುವುದು ನೋಡಿ ತಡೆದುಕೊಳ್ಳಲು ಆಗಲಿಲ್ಲ. ನಾನು ನನ್ನ ಕಂಪನಿಯನ್ನು ತುಂಬ ಪ್ರೀತಿಸುತ್ತಿದ್ದೆ, ತಂಡವನ್ನು ಇಷ್ಟಪಡುತ್ತಿದ್ದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Google lay off : ಗೂಗಲ್‌ ಮಾತೃಸಂಸ್ಥೆ ಆಲ್ಫಬೆಟ್‌ನಲ್ಲಿ 12,000 ಉದ್ಯೋಗಿಗಳ ವಜಾ

Exit mobile version